ಮದ್ದೂರು ಪುರಸಭೆ ನಗರಸಭೆಯಾಗಿ ಘೋಷಣೆ
ಮಂಡ್ಯ: ಆ.೯.ಹಲವು ವಿರೋಧಗಳ ನಡುವೆ ಮದ್ದೂರು ಪುರಸಭೆಯನ್ನು ನಗರಸಭೆಯಾಗಿ ಸರ್ಕಾರ ಆದೇಶ ಹೊರಡಿಸಿದೆ.
ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಹೊರಡಿಸಿರುವ ಆದೇಶದಲ್ಲಿ ಹಾಲೀ ಮದ್ದೂರು ಪಟ್ಟಣ ಸೇರಿದಂತೆ ಚಾಮನಹಳ್ಳಿ ದೇಶಹಳ್ಳಿ ಗೆಜ್ಜಲಗೆರೆ ಸೋಮನಹಳ್ಳಿ ಕೆ ಕೋಡಿಹಳ್ಳಿ ರುದ್ರಾಕ್ಷೀಪುರ ಅಗರಲಿಂಗನ ದೊಡ್ಡಿ ಗೊರವನ ಹಳ್ಳೀ ಸೇರಿದಂತೆ ನಾಲ್ಕು ಗ್ರಾಮ ಪಂಚಾಯತಿಗಳ ಎಂಟು ಹಳ್ಳಿಗಳನ್ನು ನೂತನ ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಲಾಗಿದೆ.
ಮದ್ದೂರು ನಗರಸಭೆ ಗ್ರೇಡ್ ೨ ನಗರಸಭೆಯಾಗಿದ್ದು.ಅದರನ್ವಯ ಸರ್ಕಾರದ ಆರ್ಥಿಕ ಇಲಾಖೆಯು ಗ್ರೇಡ್ ೨ ನಗರಸಭೆಗೆ ಅವಶ್ಯವಿರುವ ಹುದ್ದೆಗಳಿಗೆ ಅನುಮೋದನೆ ನೀಡಬೇಕಿದೆ.
ಮದ್ದೂರು ನಗರಸಭೆಯು ಜಿಲ್ಲೆಯ ಎರಡನೇ ನಗರಸಭೆಯಾಗಿದ್ದು ಜಿಲ್ಲೆಯಲ್ಲಿ ಇನ್ನುಳಿದ ಸ್ಥಳೀಯ ಸಂಸ್ಥೆಗಳು ಪುರಸಭೆ ಪಟ್ಟಣ ಪಂಚಾಯತಿಯಾಗಿದ್ದು ಮಳವಳ್ಳಿ ಎರಡನೇ ಹಂತದಲ್ಲಿ ನಗರಸಭೆಯಾಗಿ ಮೇಲ್ದರ್ಜೆಗೆ ಏರುವ ಅವಕಾಶ ಹೊಂದಿದೆ.
ವಿರೋಧ:ಮದ್ದೂರು ಪುರಸಭೆಯನ್ನು ನಗರಸಭೆಯಾಗಿ ಪರಿವರ್ತಿಸಿ ಗ್ರಾಮಪಂಚಾಯಿತಿಗಳನ್ನು ಸೇರ್ಪಡೆಗೊಳಿಸುವ ಕುರಿತು ಸಾಕಷ್ಟು ಪ್ರತಿಭಟನೆ ಹೋರಾಟಗಳು ನಡೆದಿದ್ದವು.ಇವೆಲ್ಲವನ್ನೂ ಬದಿಗಿರಿಸಿ ಸ್ಥಳೀಯ ಶಾಸಕ ಕದಲೂರು ಉದಯ್ ನಗರಸಭೆಗೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೆಜ್ಜಲಗೆರೆ ಸೋಮನಹಳ್ಳಿ ಕೈಗಾರಿಕ ವಲಯಗಳು ನಗರಸಭೆಗೆ ಸೇರ್ಪಡೆಯಾಗುವುದರಿಂದ ಇಲ್ಲಿ ಸಂಗ್ರಹವಾಗುವ ಆಸ್ತಿ ತೆರಿಗೆ ನಗರಸಭೆಗೆ ಸಂದಾಯವಾಗಲಿದ್ದು ಮದ್ದೂರು ಪಟ್ಟಣದ ಸಮಗ್ರ ಅಭಿವೃದ್ದಿಗೆ ಇದು ಕಾರಣವಾಗಲಿದೆ ಎಂಬ ನಿರೀಕ್ಷೆಗಳು ಗರಿಗೆದರಿವೆ.