- ಕಾರ್ಮಿಕರ ಸಹಕಾರ ಸಂಘ ಸ್ಥಾಪನೆಗೆ ಸಂಪುಟ ಸಭೆ ತೀರ್ಮಾನ
ಬೆಂಗಳೂರು: ಸೆ ೧೧.ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಗುತ್ತಿಗೆ ನೌಕರರ ಜಿಲ್ಲಾ ಕಾರ್ಮಿಕರ ಸೇವೆಗಳ ಸಹಕಾರ ಸಂಘ(ನಿಯಮಿತ) ಸ್ಥಾಪನೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿದ್ದು ಸರಕಾರಿ ಇಲಾಖೆಗಳಿಗೆ ಮಾನವ ಸಂಪನ್ಮೂಲವನ್ನು ಪೂರೈಸುವ ಕಾರ್ಮಿಕರ ಸಹಕಾರ ಸಂಘ ರಚಿಸಲು ತೀರ್ಮಾನಿಸಲಾಯಿತು.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರು ಗುತ್ತಿಗೆ ಪದ್ದತಿ ಬದಲು ನೇರಪಾವತಿ ಜಾರಿಗೊಳಿಸುವಂತೆ ತೀವ್ರ ಹೋರಾಟ ನಡೆಸಿದ ಬೆನ್ನಲ್ಲೆ ಸರಕಾರ ಈ ತೀರ್ಮಾನ ಕೈಗೊಂಡಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಾರ್ಮಿಕರ ಸೊಸೈಟಿ ರಚಿಸುವ ಪ್ರಯತ್ನಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿರಲಿಲ್ಲ.ಈ ನಡುವೆ ಗುತ್ತಿಗೆ ಏಜೆನ್ಸಿಗಳು ಹೈಕೋರ್ಟ್ ಮೆಟ್ಟಿಲೇರಿ ಕಾರ್ಮಿಕ ಸಚಿವರ ಸೊಸೈಟಿ ಪ್ರಸ್ತಾವಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದವು.
ಇದರಿಂದ ಎಚ್ಚೆತ್ತ ಸರಕಾರ ಏಕಕಾಲಕ್ಕೆ ಹೊರಗುತ್ತಿಗೆ ನೌಕರರ ನೇರಪಾವತಿ ಬೇಡಿಕೆಯನ್ನು ಹತ್ತಿಕ್ಕಲು ಕಾರ್ಮಿಕರ ಸಹಕಾರ ಸಂಘ ರಚಿಸಲು ತೀರ್ಮಾನಿಸಿದೆ.ಈ ತೀರ್ಮಾನ ದಿಂದ ಮುಂದಿನ ದಿನಗಳಲ್ಲಿ ಹೊರಗುತ್ತಿಗೆ ಏಜೆನ್ಸಿ ಬದಲು ಕಾರ್ಮಿಕರ ಸಹಕಾರ ಸಂಘಗಳೆ ಏಜೆನ್ಸಿ ಮಾದರಿಯಲ್ಲಿ ಹೊರಗುತ್ತಿಗೆ ಸೇವೆ ಒದಗಿಸುವ ಏಜೆನ್ಸಿಗಳ ರೀತಿ ರೂಪಿಸಲಾಗುತ್ತದೆ.ಇದರಿಂದ ಹೊರಗುತ್ತಿಗೆ ನೌಕರರು ಖಾಯಂಗೊಳ್ಳುವ.ನೇರಪಾವತಿ ಆಗುವ ಯಾವುದೆ ಅವಕಾಶ ಇರುವುದಿಲ್ಲ.
ಮಾತು ತಪ್ಪಿದ ಕಾಂಗ್ರೆಸ್ ಸರಕಾರ:ಚುನಾವಣಾ ಪೂರ್ವದಲ್ಲಿ ನಗರ ಸ್ಥಳೀಯ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡುವ ಪ್ರಣಾಳಿಕೆ ಹೊರಡಿಸಿದ್ದ ಕಾಂಗ್ರೆಸ್ ಪಕ್ಷ ಈ ತೀರ್ಮಾನದೊಂದಿಗೆ ಉಲ್ಟಾ ಹೊಡೆದಿದೆ.ಸರಕಾರದ ಈ ತೀರ್ಮಾನದ ವಿರುದ್ದ ರಾಜ್ಯಾದ್ಯಂತ ಹೋರಾಟ ರೂಪಿಸುವುದಾಗಿ ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಧ್ಯಕ್ಷ ಎಂ.ಬಿ.ನಾಗಣ್ಣಗೌಡ ಎಚ್ಚರಿಸಿದ್ದಾರೆ.ಮುಂದುವರಿದು ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮೂಲೆಗೆ ಸೇರಿಸುವಂತೆ ಅವರು ಕರೆ ನೀಡಿದ್ದಾರೆ.