ಹೆಜ್ಜಾಲ-ಚಾಮರಾಜನಗರ ರೈಲ್ವೆ ಯೋಜನೆಗೆ ಕುಮಾರಸ್ವಾಮಿ ಪತ್ರ
ಹೆಜ್ಜಾಲ ಮೂಲಕ
ಕನಕಪುರ, ಮಳವಳ್ಳಿ, ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ ಸಂಪರ್ಕಿಸುವ ರೈಲ್ವೆ ಯೋಜನೆ ಅನುಷ್ಟಾನಕ್ಕಾಗಿ ಕೇಂದ್ರ ಮಂತ್ರಿ ಕುಮಾರಸ್ವಾಮಿಯವರು ರೈಲ್ವೆ ಮಂತ್ರಿ ಅಶ್ವಿನ್ ವೈಷ್ಣವ್ ಗೆ ಪತ್ರ ಬರೆದಿದ್ದಾರೆ.
ಹೆಜ್ಜಾಲ – ಚಾಮರಾಜನಗರ ನಡುವಿನ ರೇಲ್ವೆ ಯೋಜನೆಯನ್ನು ಮುಂಬರುವ ಕೇಂದ್ರ ಬಜೆಟ್ ನಲ್ಲಿ ಸೇರಿಸಲಾಗುವುದು ಎಂದು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ ಎಂದು ಕುಮಾರಸ್ವಾಮಿಯವರ ಖಾಸಗಿ ಸಂಪರ್ಕಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರು ಕೋರಿದ್ದ ಮನವಿಯನ್ನು ಪತ್ರದಲ್ಲಿ ಪ್ರಸ್ತಾಪಿಸಿರುವ ಕುಮಾರಸ್ವಾಮಿ ಈ ಯೋಜನೆಯ ಜಾರಿಯಿಂದ ನಾಲ್ಕು ಜಿಲ್ಲೆಗಳಿಗೆ ಅನುಕೂಲವಾಗಲಿದೆ.
ಹೆಜ್ಜಾಲ-ಚಾಮರಾಜನಗರ ನಡುವಿನ ಮಾರ್ಗವು ಕನಕಪುರ, ಮಳವಳ್ಳಿ, ಕೊಳ್ಳೇಗಾಲ, ಯಳಂದೂರು ಮಾರ್ಗವಾಗಿ ಹಾದು ಹೊಗಲಿದ್ದು, ಈ ಯೋಜನೆ ಈ ಭಾಗದ ಜನರ ಬಹುದಿನಗಳ ಕನಸಾಗಿದೆ. ಈ ರೈಲ್ವೆ ಮಾರ್ಗವನ್ನು ಮಂಜೂರು ಮಾಡುವ ಕುರಿತು ಡಾ.ಕೆ.ಅನ್ನದಾನಿ ಅವರು ಕುಮಾರಸ್ವಾಮಿಯವರಿಗೆ ಹಾಗೂ ರೈಲ್ವೆ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಈ ಬಗ್ಗೆ ಕುಮಾರಸ್ವಾಮಿ ಅವರು ರೇಲ್ವೆ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಿ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರಿಗೆ ಬಹಳಷ್ಟು ಅನುಕೂಲ ಆಗುವ ಈ ಯೋಜನೆಯನ್ನು ತುರ್ತಾಗಿ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಅದರಂತೆ ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಈ ಯೋಜನೆಯನ್ನು ಮುಂಬರುವ ಬಜೆಟ್ ನಲ್ಲಿ ಸೇರ್ಪಡೆ ಮಾಡಿ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರಿಗೆ ಭರವಸೆ ನೀಡಿದ್ದಾರೆ.
ಈ ಯೋಜನೆಯ ಜಾರಿಗಾಗಿ ತೀವ್ರ ಶ್ರಮವಹಿಸಿದ್ದ ಚಾಮರಾಜನಗರ ಸಂಸದರಾಗಿದ್ದ ಧ್ರುವನಾರಯಣರವರು ತಮ್ಮ ಅವಧಿಯಲ್ಲಿ ಈ ಯೋಜನೆಯ ಭಾಗವಾಗಿ ಚಾಮರಾಜನಗರದಲ್ಲಿ ಒಂದು ಕೀಮಿ ರೈಲ್ವೆ ಹಳಿಯನ್ನು ಹಾಕಿಸುವಲ್ಲಿ ಯಶಸ್ವಿಯಾಗಿದ್ದರು. ನಂತರದಲ್ಲಿ ಮಂಡ್ಯ ಸಂಸದರಾಗಿದ್ದ ಸುಮಲತಾ ಅಂಬರೀಶ್ ಸಹ ಈ ಕುರಿತು ಸಂಸತ್ತಿನಲ್ಲಿ ದನಿ ಎತ್ತಿದ್ದನ್ನು ಸ್ಮರಿಸಬಹುದಾಗಿದೆ.ಈಗಲಾದರೂ ಈ ಯೋಜನೆಗೆ ಜೀವ ಬರುವುದೆ ಕಾದು ನೋಡಬೇಕಿದೆ.
ಇದಲ್ಲದೆ ದೇವೆಗೌಡರು ಪ್ರಧಾನಿಗಳಾಗಿದ್ದಾಗ ಜೀವ ತಳೆದಿದ್ದ ಚಾಮರಾಜನಗರ ತುಮಕೂರು ರೈಲ್ವೆ ಯೋಜನೆಯು ಸಹ ಧೂಳು ಹಿಡಿದಿದ್ದು ಇದು ಸಹ ಕಾರ್ಯಗತಗೊಂಡರೆ ಹಳೇ ಮೈಸೂರಿನ ಜಿಲ್ಲೆಗಳ ಒಳ ಸಂಪರ್ಕ ಇನ್ನಷ್ಟು ವಿಸ್ತಾರಗೊಳ್ಳಲಿದೆ.ಈ ಯೋಜನೆಯು ತುಮಕೂರು ಕುಣಿಗಲ್ ಹುಲಿಯೂರು ದುರ್ಗಾ ಮದ್ದೂರು ಮಳವಳ್ಳಿ ಮೂಲಕ ಚಾಮರಾಜನಗರ ಸಂಪರ್ಕಿಸಲಿದೆ.
ಇದರಿಂದ ಈ ಭಾಗದ ಆರ್ಥಿಕ ಚಟುವಟಿಕೆಗಳು ಉದ್ಯೋಗವಕಾಶಗಳು ಹೆಚ್ಚಲಿವೆ