Wednesday, January 21, 2026
spot_img

ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ಟೆಕ್ಕಿಗೆ 48 ಲಕ್ಷ ವಂಚನೆ

₹48 ಲಕ್ಷ ವಂಚನೆ: ಟೆಕಿ ಆರೋಪಲೈಂಗಿಕ ಸಮಸ್ಯೆಗೆ ಪರಿಹಾರ: ವಿಜಯ್‌ ಗುರೂಜಿ ಸೇರಿ ಇಬ್ಬರ ವಿರುದ್ಧ ಎಫ್ಐಆರ್

 

ಬೆಂಗಳೂರು: ಲೈಂಗಿಕ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವುದಾಗಿ ನಂಬಿಸಿ ಸಾಫ್ಟ್‌ವೇರ್ ಎಂಜಿನಿಯರ್‌ ಒಬ್ಬರಿಗೆ ₹48 ಲಕ್ಷ ವಂಚಿಸಿರುವ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೆಕಿ ತೇಜಸ್ ಅವರ ದೂರಿನ ಮೇರೆಗೆ ವಿಜಯ್ ಗುರೂಜಿ ಹಾಗೂ ವಿಜಯಲಕ್ಷ್ಮಿ ಆಯುರ್ವೇದಿಕ್‌ ಶಾಪ್‌ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದ ‌ತೇಜಸ್, ಕೆಂಗೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದರು. ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆಯ ಪಕ್ಕದ ಟೆಂಟ್ ಬಳಿ ಹಾಕಲಾಗಿದ್ದ ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಎಂಬ ಫಲಕ ನೋಡಿ, ಮೇ ತಿಂಗಳಲ್ಲಿ ಅಲ್ಲಿಗೆ ಭೇಟಿ ಕೊಟ್ಟಿದ್ದರು. ಟೆಂಟ್‍ನಲ್ಲಿದ್ದ ವ್ಯಕ್ತಿಯು ವಿಜಯ್ ಗುರೂಜಿ ಎಂಬಾತನನ್ನು ಪರಿಚಯ ಮಾಡಿಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬಳಿಕ ತೇಜಸ್‍ನನ್ನು ಪರೀಕ್ಷಿಸಿದ್ದ ವಿಜಯ್ ಗುರೂಜಿ, ಯಶವಂತಪುರದ ವಿಜಯಲಕ್ಷ್ಮಿ ಆಯುರ್ವೇದ ಔಷಧ ಅಂಗಡಿಯಲ್ಲಿ ದೇವರಾಜ್ ಬೂಟಿ ಹೆಸರಿನ ಔಷಧ ಖರೀದಿಸಿ ಸೇವಿಸಬೇಕು. ಅದರ ಬೆಲೆ ಗ್ರಾಂಗೆ ₹1.60 ಲಕ್ಷ ಇದ್ದು, ಆ ಔಷಧ ಬೇರೆ ಕಡೆ ಸಿಗುವುದಿಲ್ಲ. ಅದನ್ನು ಹರಿದ್ವಾರದಿಂದ ತರಿಸಲಾಗಿದೆ. ನಗದು ಪಾವತಿಸಿ ಆ ಔಷಧ ಖರೀದಿಸಬೇಕು ಮತ್ತು ಅದರ ಖರೀದಿಗೆ ಯಾರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಬಾರದು. ಬೇರೆ ವ್ಯಕ್ತಿಯನ್ನು ಜತೆಯಲ್ಲಿ ಕರೆದೊಯ್ದರೆ ಆ ಔಷಧಿಗೆ ಶಕ್ತಿ ಫಲಿಸುವುದಿಲ್ಲ ಎಂಬುದಾಗಿ ಷರತ್ತು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯ್ ಗುರೂಜಿ ಸಲಹೆಯಂತೆ ತೇಜಸ್ ಹಲವು ಬಾರಿ ದೇವರಾಜ್ ಬೂಟಿ ಮತ್ತು ಭವನ ಬೂಟಿ ತೈಲ ಖರೀದಿಸಿದ್ದರು. ಬೇರೆ ಬೇರೆ ಔಷಧಗಳು ಹಾಗೂ ತೈಲಗಳ ಹೆಸರಿನಲ್ಲಿ ತೇಜಸ್‍ರಿಂದ ಹಂತ ಹಂತವಾಗಿ ₹48 ಲಕ್ಷ ವಸೂಲು ಮಾಡಲಾಗಿದೆ. ಬ್ಯಾಂಕ್ ಹಾಗೂ ಸ್ನೇಹಿತರಿಂದ ಸಾಲ ಪಡೆದು ಔಷಧಗಳನ್ನು ಖರೀದಿಸಿದ್ದರು. ಆದರೂ ಸಮಸ್ಯೆ ಪರಿಹಾರವಾಗದಿದ್ದಾಗ ವಿಜಯ್ ಗುರೂಜಿ, ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ಚಿಕಿತ್ಸೆ ಮುಂದುವರಿ ಸದಿದ್ದರೆ ಹೆಚ್ಚಿನ ಸಮಸ್ಯೆಯಾಗಿ ಜೀವಕ್ಕೆ ತೊಂದರೆಯಾಗುತ್ತದೆ ಎಂಬುದಾಗಿ ಹೆದರಿಸಿ ತೇಜಸ್‍ರಿಂದ ಮತ್ತೆ ಹಣ ಪೀಕಲು ಯತ್ನಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂತ್ರಪಿಂಡಕ್ಕೆ ಹಾನಿ

ವಿಜಯ್ ಗುರೂಜಿ ಕೊಟ್ಟಿದ್ದ ಔಷಧಗಳ ಸೇವನೆಯಿಂದ ತೇಜಸ್‍ ಅವರ ಮೂತ್ರಪಿಂಡಕ್ಕೆ ಹಾನಿಯಾಗಿರುವುದು ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿದೆ. ಈ ಸಂಗತಿ ತಿಳಿದ ತೇಜಸ್, ಹಣ ಸಂಪಾದನೆಯ ದುರುದ್ದೇಶಕ್ಕೆ ಚಿಕಿತ್ಸೆ ನೆಪದಲ್ಲಿ ತಮಗೆ ಮೋಸ ಮಾಡಿರುವ ವಿಜಯ್ ಗುರೂಜಿ ಹಾಗೂ ವಿಜಯಲಕ್ಷ್ಮಿ ಆಯುರ್ವೇದ ಔಷಧ ಮಳಿಗೆ ಮಾಲೀಕರ ವಿರುದ್ಧ ದೂರು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!