Friday, November 7, 2025
spot_img

ಸ್ಥಳೀಯ ಸಂಸ್ಥೆ ಮೀಸಲು ನಿಗದಿಗೆ ಐದು ತಿಂಗಳು ಕಾಲಾವಕಾಶ ಕೊಡಿ.ನ್ಯಾಯಾಲಯಕ್ಕೆ ಸರಕಾರ ಮನವಿ

ಸ್ಥಳೀಯ ಸಂಸ್ಥೆ ಮೀಸಲು ನಿಗದಿಗೆ 150 ದಿನ ಬೇಕು’
04/11/2025

ಬೆಂಗಳೂರು: ‘ಈ ತಿಂಗಳಾತ್ಯಕ್ಕೆ ಅವಧಿ ಮುಕ್ತಾಯಗೊಳ್ಳಲಿರುವ ರಾಜ್ಯದ 188 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿಯ ಅಂತಿಮ ಅಧಿಸೂಚನೆ ಹೊರಡಿಸಲು ಕನಿಷ್ಠ 150 ದಿನಗಳಾದರೂ ಬೇಕಾಗುತ್ತದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರುಹಿದೆ.

‘ಅವಧಿ ಮುಗಿಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವ ಕ್ರಮಕ್ಕೆ ಮುಂದಾಗದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ 65 ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಪ್ರತ್ಯೇಕವಾಗಿ ಸಲ್ಲಿಸಿರುವ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ‘ವಾರ್ಡ್‌ವಾರು ಮೀಸಲಾತಿಯ ಅಂತಿಮ ಅಧಿಸೂಚನೆ ಹೊರಡಿಸಲು ಕನಿಷ್ಠ 150 ದಿನಗಳಾದರೂ ಬೇಕಾಗುತ್ತದೆ’ ಎಂದು ಲಿಖಿತ ಹೇಳಿಕೆ ಸಲ್ಲಿಸಿದರು.

‘ಈಗಾಗಲೇ 52 ಸ್ಥಳೀಯ ಸಂಸ್ಥೆಗಳಿಂದ ಮಾಹಿತಿ ಲಭ್ಯವಾಗಿದೆ. ಉಳಿದ 136ರ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಮೀಸಲಾತಿ ಅಂತಿಮ ಅಧಿಸೂಚನೆ ಬಳಿಕ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು. ನಂತರ ಆಯೋಗವು ಮುಂದಿನ ಪ್ರಕ್ರಿಯೆಯನ್ನು ಪ್ರಾರಂಭಿಸ ಬಹುದು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಚುನಾವಣಾ ಆಯೋಗದ ಪರ ಪದಾಂಕಿತ ಹಿರಿಯ ವಕೀಲ ಕೆ.ಎನ್.ಫಣೀಂದ್ರ, ‘ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸುವ ಹಾಗೂ ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ’ ಎಂಬ ಅಂಶವನ್ನು ಪುನರುಚ್ಚರಿಸಿದರು.

‘ಕೆಲ ನಗರ ಸ್ಥಳೀಯ ಸಂಸ್ಥೆಗಳಿ ಗಷ್ಟೇ ವಾರ್ಡ್‌ವಾರು ಪುನರ್ ವಿಂಗಡಣೆ ಮಾಡಬೇಕಿದೆ. ಹಾಗಾಗಿ, ಮೀಸಲಾತಿ ನಿಗದಿ ಪ್ರಕ್ರಿಯೆ ಆರಂಭಿಸುತ್ತಿದ್ದಂತೆಯೇ, ಅದರ ಜೊತೆಯಲ್ಲೇ ಮತದಾರರ ಪಟ್ಟಿ ತಯಾರಿಸಲು ಆಯೋಗಕ್ಕೆ ಅನುಮತಿ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯ ಪೀಠ, ‘ನಗರ ಸ್ಥಳೀಯ ಸಂಸ್ಥೆಗಳಿಗೆ ಯಾವಾಗ ಚುನಾವಣೆ ನಡೆಸುತ್ತೀರಿ? ವಾರ್ಡ್‌ವಾರು ಮರುವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ಯಾವ ಕಾಲಮಿತಿಯಲ್ಲಿ ಮುಗಿಯಲಿದೆ? ಈ ಪ್ರಕ್ರಿಯೆ ನಡೆಯುವಾಗಲೇ ಆಯೋಗ ಮತದಾರರ ಪಟ್ಟಿ ತಯಾರಿಸುವ ಕಾರ್ಯ ನಡೆಸಬಹುದೇ ಎಂಬ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಇದೇ 5ರಂದು ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸಭೆ ನಡೆಸಿ ಅದರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ಸೂಚಿಸಿ ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಿತು.

‘ಸರ್ಕಾರಕ್ಕೆ ಚುನಾವಣೆ ಬೇಕಿಲ್ಲ’

‘ವಾರ್ಡ್‌ವಾರು ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ನಮ್ಮದೇನೂ ಅಡ್ಡಿಯಿಲ್ಲ. ಒಂದೊಮ್ಮೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದೇ ಆದಲ್ಲಿ, ಎಲ್ಲ ಅರ್ಜಿದಾರರೂ ತಮ್ಮ ಮನವಿಯಿಂದ ಹಿಂದೆ ಸರಿಯಲಿದ್ದಾರೆ. ಆದರೆ, ಅಸಲಿಗೆ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯೇ ಬೇಕಿಲ್ಲ’ ಎಂದು ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ಎಸ್.ಬಸವರಾಜ್ ಆರೋಪಿಸಿದರು.

ವಿಚಾರಣೆ ವೇಳೆ ವಾದ ಮಂಡಿಸಿದ ಅವರು, ‘ಎಷ್ಟು ಸಾಧ್ಯವೋ ಅಷ್ಟು ಬೇಗ ಸ್ಥಳೀಯ ಸಂಸ್ಥೆಗಳನ್ನು ಆಡಳಿತಾಧಿಕಾರಿಗಳ ವಶಕ್ಕೆ ಒಪ್ಪಿಸುವ ಉದ್ದೇಶ ಸರ್ಕಾರಕ್ಕೆ ಇದ್ದಂತಿದೆ. ಆಡಳಿತಾಧಿಕಾರಿಗಳ ನೇಮಕಕ್ಕೆ ಯಾಕಿಷ್ಟು ಆತುರಪಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಏಳೆಂಟು ವರ್ಷಗಳಿಂದ ಚುನಾವಣೆ ನಡೆದಿಲ್ಲ. ಪಂಚಾಯಿತಿಗಳಿಗೂ ನಾಲ್ಕು ವರ್ಷಗಳಿಂದ ಚುನಾವಣೆ ಆಗಿಲ್ಲ. ಈಗ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಿದರೆ, ಕನಿಷ್ಠ ಒಂದು ವರ್ಷದ ತನಕ ಸರ್ಕಾರ ಚುನಾವಣೆ ನಡೆಸುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ಅವಧಿ ಮುಗಿದ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ತಮ್ಮ ಅವಧಿ ವಿಸ್ತರಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿಯೆ ಸಕಾಲದಲ್ಲಿ ಚುನಾವಣೆಗಳನ್ನು ನಡೆಸುವಂತೆ ನ್ಯಾಯಾಲಯ ಸೂಚನೆ ನೀಡುವ ಸಾಧ್ಯತೆಗಳಿವೆ.ಇದರಿಂದ ಅರ್ಜಿ ಸಲ್ಲಿಸಿದ ಸದಸ್ಯರಿಗೆ ಅವಧಿ ವಿಸ್ತರಿಸುವ ಸಾಧ್ಯತೆಗಳು ಕ್ಷೀಣವಾಗಿವೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!