ಮಂಡ್ಯ: ಸೆ.೧೭.ಮದ್ದೂರು ಪಟ್ಟಣದಲ್ಲಿ ನಡೆದ ಗಲಭೆಯ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳ ನಡುವಿನ ಕಂದಕ ತೊಡೆಯಲು ಜನಪರ ಸಂಘಟನೆಗಳ ವತಿಯಿಂದ ಸೆ.22ರಂದು ಬೆಳಿಗ್ಗೆ 10.30ಕ್ಕೆ `ಸೌಹಾರ್ದ- ಸಾಮರಸ್ಯ ನಡಿಗೆ’ ನಡೆಸಲಾಗುವುದು ಎಂದು ಮದ್ದೂರು ಪುರಸಭೆಯ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಮದ್ದೂರಿನಲ್ಲಿ ಗಲಭೆ ಸಂಭವಿಸಿರುವುದು ಖಂಡನಾರ್ಹ. ಮಂಡ್ಯ ಜಿಲ್ಲೆ ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಅದನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ಸೌಹಾರ್ದ- ಸಾಮರಸ್ಯ ನಡಿಗೆಯು ಜಿಲ್ಲೆಯಲ್ಲಿನ ರೈತ, ದಲಿತ, ವಿದ್ಯಾರ್ಥಿ, ಮಹಿಳಾ, ಜನಪರ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿದೆ. ಈ ಮೂಲಕ ಮತೀಯ ಶಕ್ತಿಗಳು ಜನರನ್ನು ಸಂಕುಚಿತಗೊಳಿಸುವ ಮನುಕುಲವನ್ನು ವಿನಾಶದೆಡೆಗೆ ಕೊಂಡೊಯ್ಯುವ ಮನಸ್ಥಿತಿ ತೊಡೆದು ಹಾಕುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ವಿಶ್ವಮಾನವರಾದ ಕುವೆಂಪು, ಹಿಂದು ಧರ್ಮದ ಮಹಾನ್ ಚೇತನ ಸ್ವಾಮಿ ವಿವೇಕಾನಂದರ ಆದರ್ಶಗಳು, ಬಸವಣ್ಣ, ಕನಕದಾಸರ ಜ್ಞಾನದ ಬೆಳಕನ್ನು ಮತೀಯ ಶಕ್ತಿಗಳು ನುಂಗಿ ಕತ್ತಲೆ ಲೋಕ ಸೃಷ್ಠಿಗೆ ಮುಂದಾಗಿದೆ. ನಾಗರೀಕರಾದ ನಮ್ಮ ಜವಾಬ್ದಾರಿ ಹೆಚ್ಚಿದ್ದು, ಧಾರ್ಮಿಕ ಆಚರಣೆಗೆ ಅಡ್ಡಿಪಡಿಸುವ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಎಚ್ಚರ ವಹಿಸಬೇಕಿದೆ ಎಂದರು.
ಡಿಎಸ್‌ಎಸ್ ಮುಖಂಡ ಶಿವರಾಜ್ ಮರಳಿಗ ಮಾತನಾಡಿ, ನಡೆಗೆ ಅನುಮತಿ ನೀಡುವಂತೆ ಎಸ್ಪಿಗೆ ಮನವಿ ಪತ್ರ ನೀಡಿದ್ದೇವೆ. ಅವರು ಅನುಮತಿ ನೀಡುವ ಭರವಸೆಯಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಗೋಷ್ಠಿಯಲ್ಲಿ ರೈತ ಮುಖಂಡರಾದ ಎಸ್.ವಿಶ್ವನಾಥ್, ಬೋರಾಪುರ ಶಂಕರೇಗೌಡ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಜಗದೀಶ್ ನಗರಕೆರೆ ಇತರರಿದ್ದರು.


