Friday, March 21, 2025
spot_img

‘ಮೆಟ್ರೋ ದರ ಏರಿಕೆ’ ನಾವಲ್ಲ ಅವರು ಕಾರಣ:ಸಿಎಂ ಸಿದ್ದು ಸ್ಪಷ್ಟನೆ

ಬೆಂಗಳೂರು ಮೆಟ್ರೊ ರೈಲಿನ ಪ್ರಯಾಣ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ವಾಸ್ತವಾಂಶಗಳನ್ನು ಬೆಂಗಳೂರು ಜನತೆಯ ಮುಂದಿಡಲು ಬಯಸುತ್ತೇನೆ.

ಮೆಟ್ರೋ ಪ್ರಯಾಣ ದರ ಹೆಚ್ಚಳವನ್ನು ವಿರೋಧಿಸುತ್ತಿರುವ ವಿರೋಧ ಪಕ್ಷವಾದ ಬಿಜೆಪಿಯ ನಾಯಕರು ಯಥಾಪ್ರಕಾರ ಸುಳ್ಳು ಮತ್ತು ತಿರುಚಿದ ಮಾಹಿತಿಯನ್ನು ಬಳಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿ ಸಾರ್ವಜನಿಕರ ಹಾದಿ ತಪ್ಪಿಸುತ್ತಿದ್ದಾರೆ. ಸರ್ಕಾರದ ಯಾವುದೇ ನೀತಿ-ನಿರ್ಧಾರಗಳನ್ನು ವಿರೋಧಿಸುವ ಅಧಿಕಾರ ಸಾರ್ವಜನಿಕರಿಗೆ ಇದೆ, ಸಂವಿಧಾನಬದ್ಧವಾದ ಅವರ ಹಕ್ಕನ್ನು ನಾನು ಗೌರವಿಸುತ್ತೇನೆ.

ಆದರೆ ವಿರೋಧ ಪಕ್ಷದ ಸ‍್ಥಾನದಲ್ಲಿ ಜನ ಕೂರಿಸಿರುವ ರಾಜ್ಯದ ಬಿಜೆಪಿ ರಾಜಕೀಯ ದುರುದ್ದೇಶದಿಂದ ಸುಳ್ಳು ಮಾಹಿತಿಗಳನ್ನು ನೀಡಿ ಸಾರ್ವಜನಿಕರ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವುದು ಅಕ್ಷಮ್ಯ. ಒಂದೆಡೆ ಮೆಟ್ರೋ ರೈಲು ನಿರ್ಮಾಣದ ಸಾಧನೆ ಕೇಂದ್ರದ ಬಿಜೆಪಿ ಸರ್ಕಾರದ್ದು ಎಂದು ಡಂಗುರ ಬಾರಿಸುತ್ತಿರುವ ಬಿಜೆಪಿ ನಾಯಕರು ದರ ಪರಿಷ್ಕರಣೆ ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿರುವುದನ್ನು ಕಂಡು ಅದರ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ಹೊರಿಸುತ್ತಿರುವುದು ಆತ್ಮವಂಚಕ ನಡವಳಿಕೆಯಾಗಿದೆ.

ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಜೊತೆಗೂಡಿ ಬೆಂಗಳೂರು ಮೆಟ್ರೊ ರೈಲು ನಿಗಮವನ್ನು ಸ್ಥಾಪಿಸಿದ್ದು, ಇದರಲ್ಲಿ ಎರಡೂ ಸರ್ಕಾರಗಳ ಸಮ (50:50) ಪಾಲುದಾರಿಕೆ ಇದೆ. ಕೇಂದ್ರ ನಗರ ಮತ್ತು ವಸತಿ ವ್ಯವಹಾರ ಇಲಾಖೆಯ ಕಾರ್ಯದರ್ಶಿಯಾಗಿರುವ ಶ್ರೀನಿವಾಸ ಕಟಿಕಿಥಲ ಅವರು ನಿಗಮದ ಈಗಿನ ಅಧ್ಯಕ್ಷರು. ವ್ಯವಸ್ಥಾಪಕ ನಿರ್ದೇಶಕ ಮತ್ತು ನಿರ್ದೇಶಕರ ಸ‍್ಥಾನದಲ್ಲಿ ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳಿದ್ದಾರೆ.

ಇದೊಂದು ಸ್ವಾಯತ್ತ ಸಂಸ್ಥೆಯಾಗಿದ್ದು ಇದರ ಮೇಲೆ ರಾಜ್ಯ ಸರ್ಕಾರಕ್ಕೆ ಪೂರ್ಣ ನಿಯಂತ್ರಣಾಧಿಕಾರ ಇಲ್ಲ. ಉಳಿದೆಲ್ಲ ನಗರಗಳ ಮೆಟ್ರೋ ರೈಲು ನಿಗಮಗಳಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಕೂಡಾ ಕೇಂದ್ರ ಸರ್ಕಾರದ ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.

2017ರ ನಂತರ ಮೆಟ್ರೊ ರೈಲಿನ ಪ್ರಯಾಣ ದರ ಪರಿಷ್ಕರಣೆ ಮಾಡದೆ ಇರುವ ಕಾರಣ ದರ ಪರಿಷ್ಕರಣೆ ನಡೆಸುವಂತೆ ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಪ್ರಯಾಣ ದರ ಹೆಚ್ಚಳದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲೇ ಇದ್ದಿದ್ದರೆ ಬಿಎಂಆರ್‌ಸಿಎಲ್ ನಮಗೆ ಪತ್ರ ಬರೆಯದೆ, ಕೇಂದ್ರ ಸರ್ಕಾರಕ್ಕೆ ಯಾಕೆ ಪತ್ರ ಬರೆಯುತ್ತಿತ್ತು?

ಬಿಎಂಆರ್‌ಸಿಎಲ್ ಪತ್ರಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಆರ್ ಥರಾನಿ ಅವರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣಾ ಸಮಿತಿ ರಚಿಸಿತ್ತು, ಈ ಸಮಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿನಿಧಿಗಳು ಸದಸ್ಯರಾಗಿದ್ದರು. 2024ರ ಸೆಪ್ಟೆಂಬರ್ 16ರಂದು ಅಧಿಕಾರ ಸ್ವೀಕರಿಸಿದ ಈ ಸಮಿತಿಗೆ ಮೂರು ತಿಂಗಳೊಳಗೆ ತನ್ನ ಶಿಫಾರಸನ್ನು ಸಲ್ಲಿಸಬೇಕೆಂದು ಕೇಂದ್ರ ಸರ್ಕಾರ ಪತ್ರದಲ್ಲಿ ತಿಳಿಸಿತ್ತು.

ಮೂರು ತಿಂಗಳ ಅವಧಿಯಲ್ಲಿ ದರ ಪರಿಷ್ಕರಣ ಸಮಿತಿ ಬಿಎಂಆರ್‌ಸಿಎಲ್ ಅಧಿಕಾರಿಗಳ ಜೊತೆ ಮಾತ್ರವಲ್ಲ ದೆಹಲಿ ಮತ್ತು ಚನ್ನೈಗಳಿಗೆ ತೆರಳಿ ಅಲ್ಲಿನ ಮೆಟ್ರೋ ಸಂಸ್ಥೆಗಳ ಅಧಿಕಾರಿಗಳ ಜೊತೆಯಲ್ಲಿ ಕೂಡಾ ಕಾರ್ಯಾಚರಣೆ ಮತ್ತು ಪ್ರಯಾಣ ದರದ ಬಗ್ಗೆ ಸಮಾಲೋಚನೆ ನಡೆಸಿತ್ತು.

2017ರ ಜೂನ್ ನಲ್ಲಿ ಬೆಂಗಳೂರು ಮೆಟ್ರೋ ರೈಲಿಗೆ ನಿಗದಿಗೊಳಿಸಿದ್ದ ಪ್ರಯಾಣದರ, ಮೆಟ್ರೋದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರ ಅನುಭವಗಳನ್ನು ದರಪರಿಷ್ಕರಣ ಸಮಿತಿ ಕಲೆ ಹಾಕಿತ್ತು. ಇದರ ಜೊತೆಯಲ್ಲಿ ಬಿಎಂಆರ್‌ಸಿಎಲ್ ನ ಹಣಕಾಸು ಸಾಮರ್ಥ್ಯವನ್ನು ಕೂಡಾ ಸಮಿತಿ ಅಧ್ಯಯನ ಮಾಡಿ 2024ರ ಡಿಸೆಬರ್ 16ರಂದು ಸಮಿತಿ ತನ್ನ ವರದಿನ್ನು ಸಲ್ಲಿಸಿತ್ತು.
2017ರ ಜೂನ್ ತಿಂಗಳಲ್ಲಿ ಬಿಎಂಆರ್‌ಸಿಎಲ್ ಪ್ರಯಾಣ ದರ ನಿಗದಿಪಡಿಸಿದಾಗ ಮೆಟ್ರೋ ಪ್ರಥಮ ಹಂತದ 42.30 ಕಿ.ಮೀ ಮಾರ್ಗ ಮಾತ್ರ ಪೂರ್ಣಗೊಂಡಿತ್ತು. ಮೆಟ್ರೋ ಎರಡನೇ ಹಂತ ಭಾಗಶ: ಪೂರ್ಣಗೊಂಡ ನಂತರ ಈಗ ಮೆಟ್ರೋ ಮಾರ್ಗ 42.30 ಕಿ.ಮೀಟರ್ ಗೆ ವಿಸ್ತರಣೆ ಗೊಂಡಿದೆ. ಮೆಟ್ರೋ 2, 2ಎ, ಮತ್ತು 2ಬಿ ಮಾರ್ಗಗಳು (96.60 ಕಿ.ಮೀ.) 2026ರ ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು ಆಗ ಬೆಂಗಳೂರು ಮೆಟ್ರೋ ಮಾರ್ಗ 175,55 ಕಿ.ಮೀ.ಗೆ ವಿಸ್ತರಣೆಯಾಗಲಿದೆ.

ಬೆಂಗಳೂರು ಮೆಟ್ರೋ ರೈಲಿಗೆ ಸಂಬಂಧಿಸಿದ ಈ ಎಲ್ಲ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಚರ್ಚೆ ನಡೆಸಿದ ನಂತರ ಹತ್ತು ಅಧ್ಯಾಯಗಳಲ್ಲಿ ತನ್ನ ವರದಿ ನೀಡಿದೆ. ಸಮಿತಿ ದೇಶದ ಉಳಿದ ಮೆಟ್ರೋ ರೈಲಿನ ಪ್ರಯಾಣದರವನ್ನು ಅಧ್ಯಯನ ಮಾಡಿದೆ. ಸದ್ಯ ಬೆಂಗಳೂರು ಮೆಟ್ರೋ ಪ್ರಯಾಣ ದರ ಕನಿಷ್ಠ ರೂ.10 ಮತ್ತು ಗರಿಷ್ಠ ರೂ.60 ಆಗಿದೆ. ಮುಂಬೈ ಮೆಟ್ರೋ ರೈಲಿನ ಕನಿಷ್ಠ ಪ್ರಯಾಣದರ ರೂ.10 ಮತ್ತು ಗರಿಷ್ಠ ಪ್ರಯಾಣ ದರ ರೂ.80 ಆಗಿದೆ.

ದೆಹಲಿ ಮೆಟ್ರೋವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಮೊದಲ ಹಂತದ ಪ್ರಯಾಣದರವನ್ನು ಆಯಾ ರಾಜ್ಯಗಳ ಮೆಟ್ರೊ ನಿಗಮಗಳೇ ನಿಗದಿ ಪಡಿಸಿತ್ತು. ಈಗ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ನೇಮಿಸುವ ಸಮಿತಿ ನಿಗದಿಪಡಿಸುತ್ತದೆ. ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯಿದೆಯ ಸೆಕ್ಷನ್ 37ರ ಪ್ರಕಾರ ಪ್ರಯಾಣ ದರ ನಿಗದಿ ಸಮಿತಿ ನೀಡಿದ ವರದಿಯನ್ನು ಮೆಟ್ರೋ ರೈಲು ನಿಗಮಗಳು ( ಈ ಪ್ರಕರಣದಲ್ಲಿ ಬಿಎಂಆರ್ ಸಿಎಲ್ ) ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಾಗಿದೆ.
– ಮುಖ್ಯಮಂತ್ರಿ Siddaramaiah

#metrofarehike

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!