ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರು ಒಂದು ಕಡೆ ನೆಲೆ ನಿಂತವರಲ್ಲ. ಒಂದೊಂದು ಚುನಾವಣೆಯಲ್ಲೂ ಒಂದೊಂದು ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ. ಅವರು ಮೂಲತಃ ಶಿಕ್ಷಕರಲ್ಲ, ವಿವೇಕಾನಂದರವರು ಶಿಕ್ಷಕರ ಕ್ಷೇತ್ರಕ್ಕೆ ಹೊಸಮುಖವಾಗಿದ್ದರೂ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆಂದು ಮುಂದೆ ಬಂದಿದ್ದಾರೆ. ಅವರಿಗೆ ಶಿಕ್ಷಕರು ಆಶೀರ್ವಾದ ಮಾಡಿ ಒಂದು ಅವಕಾಶ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ
ಮನವಿ ಮಾಡಿದರು.
ಮಂಡ್ಯ ಹೊರವಲಯದದ ಅಮರಾವತಿ ಹೋಟೆಲ್‌ನಲ್ಲಿ ಜೆಡಿಎಸ್ ಮಖಂಡರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ ೩ ರಂದು ನಡೆಯುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ಕೆ.ವಿವೇಕಾನಂದರವರಿಗೆ ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡುವ ಮೂಲಕ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾ ಬಂದಿದ್ದಾರೆ. ಹೀಗಾಗಿ ವಿವೇಕಾನಂದ ಅವರನ್ನು ಬೆಂಬಲಿಸಬೇಕು ಎಂದರು.
ಚುನಾವಣೆಗೆ ನಾನು ಆಕಾಂಕ್ಷಿತನಾಗಿದ್ದರೂ ವರಿಷ್ಠರು ವಿವೇಕಾನಂದರವರಿಗೆ ಅವಕಾಶ ನೀಡಿದ್ದಾರೆ. ಹಣವಿಲ್ಲದ ಕಾರಣ ನನಗೆ ಟಿಕೆಟ್ ನಿರಾಕರಿಸಿದ್ದಾರೆ ಎಂಬುದು ಸರಿಯಲ್ಲ.ನನಗೆ ಟಿಕೆಟ್ ಕೊಟ್ಟರೆ ಚುನಾವಣೆಯಲ್ಲಿ ಸಂಪೂರ್ಣವಾಗಿ ಹಣ ಖರ್ಚು ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ದೇವೇಗೌಡರು ವಿವೇಕಾನಂದರಿಗೆ ಅವಕಾಶ ನೀಡುತ್ತೇನೆ. ನಿನಗೆ ಬೇರೆ ಅವಕಾಶ ಕೊಡುತ್ತೇನೆ ಎಂದು ಹೇಳಿದ್ದಾರೆ. ಹಾಗಾಗಿ ನಾನು ಕಣದಿಂದ ಹಿಂದೆ ಸರಿದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೂ ಶಿಕ್ಷಕರಿಗೂ ಆಗಿಬರುವುದಿಲ್ಲ.ಕಾಂಗ್ರೆಸ್ ಪಕ್ಷ ಎಂದೂ ಶಿಕ್ಷಕರ ಪರವಾಗಿ ನಿಲ್ಲಲಿಲ್ಲ. ದೇವೇಗೌಡರು ಗುತ್ತಿಗೆ ಶಿಕ್ಷಕರನ್ನು ಕಾಯಂ ಮಾಡಿದ್ದರು. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರು ಶಿಕ್ಷಕರ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಶಾಲಾ ಕಾಲೇಜುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆದಿದ್ದು, ಶಿಕ್ಷಕರ ನೇಮಕಾತಿ ಹಾಗೂ ಭರ್ತಿ ಮಾಡಿದ್ದು ಆ ಕಾಲದಲ್ಲಿಯೇ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು,
ಡಿ.ಸಿ. ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್ ಗೌಡ, ಡಾ.ಕೆ.ಅನ್ನದಾನಿ, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ಧರಾಮೇಗೌಡ ಮುಖಂಡರಾದ ಅಮರಾವತಿ ಚಂದ್ರಶೇಖರ್, ಬಿ.ಆರ್.ರಾಮಚಂದ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.