ಪಂಚಾಯಿತಿ ಸದಸ್ಯನ ಸದಸ್ಯತ್ವ ರದ್ದು
ಸ್ವಂತ ಉದ್ದಿಮೆಯಿಂದ ಪಂಚಾಯಿತಿಗೆ ಸಾಮಗ್ರಿ ಪೂರೈಕೆ
ಹಲಗೂರು: ಸೆ.೧೩.ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ಉರುಫ್ ಕೆ.ಸುರೇಂದ್ರ ಅವರ ಸದಸ್ಯತ್ವ ರದ್ದುಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಡಿ.ರಂದೀಪ್ ಶುಕ್ರವಾರ ಅದೇಶ ಹೊರಡಿಸಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರಾದ ಸಚಿನ್ ತಮ್ಮ ಪತ್ನಿ ಮಾಲೀಕತ್ವದಲ್ಲಿರುವ ಸಚಿನ್ ಎಲೆಕ್ಟ್ರಾನಿಕ್ಸ್‌ನಿಂದ ಹಲಗೂರು ಗ್ರಾಮ ಪಂಚಾಯಿತಿಗೆ ಸಾಮಗ್ರಿಗಳನ್ನು ಸರಬರಾಜು ಮಾಡಿ ಬಿಲ್ ಮೊತ್ತವಾದ ₹1.28 ಲಕ್ಷ ಗಳನ್ನು ಸ್ವೀಕರಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ (43) ಎ’ ಅನ್ನು ಉಲ್ಲಂಘಿಸಿರುವ ಆರೋಪ ಕುರಿತು ವಿಚಾರಣೆ ನಡೆಸಲಾಗಿತ್ತು.
ಸದರಿಯವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ವಿವಿಧ ಹಂತದ ವಿಚಾರಣೆ ನಡೆಸಿ, ಸಲ್ಲಿಸಿರುವ ವರದಿಯಲ್ಲಿ ಸುರೇಂದ್ರ ಅವರು ತಮ್ಮ ಸ್ವಂತ ಉದ್ದಿಮೆಯಾದ ಶ್ರೀ ಸಚಿನ್ ಎಲೆಕ್ಟ್ರಾನಿಕ್ ನಿಂದ ಹಲಗೂರು ಗ್ರಾಮ ಪಂಚಾಯತಿಯ ವತಿಯಿಂದ ಸಾಮಾನ್ಯ ಸಭೆಯಲ್ಲಿ ಸಾಮಾಗ್ರಿ ಖರೀದಿ ಸಂಬಂಧ ಯಾವುದೇ ಚರ್ಚೆ ನಡೆಸದೇ, ನಿಯಮಾನುಸಾರ ಟೆಂಡರ್ ಹಾಗೂ ದರಪಟ್ಟಿ ಸ್ವೀಕರಿಸದೇ ಅಧ್ಯಕ್ಷರು, ಪಿಡಿಒ ಜಂಟಿ ಸಹಿ ಮಾಡಿ ಚೆಕ್ ವಿತರಣೆ ಮಾಡಲಾಗಿದೆ ಎಂಬುದು ವಿಚಾರಣೆಯಲ್ಲಿ ರುಜುವಾತು ಆಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಚಿನ್ ಎಲೆಕ್ಟ್ರಾನಿಕ್ ಸದಸ್ಯರ ಸ್ವಂತ ಉದ್ದಿಮೆ ಎಂದು ಅಧ್ಯಕ್ಷರಿಗೆ ಗೊತ್ತಿದ್ದರೂ ಸಹ ಸಾಮಗ್ರಿ ಖರೀದಿಗೆ ಬಿಲ್ ಪಾವತಿಸಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಅಧ್ಯಕ್ಷರ ವಿರುದ್ದ ಕರ್ನಾಟಕ ಗ್ರಾಮ ಸ್ವರಾಜ್ ಅಧಿನಿಯಮ-1983 ರ ಪ್ರಕರಣ 43 ‘ಎ’ ಅಡಿ ಕ್ರಮವಹಿಸಲು, ಪಿಡಿಒ ವಿರುದ್ಧ ಕರ್ನಾಟಕ ನಾಗರೀಕ ಸೇವಾ ನಿಯಮಗಳು-1957 ರನ್ವಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಸಿಇಒ ಅವರಿಗೆ ಪತ್ರದಲ್ಲಿ ತಿಳಿಸಲಾಗಿದೆ.
ಪ್ರಕರಣದ ಆರೋಪ ರುಜುವಾತು ಆದ ಪರಿಣಾಮ ಸಚಿನ್ ಅವರ ಸದಸ್ಯತ್ವ ಸ್ಥಾನವನ್ನು ರದ್ದುಪಡಿಸಲಾಗಿದೆ. ಜೊತೆಗೆ ಮುಂದಿನ ಆರು ವರ್ಷಗಳ ಅವಧಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಲಾಗಿದೆ.