ಕೆ.ಆರ್.ಪೇಟೆ,ಡಿ.25: ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ(ಸುಮಾರು 1ಲಕ್ಷ ರೂ) ಶಾಲೆಯ ಎಲ್ಲಾ 65 ವಿದ್ಯಾರ್ಥಿಗಳಿಗೂ ಎರಡು ದಿನಗಳ ಶೈಕ್ಷಣಿಕ ಪ್ರವಾಸ ಭಾಗ್ಯ ಕಲ್ಪಿಸುವ ಮೂಲಕ ಮಾದರಿ ಶಿಕ್ಷಕರಾಗಿ ಹೊರ ಹೊಮ್ಮಿದ್ದಾರೆ.

ಸರಕಾರಿ ಶಾಲೆಯ ನಿಜವಾದ ಆದರ್ಶ ಶಿಕ್ಷಕರಾಗುವತ್ತ ಹೆಜ್ಜೆ ಇರಿಸಿದ್ದಾರೆ. ಶಾಲೆಗಳು ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಕ್ಕಳ ದಾಖಲಾತಿ ಹೆಚ್ಚಿಸಲು ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳ ಪೋಷಕರಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಜಾಗೃತಿ ಮೂಡಿಸಿ ದಾಖಲಾತಿಯನ್ನು ಹೆಚ್ಚಿಸುವಲ್ಲಿ ಶ್ರಮಸಿದ್ದ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ಬಡಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದು ಸ್ವತಃ ಇಂಗ್ಲೀಷ್ ಶಿಕ್ಷಕರಾಗಿ ಇಂಗ್ಲೀಷ್ ಅನ್ನು ಮಕ್ಕಳಿಗೆ ಕಲಿಸಿಕೊಡುವ ಮೂಲಕ “ಗ್ರಾಮೀಣ ಮಕ್ಕಳಿಗೆ ಇಂಗ್ಲೀಷ್ ಕಬ್ಬಿಣದ ಕಡಲೆ” ಎನ್ನುವ ಮಾತನ್ನು ದೂರವಾಗಿಸಿದ್ದಾರೆ. ಪೋಷಕರು ತಮ್ಮ ಮಕ್ಕಳು ಇಂಗ್ಲೀಷ್ ಕಲಿಕೆಯಲ್ಲಿ ಮುಂದಿರುವುದನ್ನು ಮನಗಂಡು ಇತರೆ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಕರೆತಂದು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಇದಕ್ಕೆ ಶಾಲೆಯ ಸಹ ಶಿಕ್ಷಕರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ದಾಖಲಾತಿ ಪ್ರಮಾಣ ಹೆಚ್ಚಿಸಲು ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ಅಪಾರವಾಗಿ ಶ್ರಮಿಸುತ್ತಿದ್ದಾರೆ. ತೆಂಡೇಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇ.80ಕ್ಕಿಂತ ಹೆಚ್ಚು ಬಡವರು ಮತ್ತು ಕೂಲಿ ಕಾರ್ಮಿಕರ ಮಕ್ಕಳು ಓದುತ್ತಿದ್ದಾರೆ. ಪ್ರಸ್ತುತ 65ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಿ.ಎಸ್.ರಾಜು ಕಳೆದ 4ವರ್ಷಗಳ ಹಿಂದೆ ವರ್ಗಾವಣೆಯಾಗಿ ಬಂದ ನಂತರ ಪ್ರತಿ ವರ್ಷವೂ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಲು ಪೋಷಕರ ಸಹಕಾರ, ಎಸ್.ಡಿ.ಎಂ.ಸಿ ಪದಾಧಿಕಾರಿಗಳ ಸಹಕಾರ, ಹಳೆಯ ವಿದ್ಯಾರ್ಥಿಗಳ ಸಹಕಾರ, ದಾನಿಗಳ ಸಹಕಾರದಿಂದ ಶ್ರಮಿಸುತ್ತಿದ್ದಾರೆ. ಈ ಸಾಲಿನಲ್ಲಿ ಶೈಕ್ಷಣಿಕ ಪ್ರವಾಸ ಹೋಗಬೇಕೆಂದು ಯೋಜನೆ ರೂಪಿಸಿದಾಗ ಶೇ.30ರಷ್ಟು ಮಕ್ಕಳು ಮಾತ್ರ ಪ್ರವಾಸ ಶುಲ್ಕ ನೀಡಲು ಮುಂದೆ ಬಂದರು. ಉಳಿದ ಶೇ.70ರಷ್ಟು ಮಕ್ಕಳ ಪೋಷಕರು ಕೂಲಿ ಮಾಡಿ ಜೀವನ ನಡೆಸುವ ಕಾರಣ ಪ್ರವಾಸ ಶುಲ್ಕ ನೀಡಲು ಮುಂದೆ ಬರಲಿಲ್ಲ. ಇದನ್ನು ಮನಗಂಡ ಮುಖ್ಯ ಶಿಕ್ಷಕರಾದ ಎಲ್ಲಾ ಮಕ್ಕಳಿಗೂ ಉಚಿತವಾಗಿ ಪ್ರವಾಸ ಭಾಗ್ಯ ಕಲ್ಪಿಸಬೇಕು ಎಂದು ತಮ್ಮ ಒಂದು ತಿಂಗಳ ವೇತನವನ್ನು ಖರ್ಚು ಮಾಡಿ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ, ಮಕ್ಕಳಿಗೆ ಊಟ ತಿಂಡಿ ವ್ಯವಸ್ಥೆ, ಮಲೆ ಮಹದೇಶ್ವರ ಬೆಟ್ಟದಲ್ಲಿ ಒಂದು ದಿನ ತಂಗಲು ಸಮುದಾಯ ಭವನದ ವ್ಯವಸ್ಥೆಯ ಎಲ್ಲಾ ಖರ್ಚುಗಳನ್ನು ತಾವೇ ಭರಿಸುವ ಮೂಲಕ ಎಲ್ಲಾ 65ಮಕ್ಕಳಿಗೆ, ಶಾಲಾ ಶಿಕ್ಷಕರಿಗೆ, ಅಡುಗೆಯವರಿಗೆ ಶೈಕ್ಷಣಿಕ ಪ್ರವಾಸ ಭಾಗ್ಯವನ್ನು ಕಲ್ಪಿಸುವ ಮೂಲಕ ಮಾದರಿ ಶಿಕ್ಷಕರಾಗಿ ಹೊರ ಹೊಮ್ಮಿದ್ದಾರೆ ಇಂತಹ ಉದಾರ ಗುಣವುಳ್ಳ ಶಿಕ್ಷಕರು ಎಲ್ಲಾ ಶಾಲೆಗಳಲ್ಲಿ ಇದ್ದರೆ ಸರ್ಕಾರಿ ಶಾಲೆಗಳು ಅಭಿವೃದ್ಧಿ ಸಾಧಿಸುವುದರಲ್ಲಿ ಸಂದೇಹವೇ ಇಲ್ಲ ಎಂದು ಶಾಲೆಯ ಪೋಷಕರು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳ ಈ ಶೈಕ್ಷಣಿಕ ಪ್ರವಾಸದೊಂದಿಗೆ ಮುಖ್ಯ ಶಿಕ್ಷಕ ಬಿ.ಎಸ್.ರಾಜು, ಸಹ ಶಿಕ್ಷಕರಾದ ಎಸ್.ಕೆ.ಚಂದ್ರಶೇಖರ್, ರಾಮಚಂದ್ರು, ವಿ.ಎಂ.ಮಮತಾ, ಕೆ.ಸುನಂದ ಅವರುಗಳು ಕೆ.ಆರ್.ಪೇಟೆ ಡಿಪೋ ಐರಾವತ ಬಸ್ಸಿನಲ್ಲಿ ಬಸ್ಸಿನ ಸಾರಥಿ ಬೋಳಮಾರನಹಳ್ಳಿ ಕೊಪ್ಪಲು ಆನಂದ್ ಅವರೊಂದಿಗೆ ಪ್ರವಾಸಕ್ಕೆ ತೆರಳಿದ್ದು ತಲಕಾಡು, ಮಹಾದೇಶ್ವರಬೆಟ್ಟ, ಶಿವನಸಮುದ್ರ ಪಾಲ್ಸ್, ಮೇಕೆದಾಟು ಪಾಲ್ಸ್, ಹೊಗೆನಕಲ್ ಪಾಲ್ಸ್, ಸುತ್ತೂರು ಶ್ರೀ ಕ್ಷೇತ್ರ, ಚಾಮುಂಡಿಬೆಟ್ಟ, ಮೈಸೂರು ಅರಮನೆ, ಪ್ರಾಣಿಸಂಗ್ರಹಾಲಯ, ವಸ್ತು ಸಂಗ್ರಹಾಲಯ, ಕೆ.ಆರ್.ಎಸ್ ಮತ್ತಿತರ ಸ್ಥಳಗಳಿಗೆ ಮಕ್ಕಳು ಎರಡದು ದಿನಗಳ ಪ್ರವಾಸ ಕೈಗೊಂಡಿದ್ದು ಪ್ರವಾಸವು ಯಶಸ್ವಿಯಾಗಲಿ ಎಂದು ನೂರಾರು ಪೋಷಕರು ಹಾಜರಿದ್ದು ಮಕ್ಕಳಿಗೆ ಶುಭ ಹಾರೈಸಿದರು.


