ಕನ್ನಡ ಬಾರದ ಪೌರಕಾರ್ಮಿಕರ ನೇಮಕಾತಿ: ಪ್ರಾಧಿಕಾರದಿಂದ ಪಾಲಿಕೆಗೆ ನೋಟಿಸ್
ಬೆಂಗಳೂರು:ಅ.೨೭.ಪೌರಕಾರ್ಮಿಕರ ವಿಶೇಷ ನೇಮಕಾತಿಯಲ್ಲಿ ಕನ್ನಡ ಬಾರದ ಪೌರಕಾರ್ಮಿಕರನ್ನು ನೇಮಕಗೊಳಿಸಲು ಪ್ರಕ್ರಿಯೆ ನಡೆಸಿರುವ ಬಿಬಿಎಂಪಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರು ಮಹಾನಗರ ಪಾಲಿಕೆ ಎರಡು ಹಂತಗಳಲ್ಲಿ ಒಟ್ಟು ಹದಿನಾಲ್ಕು ಸಾವಿರ ಪೌರಕಾರ್ಮಿಕರ ವಿಶೇಷ ನೇಮಕಾತಿಗೆ ಮುಂದಾಗಿತ್ತು.ಈ ನೇಮಕಾತಿಯಲ್ಲಿ ಶೈಕ್ಷಣಿಕ ಅರ್ಹತೆಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದರು ಅರ್ಹ ಅಭ್ಯರ್ಥಿಗೆ ಕನ್ನಡ ಮಾತನಾಡಲು ಬರಬೇಕು ಎಂಬ ಪ್ರಮುಖ ಅರ್ಹತಾ ಷರತ್ತನ್ನು ಸರಕಾರ ವಿಧಿಸಿತ್ತು.
ಈ ಅರ್ಹತಾ ನಿಯಮದ ಅನುಸಾರ ಪಾಲಿಕೆಯು ಪೌರಕಾರ್ಮಿಕರ ನೇಮಕಾತಿಯಲ್ಲಿ ಕನ್ನಡ ಬಲ್ಲ ಪೌರಕಾರ್ಮಿಕರನ್ನೆ ನೇಮಕಾತಿಗೊಳಿಸುವಂತೆ ಕರುನಾಡ ಸೇವಕರು ಸಂಘಟನೆಯು ಬಿಬಿಎಂಪಿಗೆ ಮನವಿ ನೀಡಿತ್ತು.ಆದರೆ ಕನ್ನಡ ಮಾತನಾಡಲು ಬರಬೇಕು ಎಂಬ ಪ್ರಮುಖ ಅರ್ಹತಾ ಷರತ್ತನ್ನು ನಿರ್ಲಕ್ಷಿಸಿ ಪಾಲಿಕೆಯು ನೇಮಕಾತಿಯ ಕರಡು ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೆ ಕರುನಾಡ ಸೇವಕರು ಸಂಘಟನೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿತ್ತು.
ದೂರನ್ನು ಪರೀಶೀಲಿಸಿದ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪಾಲಿಕೆಗೆ ನೋಟಿಸ್ ಜಾರಿಗೊಳಿಸಿದ್ದು.ಅರ್ಹತಾ ಷರತ್ತುಗಳ ಅನುಸಾರವೇ ಪೌರಕಾರ್ಮಿಕರ ನೇಮಕಾತಿ ನಡೆಸುವಂತೆ ಪಾಲಿಕೆಗೆ ಸೂಚನೆ ನೀಡಿದೆ.ನೇಮಕಾತಿಯಲ್ಲಿ ಕನ್ನಡಿಗರಿಗೆ ವಂಚನೆಯಾಗದಂತೆ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಪಾಲಿಕೆಗೆ ಸೂಚಿಸಿದೆ.
ಆಗ್ರಹ:ಪಾಲಿಕೆಯ ಪೌರಕಾರ್ಮಿಕರ ನೇಮಕಾತಿಯಲ್ಲಿ ಪ್ರಮುಖ ಅರ್ಹತಾ ಷರತ್ತನ್ನು ಕೈಬಿಟ್ಟು ನೇಮಕಾತಿಗೆ ಮುಂದಾಗಿರುವುದು ಕನ್ನಡದ ಬಗ್ಗೆ ಅದಕ್ಕಿರುವ ಅಸಡ್ಡೆಯನ್ನು ತೋರುತ್ತದೆ.ಇನ್ನಾದರೂ ಕರಡು ಪಟ್ಟಿ ಹಿಂಪಡೆದು ನಿಯಮಾನುಸಾರ ನೇಮಕಾತಿ ನಡೆಸುವಂತೆ ಕರುನಾಡ ಸೇವಕರು ಸಂಘ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದ್ದಾರೆ.ಇದಲ್ಲದೆ ಕನ್ನಡ ಮಾಧ್ಯಮದಲ್ಲಿ ಅರ್ಹ ಅಭ್ಯರ್ಥಿಗಳಿಲ್ಲದೆ ಖಾಲಿ ಉಳಿದಿರುವ ಹುದ್ದೆಗಳಿಗೆ ಮುಕ್ತ ಅರ್ಜಿ ಅಹ್ವಾನಿಸಿ ಕನ್ನಡಿಗ ಅಭ್ಯರ್ಥಿಗಳನ್ನು ನೇಮಕಗೊಳಿಸುವಂತೆ ಅವರು ಒತ್ತಾಯಿಸಿದ್ದಾರೆ.