ಚಲುವರಾಯಸ್ವಾಮಿ ರವರಿಗೆ ಬಹಿರಂಗ ಸಲಹೆ
ನಾಳೆ ಜೂನ್ ೧ ರಾಜ್ಯದ ಕೃಷಿ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾದ ಎನ್ ಚಲುವರಾಯ ಸ್ವಾಮಿಯವರ ಜನ್ಮದಿನ. ಮೊದಲಿಗೆ ಅವರಿಗೆ ಶುಭಾಶಯಗಳನ್ನು ಹೇಳೋಣಾ.
ಇದೇ ಸಂಧರ್ಭದಲ್ಲಿ ರಾಜಕೀಯವಾಗಿ ಕಳೆದ ಚುನಾವಣೆಯಲ್ಲಿ ಮರುಹುಟ್ಟು ಪಡೆದಿರುವ ಅವರ ಮುಂದೆ ಈಗ ಇರುವುದು ಭರ್ತಿ ನಾಲ್ಕು ವರ್ಷಗಳ ಅಧಿಕಾರವಷ್ಟೆ.
ಗ್ಯಾರಂಟಿಗಳ ಮೂಲಕ ಮಾತ್ರವಲ್ಲದೆ ಬಿಜೆಪಿಯ ದುರಾಡಳಿತದ ವಿರುದ್ದ ಮತದಾರರು ಕೊಟ್ಟ ತೀರ್ಪು ಕಾಂಗ್ರೆಸ್ ಪಕ್ಷವನ್ನು ಬಹುದೊಡ್ಡ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದೆ.
ಈಗ ಈ ಗೆಲುವನ್ನು ಉಳಿಸಿಕೊಳ್ಳುತ್ತಲ್ಲೇ ಮಂಡ್ಯದ ರಾಜಕಾರಣದಲ್ಲಿ ತಮ್ಮ ಛಾಪು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ಯಾವುದೇ ಗೆಲುವನ್ನು ಉಳಿಸಿಕೊಳ್ಳುವುದು ಜನಾಭಿಪ್ರಾಯ ಮುಕ್ಕಾಗದಂತೆ ನೋಡಿಕೊಳ್ಳುವುದು ಗೆಲುವನ್ನು ಪಡೆದ ಶ್ರಮಕ್ಕಿಂತ ಅದನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಹಸ ವಾಗಿದೆ.
ಬಿತ್ತನೆ ಬೀಜ ಸಮರ್ಪಕ ವಿತರಣೆ,ಕಳಪೆ ಬೀಜ. ಕೀಟ ನಾಶಕಗಳು ರೈತರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ.ಕೃಷಿ ಎಂಬುದು ಭಾರತದ ಮಟ್ಟಿಗೆ ಬಹುದೊಡ್ಡ ಜೂಜಾಗಿದೆ.
ಉಳಿದ ಜೂಜುಗಳಲ್ಲಿ ಕನಿಷ್ಟ ಮಜಾವಾದರೂ ಇರುತ್ತದೆ.ಇದರಲ್ಲಿ ಆ ಯಾವ ಮಜವು ಇರುವುದಿಲ್ಲ.ಮೊದಲಿಗೆ ಕರ್ನಾಟಕದಲ್ಲಿ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು. ಬಿಕ್ಕಟ್ಟನ್ನು ಪಟ್ಟಿ ಮಾಡಿ ಅವುಗಳ ನಿವಾರಣೆಗೆ ಅಗತ್ಯ ಕ್ರಮವಹಿಸಬೇಕಿದೆ.
ಮಂಡ್ಯ ಜಿಲ್ಲೆಯಲ್ಲಿ ಆಡಳಿತ ಸುಲಭವಾಗಿ ಜನರಿಗೆ ಎಟುಕುವಂತೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮಗಾಗಿ ಕೊಟ್ಟಿರುವ ಕಚೇರಿಯಲ್ಲಿ ವಾರಕೊಮ್ಮೆಯಾದರೂ ಇಡೀ ದಿನ ಸಾರ್ವಜನಿಕರಿಗೆ ಸಿಗುವಂತೆ ತಮ್ಮ ಕಾರ್ಯಕ್ರಮ ರೂಪುಗೊಳ್ಳಬೇಕಿದೆ.ಅಲ್ಲೂ ಸಹ ತಮ್ಮ ಪಕ್ಷದ ಕಾರ್ಯಕರ್ತರು,ನಾಯಕರು ಇಣುಕದಂತೆ ಅವರಿಗೆ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅವರ ಭೇಟಿಗೆ ಸಮಯ ನಿಗದಿಯಾಗಲಿ.ಸಾರ್ವಜನಿಕರ ಕುಂದುಕೊರತೆಗಳ ನಿವಾರಣೆ ಸಂಧರ್ಭದಲ್ಲಿ ಪಕ್ಷದ ಕಾರ್ಯಕರ್ತರು ಆವರಿಸಿಕೊಳ್ಳದಂತೆ ನೋಡಿಕೊಳ್ಳಬೇಕಿದೆ.
ಅಧಿಕಾರ ಇದ್ದಾಗ ಹಿಂಬಾಲಕರು, ಬೆಂಬಲಿಗರು ಸುತ್ತುವರಿಯುವುದು ಸಹಜ.ಇವರುಗಳೇ ಸಾರ್ವಜನಿಕರಿಗೂ ನಿಮಗೂ ಅಡೆತಡೆ ಆಗಿಬಿಡುವ ಸಾಧ್ಯತೆಗಳು ಹೆಚ್ಚು.ನಿಮ್ಮೊಂದಿಗೆ ಸುತ್ತುಗಟ್ಟಿರುವವರ ಪೈಕಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡುವವರ ಬದಲಿಗೆ ತಮ್ಮದೆ ವೈಯುಕ್ತಿಕ ಕೆಲಸಗಳಿಗಾಗಿ ಸುತ್ತುಗಟ್ಟಿರುವವರ ದಂಡೇ ಹೆಚ್ಚಿದೆ.ರಾಜಕೀಯ ಪಕ್ಷ ಎಂದೊಡನೆ ಅದರಲ್ಲಿ ಪೊಲಿಟಿಕಲ್ ಡರ್ಟಿ ವರ್ಕ್ ಮಾಡಲೆಂದೆ ಕೆಲವರು ಸಿದ್ದವಾಗಿರುತ್ತಾರೆ.ಅಂಥವರು ರಾಜಕೀಯವಾಗಿ ಎಷ್ಟೇ ಅನಿವಾರ್ಯತೆ ಇದ್ದರು ಮುನ್ನೆಲೆಗೆ ಬರದಂತೆ ನೋಡಿಕೊಳ್ಳಿ..ಈಗಾಗಲೆ ನಿಮ್ಮ ಹಿಂದೆ ಮುಂದೆ ಪ್ರದಕ್ಷಿಣೆ ಹಾಕುತ್ತಿರುವ ಕೆಲವರಿಗೆ ಹಾಸನದ ಪ್ರಜ್ವಲ್ ರೇವಣ್ಣನ ಛಾಯೆಯಿದೆ.ಅದು ನಿಮಗೆ ನಿಮ್ಮ ಅಧಿಕಾರಕ್ಕೆ ಮುಳುವಾಗಬಹುದು.
ಇದರ ಕುರಿತು ಅಗತ್ಯ ಎಚ್ಚರವಹಿಸಿ.
ಮಂಡ್ಯ ನಗರ ಎಂಬುದು ಈವತ್ತಿಗೂ ದೊಡ್ಡಹಳ್ಳಿಯಂತೆ ಇದೆ.ಮದ್ದೂರು ಹೊರತುಪಡಿಸಿದರೆ ಇನ್ನುಳಿದ ಐದು ತಾಲೋಕುಗಳಿಗೆ ಚುನಾವಣೆ ಕಾಲಕ್ಕೆ ಬಿಟ್ಟರೆ ಇನ್ಯಾವುದೇ ಸಂಬಂದ ಮಂಡ್ಯ ನಗರದೊಂದಿಗೆ ಇಲ್ಲ.ಕಾರಣ ಮಂಡ್ಯ ಒಂದು ಜಿಲ್ಲಾ ಕೇಂದ್ರವಾಗಿ ಬೆಳೆಸುವಲ್ಲಿ ಆಡಳಿತಗಾರರ ಮುನ್ನೋಟದ ಕೊರತೆ.
ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೇಕಾದ ಮುನ್ನೋಟದ ಕಾರ್ಯಕ್ರಮ ರೂಪಿಸಿ.ಇದಕ್ಕಾಗಿ ಕೃಷ್ಣರ ಆಡಳಿತದಲ್ಲಿ ರೂಪಿಸಿದ ಬೆಂಗಳೂರು ಅಜೆಂಡಾ ಟಾಸ್ಕ್ ಪೋರ್ಸ್ ಮಾದರಿಯಲ್ಲಿ ಮಂಡ್ಯ ಅಭಿವೃದ್ಧಿ ಸಮಿತಿ ರಚಿಸಿ.ಇದರಲ್ಲಿ ತಾಂತ್ರಿಕ ಪರಿಣಿತರು,ಜಿಲ್ಲೆಯ ಪ್ರಗತಿಪರ ಚಿಂತಕರು, ಸಾಹಿತಿಗಳು ,ಕನ್ನಡ ಪರ ಸಂಘಟನೆಯ ಮುಖಂಡರು, ಎಲ್ಲ ರಾಜಕೀಯ ಪಕ್ಷಗಳ ನಾಯಕರು, ನಾಗರೀಕ ಸಮಾಜದ ಪ್ರತಿನಿಧಿಗಳು ಇರುವಂತೆ ಮಾಡಿ.ಈ ಸಮಿತಿ ಭವಿಷ್ಯದ ಮಂಡ್ಯ ನಿರ್ಮಾಣದ ಕುರಿತು ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. . ನಗರ ಪ್ರದೇಶದಲ್ಲಿರುವ ರಾಜ ಕಾಲುವೆ , ಕೆರೆಗಳನ್ನು ಉಳಿಸಿಕೊಳ್ಳಲು ನೀಲ ನಕ್ಷೆ ತಯಾರು ಮಾಡಬೇಕಾಗಿದೆ .ಇದರ ಜತೆಗೆ ಹಳ್ಳಿ ಪಟ್ಟಣ,ನಗರ ಪ್ರದೇಶಗಳ ಅಭಿವೃದ್ಧಿ ಭವಿಷ್ಯದ ಕಾರ್ಯಕ್ರಮಗಳಾಗಿ ರೂಪುಗೊಳ್ಳುವಂತೆ ಮಾಡಬೇಕಿದೆ.
ಮಂಡ್ಯ ಮತ್ತು ಮೈಸೂರು ಸಂಪರ್ಕ ಕೊಂಡಿಯಾಗಿರುವ ಶಿವಮೊಗ್ಗ-ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರ ಹೆದ್ದಾರಿಯಾಗಿ ಪರಿವರ್ತನೆ ಮಾಡಲು ಕಳೆದ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ . ಅದು ಕೇಂದ್ರ ಸರ್ಕಾರದ ನಿಗದಿತ ಪಟ್ಟಿಯಲ್ಲಿದೆ . ಅದನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಲು ಯೋಜನೆ ತಯಾರಿ ಮಾಡಿ .
ಜಿಲ್ಲೆಯ ಕೆ.ಆರ್.ಪೇಟೆ ಮತ್ತು ಮಳವಳ್ಳಿ ತಾಲ್ಲೂಕು ಗಳು ಜಿಲ್ಲಾ ಕೇಂದ್ರದಿಂದ ಬಹಳ ದೂರದಲ್ಲಿವೆ .ಇಲ್ಲಿನ ಜನರ ಆರೋಗ್ಯ ತುರ್ತು ಸಂಧರ್ಭದಲ್ಲಿ ಮೈಸೂರು-ಮಂಡ್ಯ ಜಿಲ್ಲೆಗೆ ಬರಲು ಕಷ್ಟವಾಗುತ್ತಿದೆ . ಆದ್ದರಿಂದ ಈ ತಾಲ್ಲೂಕುಗಳಲ್ಲಿ ಟ್ರೋಮಾ ಕೇರ್ ಸೆಂಟರ್ ಪ್ರಾರಂಭಿಸಲು ವ್ಯವಸ್ಥೆ ಮಾಡಿ .
ಜಿಲ್ಲೆಯ ಹಲವು ನಾಲೆಗಳು ಮತ್ತು ಉಪನಾಲೆಗಳು ಶಿಥಿಲಾವಸ್ಥೆಗೆ ಬಂದು ನಾಲೆಗಳ ಕೊನೆಭಾಗಕ್ಕೆ ನೀರು ತಲುಪಲು ಆಗುತ್ತಿಲ್ಲ . ಇಂತಹ ನಾಲೆಗಳನ್ನು ಪಟ್ಟಿ ಮಾಡಿ ಆದಷ್ಟು ಬೇಗ ಸರಿಪಡಿಸಿ .
ಜಿಲ್ಲೆಯಲ್ಲಿ ಏಷ್ಯಾದ ಅತಿದೊಡ್ಡ ಎಳನೀರು ಮತ್ತು ಬೆಲ್ಲದ ಮಾರುಕಟ್ಟೆಗಳು ಇದೆ.ಆದರೆ ಇದರ ಬಹುಪಾಲು ಉಪಯೋಗ ವ್ಯಾಪಾರಿಗಳಿಗೆ ,ದಲ್ಲಾಳಿಗಳಿಗೆ ಮಾತ್ರ ಸಿಗುತ್ತಿದೆ ಹೊರತು ,ರೈತರಿಗೆಹೆಚ್ಚಿನ ಲಾಭವಿಲ್ಲ.
ಕೆಎಂಎಫ್ ಸಹಕಾರಿ ಮಾದರಿಯಲ್ಲಿ ಎಳನೀರು ಹಾಗೂ ಬೆಲ್ಲದ ಮಾರುಕಟ್ಟೆ ಸಹಕಾರಿ ಸಂಘ ರೂಪಿಸಿ.ಅಲೆಮನೆಗಳು ಕನಿಷ್ಟ ಐವತ್ತು ಮಂದಿಗೆ ಉದ್ಯೋಗ ನೀಡುತ್ತವೆ.ಈ ಅಲೆಮನೆಗೆಳಿಗೆ ಅಗತ್ಯ ತಾಂತ್ರಿಕ ನೆರವು ಅಗತ್ಯ ಬಂಡವಾಳದ ನೆರವು ಘೋಷಿಸಬೇಕಿದೆ.ಎಂಟು ಕೋಟಿ ವೆಚ್ಚದಲ್ಲಿ ವಿ.ಸಿ.ಫಾರಂನಲ್ಲಿ ನಿರ್ಮಿಸಿದ ಬೆಲ್ಲ ಪಾರ್ಕ್ ಯಾವುದೆ ಉಪಯೋಗಕ್ಕೆ ಬರುತ್ತಿಲ್ಲ.ಬೆಲ್ಲದ ತಂತ್ರಜ್ಞಾನ ರೈತರಿಗೆ ರವಾನೆಯಾಗುತ್ತಿಲ್ಲ.
ಈ ಕುರಿತು ಅಗತ್ಯ ಯೋಜನೆ ರೂಪಿಸಿ.ಇವು ಭವಿಷ್ಯದಲ್ಲಿ ಮಂಡ್ಯದ ಭವಿಷ್ಯವನ್ನು ರೂಪಿಸಬಲ್ಲವು.
ಕೆ.ಆರ್.ಪೇಟೆ ತಾಲ್ಲೂಕಿನ ಬಣ್ಣೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಫುಡ್ ಪಾರ್ಕ್ ನಲ್ಲಿ ಸ್ಥಳೀಯರಿಗೆ ಉದ್ಯೋಗ ಮತ್ತು ಉಪಯೋಗ ದೊರಕುವಂತೆ ಮಾಡಿ .
ಭವಿಷ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಅತೀಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿರುವುದು ತುಮಕೂರಿನಲ್ಲಿ.
ಇಲ್ಲಿನ ವಸಂತ ನರಸಾಪುರ ಕೈಗಾರಿಕ ವಲಯ ಸೇರಿದಂತೆ ಉದ್ದೇಶಿತ ಚನ್ಯೈ ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಸಹ ಇಲ್ಲೇ ನಿರ್ಮಾಣವಾಗುತ್ತಿದೆ.
ತುಮಕೂರು ಚಾಮರಾಜನಗರ ರೈಲ್ವೆ ಯೋಜನೆ ಜಾರಿಗೆ ಬಂದರೆ ಮಂಡ್ಯದಿಂದ ನೂರು ಕಿ.ಮೀ. ಅಂತರದ ತುಮಕೂರಿಗೆ ಹೋಗಿ ಬರುವುದು ಮಂಡ್ಯ ಜಿಲ್ಲೆಯ ನಿರುದ್ಯೋಗಿಗಳಿಗೆ ಅಷ್ಟು ತ್ರಾಸದ ಸಂಗತಿಯಲ್ಲ.
ಇದರ ಜತೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಪ್ರಯತ್ನ ನಡೆಯಲಿ. ಈಗಾಗಲೆ ಉದ್ದೇಶಿತ ಬಸರಾಳು ಪಂಡಿತನಹಳ್ಳಿ ಕೈಗಾರಿಕ ವಲಯದ ಸ್ಥಾಪನೆಗೆ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಿ.ಇವು ಮಾತ್ರವೇ ಮಂಡ್ಯವನ್ನು ಶಾಶ್ವತವಾಗಿ ಭದ್ರ ಬುನಾದಿ ಹಾಕಬಲ್ಲವು.
ಮಳವಳ್ಳಿಯ ಅನುಭವಿ ಶಾಸಕರ ಜತೆಗೆ ಮಂಡ್ಯದ ಗಣಿಗ ರವಿಕುಮಾರ್ ಮದ್ದೂರಿನ ಕದಲೂರು ಉದಯ್ ಥರದ ಉತ್ಸಾಹಿ ಶಾಸಕರ ದಂಡು ನಿಮ್ಮೊಂದಿಗೆ ಇದೆ.ಈ ಶಾಸಕರ ಉತ್ಸಾಹವನ್ನು ಸಮರ್ಥವಾಗಿ ಬಳಸಿ ಈ ಜಿಲ್ಲೆಯ ಸಮಗ್ರ ನಾಯಕರಾಗಿ ರೂಪುಗೊಳ್ಳಿ.ನಿಜವಾದ ಅರ್ಥದಲ್ಲಿ ಮಂಡ್ಯವನ್ನು ಕಟ್ಟಿ.ಖಂಡಿತವಾಗಿ ಮಂಡ್ಯ ಜಿಲ್ಲೆಯ ನಾಯಕತ್ವದ ಜತೆಗಿದ್ದಾರೆ.
ಇದರೊಂದಿಗೆ ನಿಮಗೆ ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯ ಕೋರುತ್ತಾ, ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ನೀಲನಕ್ಷೆ ತಯಾರಿಗೆ ಸಿದ್ದತೆಯಾಗಲಿ.