ಸುಮಲತಾ ಅಂಬರೀಶ್ ಸ್ಪರ್ಧೆ:ದಳಪತಿಗಳಿಗಿರುವ ಆತಂಕ ಏನು
ಈ ಸಾರಿಯ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿಯೆ ಸಿದ್ದ ಎಂದು ಸಂಸದೆ ಸುಮಲತಾ ಅಂಬರೀಶ್ ಪಟ್ಟಾಗಿ ಕೂತಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಳಗೊಳಗೆ ಮಂಡ್ಯ ಬೆಲ್ಲ ತಿಂದಷ್ಟೆ ಖುಷಿಯ ಸಂಗತಿಯಾದರೂ ಮೈತ್ರಿ ಪಕ್ಷ ಜ್ಯಾದಳಕ್ಕೆ ಮತ್ತೆ 2019ರ ಫಲಿತಾಂಶದ ನೆನಪಾಗುವಂತೆ ಮಾಡುತ್ತಿದೆ.
2019ರಿಂದ ಈವರೆಗೆ ಕಾವೇರಿ ನದಿಯಲ್ಲಿ ಸಾಕಷ್ಟು ನೀರು ತಮಿಳುನಾಡಿಗೆ ಹರಿದುಹೋಗಿದೆ.ಅಂತೆಯೆ ಮಂಡ್ಯದ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಕಂಡಿವೆ.ಅವತ್ತಿಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲು ಜ್ಯಾದಳ ಶಾಸಕರಿದ್ದರು.ಸ್ವತಃ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.ಭರ್ತಿ ಒಂದು ಕಾಲು ಲಕ್ಷ ಚಿಲ್ಲರೆ ಮತಗಳ ಅಂತರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲನ್ನಪ್ಪಿದ್ದರು.ಈಗ ಮಂಡ್ಯ ಜಿಲ್ಲೆಯ ರಾಜಕಾರಣದ ಚಕ್ರ ಒಂದು ಸುತ್ತು ತಿರುಗಿ ಬಂದಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಹೇಳಹೆಸರಿಲ್ಲದಂತೆ ಸಾವಿರಾರು ಮತಗಳ ಅಂತರದಲ್ಲಿ ಸೋಲನ್ನಪ್ಪಿದ್ದ ಚಲುವರಾಯಸ್ವಾಮಿ ನರೇಂದ್ರ ಸ್ವಾಮಿ ರಮೇಶ್ ಬಾಬು ಮರಳಿ ವಿಧಾನಸಭೆಯ ಮೂರನೆ ಮಹಡಿ ತಲುಪಿಕೊಂಡಿದ್ದಾರೆ.ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಂಟಕ್ಕೆ ಕಾಂಗ್ರೆಸ್ ಬೆಂಬಲಿತ ರೈತಸಂಘ ಸೇರಿದಂತೆ ಏಳು ಶಾಸಕರಿದ್ದಾರೆ.ಜತೆಗೆ ಗ್ಯಾರಂಟಿಗಳ ಬೆಂಬಲ ಕಡೆಗೆ ಅಹಿಂದ ಬೆಂಬಲ ಅಚಲ ಎಂಬ ನಂಬಿಕೆಯಿಂದ ಕಾಂಗ್ರೆಸ್ ಬೀಗುತ್ತಿರುವ ಹೊತ್ತಿನಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ಸಹಜವಾಗಿಯೆ ದಳಪತಿಗಳನ್ನು ಕಂಗೆಡಿಸಿದೆ.
ಹಾಗಿದ್ದರೆ ಜಿಲ್ಲೆಯಲ್ಲಿ ಸುಮಲತಾ ಅಂಬರೀಶ್ ಸಾಮರ್ಥ್ಯ ಏನು ?ಹಾಲಿ ಸಂಸದರ ಸ್ಪರ್ಧೆ ಜ್ಯಾದಳ ಅಭ್ಯರ್ಥಿಯನ್ನು ಮಕಾಡೆ ಮಲಗಿಸಬಹುದೆ ಎಂದರೆ ಅದು ಅಷ್ಟು ಸುಲಭದ ಮಾತೇನಲ್ಲ.ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಬೆನ್ನಿಗೆ ನಿಂತ ಕಾಂಗ್ರೆಸ್ ಸ್ವತಃ ಸ್ಟಾರ್ ಚಂದ್ರ ಎಂಬ ದುಡ್ಡಿನ ಗಣಿಯನ್ನು ತನ್ನ ಅಭ್ಯರ್ಥಿಯಾಗಿ ಸಿದ್ದ ಮಾಡಿಕೊಂಡಿದೆ.ಕಾಂಗ್ರೆಸ್ ಯಾವುದೆ ಕಾರಣಕ್ಕು ಸುಮಲತಾ ಬೆನ್ನಿಗೆ ನಿಲ್ಲುವುದಿಲ್ಲ.ಬಿಜೆಪಿ ಸಹ ಜ್ಯಾದಳದೊಂದಿಗೆ ಮೈತ್ರಿಯಲ್ಲಿದೆ.ಈ ಐದು ವರ್ಷಗಳಲ್ಲಿ ಜ್ಯಾದಳದೊಂದಿಗೆ ಬೀದಿ ಜಗಳದಲ್ಲಿ ಕಾಲತುಂಬಿಸಿದ ಸಂಸದೆಯೊಂದಿಗೆ ನಿಂತು ಚುನಾವಣಾ ಕಣದಲ್ಲಿ ಕಾದಾಡುವ ಯಾವ ಸ್ವಾಭಿಮಾನಿಗಳು ಕಾಣುತ್ತಿಲ್ಲ.ಇಲ್ಲಿ ಇರುವ ಸ್ವಾಭಿಮಾನಿಗಳಲ್ಲಿ ಎರಡು ಬಣವಿದೆ.ಒಂದು ನೋಂದಾಯಿತ ಸ್ವಾಭಿಮಾನಿಗಳ ಬಣ ಅದಕ್ಕೆ ಬೇಲೂರು ಸೋಮಶೇಖರ ಹನಕೆರೆ ಶಶಿ ಹಾಲಳ್ಳಿ ಅರವಿಂದ ರೆ ನಾಯಕರು ಇನ್ನುಳಿದವರೆಲ್ಲ ನೊಂದ ಸ್ವಾಭಿಮಾನಿಗಳು.ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹಿರಂಗವಾಗಿ ಸುಮಲತಾ ಸ್ಪರ್ಧೆಗೆ ಬೆನ್ನೆಲುಬಾಗಿ ನಿಂತ ಡಾ.ಎಚ್ ಎನ್ ರವೀಂದ್ರ ಈಗ ತಮ್ಮದೆ ದಾರಿ ಹಿಡಿದು ಹೊರಟಿದ್ದಾರೆ.ಈಗಿರುವಾಗ ಸುಮಲತಾರ ಸ್ಪರ್ಧೆಗೆ ಅದ್ಯಾವ ಶಕ್ತಿ ಬಲ ತುಂಬಬಲ್ಲದು.ದಳಪತಿಗಳು ಅದೇಕೆ ಅಷ್ಟು ಅಂಜಿದ್ದಾರೆ.ಸ್ವತ ಸುಮಲತಾರೊಂದಿಗೆ ರಾಜೀ ಸಂಧಾನದ ಮಾತು ಜ್ಯಾದಳದ ಪಡಶಾಲೆಯಿಂದ ಯಾಕೆ ಬರುತ್ತಿದೆ.ಅದಕ್ಕೆ ಕಾರಣವಿಷ್ಟೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಏಳು ಕ್ಷೇತ್ರಗಳಿಂದ ಬಿಜೆಪಿ ಪಡೆದ ಮತ ಭರ್ತಿ ಒಂದು ಮುಕ್ಕಾಲು ಲಕ್ಷ.ಅದರಲ್ಲಿ ಮದ್ದೂರಿನ ಸಾದೊಳಲು ಸ್ವಾಮಿ ಕೃಷ್ಣರಾಜ ಪೇಟೆಯ ನಾರಯಣಗೌಡ ಮಂಡ್ಯದ ಅಶೋಕ್ ಜಯರಾಂ ಇಂಡುವಾಳು ಸಚ್ಚಿ ಪ್ರಮುಖರು.ಸಚ್ಚಿ ಹೊರತುಪಡಿಸಿ ಇನ್ನುಳಿದವರು ಜ್ಯಾದಳದಿಂದ ಬಂಡೆದ್ದು ಬಿಜೆಪಿಗೆ ಹೋದವರು.ಜ್ಯಾದಳ ಬಿಜೆಪಿ ಕೂಡಿಕೆ ಮಾಡಿಕೊಂಡರೆ ಇವರ ಭವಿಷ್ಯವೇನು.ಹೋದೆಯಾ ಪಿಶಾಚಿ ಅಂದ್ರೆ ಬಂದೆ ಮತ್ತೆ ಬಿಜೆಪಿಯೊಂದಿಗೆ ಎಂಬಂತೆ ಆಗಿದೆ ಇವರ ಸ್ಥಿತಿ.ಇವರುಗಳು ತಮ್ಮದೆ ಕಾರಣಕ್ಕೆ ಸುಮಲತಾ ಬೆನ್ನಿಗೆ ನಿಂತು ಜ್ಯಾದಳದ ಅಭ್ಯರ್ಥಿಯನ್ನು ಢಂ ಎನಿಸುವ ಸಾಧ್ಯತೆಯು ಇದೆ.ಇದಕ್ಕೆ ಬೇಕಾದ ಭರ್ತಿ ಮದ್ದು ಗುಂಡು ಒದಗಿಸಲು ಕಾಂಗ್ರೆಸ್ ಸಹ ಸ್ಟಾರ್ ಚಂದ್ರು ಎಂಬ ತುಂಬಿದ ಜೋಬಿನ ಗಿರಾಕಿಯನ್ನೆ ಹಿಡಿದುಕೊಂಡು ಬಂದಿದೆ.
ಇದಲ್ಲದೆ ಕಳೆದ ಚುನಾವಣೆಯಲ್ಲಿ ಕನ್ನಡ ಸಿನಿಮಾ ನಟರಾದ ಜೋಡೆತ್ತುಗಳಂತೆ ಬಿಂಬಿತವಾದ ದರ್ಶನ್ ಯಶ್ ನಡುವೆ ಕುಮಾರಸ್ವಾಮಿಯ ಸಂಬಂದ ಅಷ್ಟಕಷ್ಟೆ ಆಗಿದೆ.ಈ ಸಾರಿ ಮೊದಲಿನಷ್ಟು ಅಲ್ಲದಿದ್ದರು ಈ ಜೋಡೆತ್ತುಗಳು ಅಂಬರೀಶ್ ಕುಟುಂಬದ ಮೇಲಿನ ನಿಷ್ಟೆಯ ಕಾರಣಕ್ಕೆ ಸುಮಲತಾ ಪರ ಬ್ಯಾಟಿಂಗ್ ಮಾಡುವುದು ನಿಶ್ಚಿತ.ಇದು ಕೂಡಾ ಜ್ಯಾದಳ ಅಭ್ಯರ್ಥಿಗೆ ಸರಿಯಾದ ಏಟು ಕೊಡುವ ಸಾಧ್ಯತೆಯಿದೆ.ಅಷ್ಟಕ್ಕು ಈವರೆಗೂ ಜ್ಯಾದಳ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.ಸುಮಲತಾ ಅಂಬರೀಶ್ ಸ್ಪರ್ಧೆ ಅಂತಿಮವಾದರೆ ಅದೇ ಜ್ಯಾದಳಕ್ಕೆ ಮುಳುಗು ನೀರು ತರಬಹುದು.ಸುಮಲತಾ ಸ್ಪರ್ಧೆಯನ್ನು ಸರಿಸದೆ ತೆನೆ ಅರಳುವುದು ಕಷ್ಟವಿದೆ.ಐದು ವರ್ಷ ಗುದ್ದಾಡಿದ ಜನತಾದಳದ ಕಾರ್ಯಕರ್ತರಿಗೆ ಬಿಜೆಪಿ ಜತೆಗೆ ಮಾತ್ರವಲ್ಲ ಸುಮಲತಾರೊಂದಿಗೂ ಸಂಧಾನಯಾತ್ರೆ ನಡೆಸಲೇಬೇಕಿದೆ