ವಿದ್ಯುತ್ ಕಂಬದಿಂದ ಬಿದ್ದು ಗದಗ ನಗರಸಭೆ ಕಾರ್ಮಿಕನಿಗೆ ತೀವ್ರ ಗಾಯ
ಗದಗ:ಜು.೨೬.ವಿದ್ಯುತ್ ಸಂಪರ್ಕ ಸರಿಪಡಿಸಲು ವಿದ್ಯುತ್ ಕಂಬ ಏರಿದ್ದ ಕಾರ್ಮಿಕನೊರ್ವ ವಿದ್ಯುತ್ ಆಘಾತದಿಂದ ನೆಲಕ್ಕೆ ಬಿದ್ದು ಮುಳೆ ಮುರಿದಿರುವ ಘಟನೆ ಗದಗ ನಗರಸಭೆ ವ್ಯಾಪ್ತಿಯಲ್ಲಿ ಜರುಗಿದೆ.
ಗದಗ ನಗರಸಭೆಯ ಬೀದಿ ದೀಪ ನಿರ್ವಹಣೆಯ ಹೊರಗುತ್ತಿಗೆ ಹಿಡಿದಿರುವ ಸಂಗಮೇಶ್ವರ ಎಲೆಕ್ಟ್ರಿಕ್ ಎಂಬ ಏಜೆನ್ಸಿ ಬಳಿ ಗುತ್ತಿಗೆ ವಿದ್ಯುತ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ್ ಲಾಡ್ (೪೮) ಸಹಾಯಕ ಮುತ್ತಣ್ಣ ಎಂಬುವರೊಂದಿಗೆ ವಾರ್ಡ್ ನಂ ೨೧ರ ಗಂಗಿಮಡಿ ಎಂಬಲ್ಲಿ ಬೀದಿ ದೀಪ ಸಂಪರ್ಕ ಸರಿಪಡಿಸುತ್ತಿದ್ದರು.
ಈ ವೇಳೆಯಲ್ಲಿ ವಿದ್ಯುತ್ ಆಘಾತದಿಂದ ಇಪ್ಪತ್ತು ಅಡಿ ಎತ್ತರದ ವಿದ್ಯುತ್ ಕಂಬದಿಂದ ಚಂದ್ರಕಾಂತ್ ನೆಲಕ್ಕೆ ಉರುಳಿಬಿದ್ದಿದ್ದಾರೆ.ಈ ಸಂಧರ್ಭದಲ್ಲಿ ಅವರ ಎಡಗೈನ ಮುಂಗೈ ಎಲುಬುಗಳು ಸಂಪೂರ್ಣ ಮುರಿದಿದ್ದು ಎಡಗಾಲಿನ ಹಿಮ್ಮಡಿಯ ಮೂಳೆ ಹೊರಬಂದಿದೆ.
ತಕ್ಷಣ ಸಹಾಯಕ ಮುತ್ತಣ್ಣ ಹಾಗೂ ಸಾರ್ವಜನಿಕರ ಸಹಾಯದೊಂದಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ಗದಗದಲ್ಲಿ ಹಾಲೀ ಬೀದಿ ದೀಪ ನಿರ್ವಹಣೆಯನ್ನು ಹೊರಗುತ್ತಿಗೆ ಏಜೆನ್ಸಿಯು ಸ್ಥಳೀಯ ನಗರಸಭಾ ಸದಸ್ಯರಿಗೆ ಉಪಗುತ್ತಿಗೆ ನೀಡಿತ್ತು ಎನ್ನಲಾಗಿದೆ.
ಕೆಲದಿನಗಳ ಹಿಂದಷ್ಟೆ ನಗರ ಸ್ಥಳೀಯ ಸಂಸ್ಥೆಗಳ ಬೀದಿ ದೀಪ ನಿರ್ವಾಹಕರಿಗೆ ಕನಿಷ್ಟ ವೇತನ ಭವಿಷ್ಯ ನಿಧಿ ಯಾವುದೆ ಸೇವಾ ಭದ್ರತೆ ಇಲ್ಲದೆ ಏಜೆನ್ಸಿಗಳು ದುಡಿಸಿಕೊಳ್ಳುತ್ತಿರುವ ಕುರಿತು ಹಾಗೂ ಕೆಲಸದ ವೇಳೆಯಲ್ಲಿ ಆಗುವ ಅವಘಡಗಳ ಬಗ್ಗೆ ಪೌರಾಡಳಿತ ನಿರ್ದೇಶಕರಿಗೆ ಸಂಘದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮನವಿ ನೀಡಿದ ಬೆನ್ನಲ್ಲೇ ಗದಗದಲ್ಲಿ ಈ ಅವಘಡ ಜರುಗಿದೆ
ಸ್ಥಳಕ್ಕೆ ಕಾರ್ಮಿಕ ಸಂಘಟನೆಯ ರಾಜ್ಯ ಸಂಚಾಲಕ ಆನಂದ್ ಕಲ್ಲೋಳಿಕರ್ ಭೇಟಿ ನೀಡಿ ಗಾಯಾಳು ಕಾರ್ಮಿಕನ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ
ಪರಿಹಾರಕ್ಕೆ ಆಗ್ರಹ:ವಿದ್ಯುತ್ ಕಂಬದಿಂದ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿರುವ ಚಂದ್ರಕಾಂತ್ ಲಾಡ್ ಕುಟುಂಬಕ್ಕೆ ಅಗತ್ಯ ಪರಿಹಾರ ನೀಡಬೇಕು.ತಕ್ಷಣಕ್ಕೆ ಚಿಕಿತ್ಸೆಯ ಜತೆಗೆ ಸ್ಥಳೀಯ ನಗರಸಭೆ ವಿದ್ಯುತ್ ಕಾರ್ಮಿಕರಿಗೆ ಅಗತ್ಯ ರಕ್ಷಣಾ ಪರಿಕರ ತಲಾ ೨೫ಲಕ್ಷ ಜೀವವಿಮೆ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದ್ದಾರೆ