ಬೆಂಗಳೂರು: ಸಾಲ ವಿತರಣೆಯಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣಗಳ ನಿಯೋಜಿತ ನ್ಯಾಯಾಲಯವು ಸಿಂಡಿಕೇಟ್ ಬ್ಯಾಂಕಿನ ಇಬ್ಬರು ಮಾಜಿ ಶಾಖಾ ವ್ಯವಸ್ಥಾಪಕರು ಮತ್ತು ಒಬ್ಬ ಖಾಸಗಿ ವ್ಯಕ್ತಿ ಸೇರಿದಂತೆ ಮೂವರು ಆರೋಪಿಗಳಿಗೆ 1 ರಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಒಟ್ಟು 52 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಬೆಂಗಳೂರಿನ 32ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರಾದ ಮೋಹನ್ ಅವರು ರೂ. 12.63 ಕೋಟಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಸಿಂಡಿಕೇಟ್ ಬ್ಯಾಂಕಿನ ಮಂಡ್ಯ ಶಾಖೆಯ ಬ್ಯಾಂಕ್ ವ್ಯವಸ್ಥಾಪಕರಾಗಿದ್ದ ಹೆಚ್.ಎಂ. ಸ್ವಾಮಿ, ಕೊಳ್ಳೇಗಾಲ ಶಾಖೆಯ ವ್ಯವಸ್ಥಾಪಕರಾಗಿದ್ದ ವಿಠ್ಠಲ್ ದಾಸ್ ಮತ್ತು ಖಾಸಗಿ ವ್ಯಕ್ತಿ ಅಸಾದುಲ್ಲಾ ಖಾನ್ ಅವರುಗಳಿಗೆ 1 ರಿಂದ 3 ವರ್ಷಗಳ ಜೈಲು ಶಿಕ್ಷೆ ಮತ್ತು ಒಟ್ಟು ರೂ. 52 ಲಕ್ಷ ದಂಡ ವಿಧಿಸಿದ್ದಾರೆ.
ಆರೋಪಿಗಳಾದ ಹೆಚ್.ಎಂ. ಸ್ವಾಮಿಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ. 1.5 ಲಕ್ಷ ದಂಡ, ವಿಠಲ್ ದಾಸ್ ಗೆ 1 ವರ್ಷ ಜೈಲು ಶಿಕ್ಷೆ ಮತ್ತು ರೂ. 50,000 ದಂಡ ಹಾಗೂ ಅಸಾದುಲ್ಲಾ ಖಾನ್ ಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ. 50 ಲಕ್ಷ ದಂಡ ವಿಧಿಸಲಾಗಿದೆ.
ಸಿಂಡಿಕೇಟ್ ಬ್ಯಾಂಕ್ ನ ಮುಖ್ಯ ವಿಚಕ್ಷಣ ಅಧಿಕಾರಿ ನೀಡಿದ ಲಿಖಿತ ದೂರಿನ ಮೇರೆಗೆ ಏಪ್ರಿಲ್ 15, 2009 ರಂದು ಆರೋಪಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಆರೋಪಿಗಳು ಜೈ ಕಿಸಾನ್ ಸಾಲ ಮತ್ತು ಇತರ ಸಾಲ ಸೌಲಭ್ಯಗಳ ಅಡಿಯಲ್ಲಿ ಸಾಲ ಮಂಜೂರಾತಿ ಮತ್ತು ವಿತರಣೆಯಲ್ಲಿ ಅಕ್ರಮ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆಪಾದಿಸಲಾಗಿತ್ತು.
ಅಲ್ಲದೇ ಆರೋಪಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಮ್ಮ ತಮ್ಮಲ್ಲೇ ಪಿತೂರಿ ಮಾಡಿ ಸಿಂಡಿಕೇಟ್ ಬ್ಯಾಂಕ್ ಗೆ ಸಾಕಷ್ಟು ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ ಎಂದು ಸಹ ಆರೋಪಿಸಲಾಗಿತ್ತು.
ಬ್ಯಾಂಕ್ ವಂಚನೆ ಪ್ರಕರಣ: ವಡೋದರಾ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಸಿಬಿಐ
ತನಿಖೆಯನ್ನು ಪೂರ್ಣಗೊಳಿಸಿದ ಬಳಿಕ, ಆರೋಪಿಗಳ ವಿರುದ್ಧ 2010 ರಂದು ಸಿಬಿಐ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ನ್ಯಾಯಾಲಯ ವಿಚಾರಣೆಯ ನಡೆಸಿ, ಇಬ್ಬರು ಸಾರ್ವಜನಿಕ ಸೇವಕರು ಮತ್ತು ಖಾಸಗಿ ವ್ಯಕ್ತಿಯನ್ನು ತಪ್ಪಿತಸ್ಥರೆಂದು ತೀರ್ಪು ನೀಡಿ ಶಿಕ್ಷೆ ವಿಧಿಸಿದೆ. ವಿಚಾರಣೆಯ ಸಮಯದಲ್ಲಿ ಆರೋಪ ಸಾಬೀತುಪಡಿಸಲು ಹಾಜರುಪಡಿಸಲಾಗಿದ್ದ ಸಾಕ್ಷಿಗಳು ಮತ್ತು ಸಾಕ್ಷ್ಯಾಧಾರಗಳ ಬಗ್ಗೆ ನ್ಯಾಯಾಲಯ ಪ್ರಶಂಸೆ ವ್ಯಕ್ತಪಡಿಸಿದೆ.
ಅಸಾದುಲ್ಲಾ ಖಾನ್ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದು ಮಂಡ್ಯ ಕಾಂಗ್ರೇಸ್ ನ ಹಾಲಿ ಮುಖಂಡರಾಗಿರುವುದು ವಿಶೇಷವಾಗಿದೆ