ಬದಲಾಗಬೇಕಿರುವುದು ದರ್ಶನ್ ಮಾತ್ರವಲ್ಲ..ಆಡಳಿತ ನಡೆಸುವವರು ಕೂಡಾ.
ಚಿತ್ರನಟ ದರ್ಶನ್ ಕೇಂದ್ರ ಬಂಧಿಖಾನೆಯಲ್ಲಿ ಜತೆಗಾರ ಬಂಧಿಗಳೊಂದಿಗೆ ಸಿಗರೇಟ್ ಸೇದುತ್ತಾ ಕಾಫಿ ಹೀರುತ್ತಿರುವ ಪಟವೊಂದು ಹಳೆಯ ಚರ್ಚೆಯೊಂದನ್ನು ಮತ್ತೆ ಮುನ್ನೆಲೆಗೆ ತಂದಿದೆ.
ರೂಡಿಗತವಾಗಿ ಜನಸಾಮಾನ್ಯರು ಮಾತ್ರವಲ್ಲದೆ ನಮ್ಮ ಮಾಧ್ಯಮಗಳು ಸಹ ದರ್ಶನ್ ಗೆ ಬಂಧಿಖಾನೆಯಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ.ಬಯಸಿದ ಊಟದ ಮನೆಗಳಿಂದ ಬಯಸಿದ ಊಟವನ್ನು ಸರಬರಾಜು ಮಾಡಲಾಗುತ್ತಿದೆ. ಬಂಧಿಖಾನೆಯಲ್ಲಿ ಗಾಂಜಾ ಮದ್ಯ ಸಂಚಾರಿ ದೂರವಾಣಿ ಎಲ್ಲವು ಸಿಗುತ್ತಿದೆ ಎಂದು ಹೊಸ ವಿಷಯವನ್ನು ತಾವು ಮಂಡಿಸುತ್ತಿರುವ ಉತ್ಸಾಹವನ್ನು ತೋರುತ್ತಿವೆ.
ಇದಕ್ಕೆ ತಕ್ಕಂತೆ ಕರ್ನಾಟಕದ ಆಳುವ ಸರಕಾರವು ಪರಪ್ಪನ ಆಗ್ರಹಾರದ ಬಂಧಿಖಾನೆಯ ಒಂಬತ್ತು ಮಂದಿ ಅಧಿಕಾರಿ ನೌಕರರನ್ನು ಅಮಾನತ್ತುಗೊಳಿಸಿ ತಾನು ಈ ರೀತಿಯ ಜೈಲಾಡಳಿತದ ವ್ಯವಸ್ಥೆ ವಿರುದ್ದ ಇರುವುದಾಗಿ ತೋರ್ಪಡಿಕೆ ಮಾಡುತ್ತಿದೆ.
ದರ್ಶನ್ ಪ್ರಭಾವಿಯಾಗಿರುವ ಕಾರಣಕ್ಕೆ ಇವೆಲ್ಲ ನಡೆಯುತ್ತಿದೆ ಎಂಬಂತೆ ಘಟನೆಯನ್ನು ವಿಶ್ಲೇಷಿಸಲು ಪೂರಕವಾದ ವಾತವರಣವನ್ನು ಈ ಮಾದರಿಯ ಎಲ್ಲ ಚರ್ಚೆಗಳು ಮಾಡುತ್ತಿವೆ.
ನಿಜವಾದ ಅರ್ಥದಲ್ಲಿ ಬಂಧಿಖಾನೆಗಳು ಬಂಧಿಗಳನ್ನು ಸುಧಾರಿಸುವ ಶಾಲೆಗಳಾಗಬೇಕಿತ್ತು.ಬಂಧಿಗಳಿಗೆ ತಮ್ಮ ಅಪರಾಧಗಳ ಮನನವಾಗಿ ನಾಗರೀಕ ಜಗತ್ತಿಗೆ ಸಿದ್ದವಾಗುವ ವಾತವರಣ ಕಟ್ಟಬೇಕಿತ್ತು.ಬದಲಿಗೆ ಬಂಧಿಖಾನೆಗಳನ್ನು ಭೂಗತ ಜಗತ್ತಿಗೆ ಬಡ್ತಿ ನೀಡುವ ನೇಮಕಾತಿ ಕೇಂದ್ರಗಳಾಗಿ ರೂಪಿಸಲಾಗಿದೆ.ಇದಕ್ಕೆ ನಮ್ಮ ಆಡಳಿತಗಾರರೆ ವಿನಾ ಮತ್ತಾರು ಕಾರಣರಲ್ಲ ಎಂಬುದು ನಿರ್ವಿವಾದಿತವಾಗಿದೆ.
ಅಪರಾಧಗಳು ಸಮಾಜದ ಉತ್ಪನ್ನವಾಗಿರುವಾಗ ಅಪರಾಧಿಯು ಸಮಾಜದ ಉತ್ಪನ್ನವೆ ಆಗಿದ್ದಾರೆ.ಕರ್ನಾಟಕದ ಎಲ್ಲ ಬಂಧಿಖಾನೆಗಳಲ್ಲಿ ಬಂಧಿಗಳನ್ನು ಭೇಟಿ ಮಾಡಲು ಕಾಸು ಖರ್ಚು ಮಾಡಲೇಬೇಕು.ಅವರು ಬಡವರಿರಲಿ ಬಲಿತವರಿರಲಿ.ಇನ್ನು ಜೈಲನ್ನು ನಿರ್ವಹಿಸುವ ಅಧಿಕಾರಿಗಳು ಲಕ್ಷಾಂತರ ರೂಪಾಯಿಗಳನ್ನು ಚೆಲ್ಲಿಯೆ ಜೈಲು ಅಧಿಕಾರಿಗಳಾಗಿ ನೌಕರರಾಗಿ ನಿಯೋಜಿತರಾಗಿರುತ್ತಾರೆ.ತಾವು ಚೆಲ್ಲಿ ಬಂದ ಹಣದ ಹತ್ತಾರು ಪಟ್ಟನ್ನು ವಸೂಲು ಮಾಡಲು ಬಂಧಿಖಾನೆಯೊಳಗೊಂದು ಭೂಗತ ಜಗತ್ತನ್ನು
ಸೃಷ್ಟಿಸಿರುತ್ತಾರೆ.
ಕರ್ನಾಟಕದ ಗೃಹಮಂತ್ರಿ ಅತ್ಯಂತ ಅದಕ್ಷನಾಗಿದ್ದು ಈವರೆಗೆ ಈ ಮನುಷ್ಯ ಯಾವುದೆ ಒಂದು ಬಂಧಿಖಾನೆಗೆ ಭೇಟಿ ನೀಡಿದ ಅಲ್ಲಿನ ಪರಿಸ್ಥಿತಿ ಸುಧಾರಿಸಲು ಏನೊಂದು ಕ್ರಮಕೈಗೊಂಡ ನಿದರ್ಶನಗಳಿಲ್ಲ.
ಬಂಧಿಖಾನೆಗಳ ಪರಿಸ್ಥಿತಿಯನ್ನು ಸುಧಾರಿಸದೆ ದರ್ಶನ್ ಮಾದರಿಯ ಅಪರಾಧಿಗಳನ್ನು ಎಲ್ಲಿಗೆ ವರ್ಗಾಯಿಸಿದರೂ ಯಾವುದೆ ಬದಲಾವಣೆ ಸಾಧ್ಯವಿಲ್ಲ.
ಬಂಧಿಖಾನೆಗಳ ಸುಧಾರಣೆಗೆ ಖೈದಿಗಳ ಮನಪರಿವರ್ತನೆಗೆ ರಾಜ್ಯ ಸರಕಾರ ಕೂಡಲೆ ಸಮಾಜಶಾಸ್ತ್ರಜ್ಞರು ಕಾನೂನು ತಜ್ಞರು ಸ್ವಯಂಸೇವಾ ಸಂಸ್ಥೆಗಳ ಸಮಿತಿಯೊಂದನ್ನು ರಚಿಸಿ ಅವು ನೀಡಿದ ವರದಿ ಆಧಾರದ ಮೇಲೆ ಸುಧಾರಣೆಗೆ ಕ್ರಮವಹಿಸಬೇಕು.ಬಂಧಿಖಾನೆಗಳ ದೈನಂದಿನ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಬೇಕು.ಮೊದಲಿಗೆ ಗೃಹ ಇಲಾಖೆಯಲ್ಲಿನ ಭ್ರಷ್ಟಚಾರಕ್ಕೆ ಕಡಿವಾಣ ಹಾಕಬೇಕು.ಈಚೆಗೆ ಯಾದಗಿರಿಯಲ್ಲಿ ಪೋಲಿಸ್ ಅಧಿಕಾರಿಯೊಬ್ಬರು ಲಂಚ ಕೊಡಲಾಗದೆ ಖಿನ್ನತೆಯಿಂದ ಸಾವನ್ನಪ್ಪಿರುವ ಘಟನೆಯೆ ಗೃಹ ಇಲಾಖೆಯ ಕತೆಯನ್ನು ಹೇಳುತ್ತದೆ.ಸಮರ್ಥರಿಗೆ ಖಾತೆ ವಹಿಸಿ ಹಾಲೀ ಗೃಹ ಮಂತ್ರಿಯ ರಾಜೀನಾಮೆ ಪಡೆಯುವುದು ಸರಕಾರದ ಮಾರ್ಯಾದೆ ಉಳಿಸಲಿದೆ