ಅಕ್ರಮ ಲೇಔಟ್‌ಗಳ ತೆರವು ಮಾಡದ ಅಧಿಕಾರಿಗಳು ವಜಾ
ಅಕ್ರಮ ಲೇಔಟ್‌ಗಳ ನಿರ್ದಾಕ್ಷಿಣ್ಯ ತೆರವು ಕರ್ತವ್ಯ ಲೋಪ ಕಂಡುಬಂದ್ರೆ ದಂಡ: ಬೈರತಿ ಸುರೇಶ್
ಬೆಂಗಳೂರು: ವಿಧಾನ ಪರಿಷತ್ತು
ರಾಜ್ಯದ ನಗರ ಪ್ರದೇಶಗಳಲ್ಲಿ ನಿರ್ಮಾಣಗೊಂಡಿರುವ ಅಕ್ರಮ ಬಡಾವಣೆಗಳನ್ನು ತೆರವುಗೊಳಿಸಲು ವಿಫಲರಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಹೇಳಿದರು.
ಸೋಮವಾರ ಬಿಜೆಪಿ ಸದಸ್ಯ ಸಿ.ಎನ್.ಮಂಜೇಗೌಡ ಅವರು, ನಿಯಮ 330ರಡಿ ಅಕ್ರಮ ಬಡಾವಣೆಗಳ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅನಧಿಕೃತ ಬಡಾವಣೆಗಳ ಮಾಲೀಕರಿಗೆ ನೋಟಿಸ್ ನೀಡುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಒಂದು ವೇಳೆ ಅಕ್ರಮ ಬಡಾವಣೆಗಳನ್ನು ತೆರವುಗೊಳಿಸದಿದ್ದರೆ ಅಂತಹ ಅಧಿಕಾರಿಗಳಿಗೆ 50000ರು.ಗಳವರೆಗೆ ದಂಡ ಮಾತ್ರವಲ್ಲ, ಅಮಾನತು ಇಲ್ಲವೇ ಕೆಲಸದಿಂದ ವಜಾ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ ಎಂದರು. ನಗರ ಪ್ರದೇಶದಲ್ಲಿ ನಿರ್ಮಾಣವಾಗಿರುವ ಅಕ್ರಮ ಬಡಾವಣೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುತ್ತದೆ. ಬಡಾವಣೆ ನಿರ್ಮಾಣ ಮಾಡುವವರು ವಿನ್ಯಾಸ ಅನುಮೋದನೆಯನ್ನು ಪಡೆಯದೆ ನಿರ್ಮಾಣ ಮಾಡಿದರೆ ಅದು ಅಕ್ರಮವಾಗುತ್ತದೆ ಎಂದರು.
ಅಕ್ರಮ ಲೇಔಟ್ ಅವ್ಯಾಹತ:ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಸಗಿ ಬಿಲ್ಡರ್ ಗಳು ಕೃಷಿ ಭೂಮಿಯನ್ನು ಇ-ನಕ್ಷೇ ಮಾಡಿಸಿ ನಿವೇಶನಗಳಾಗಿ ಪರಿವರ್ತಿಸಿ ಗ್ರಾಪಂಗಳಲ್ಲಿ ಖಾತೆ ಮಾಡಿಸುತ್ತಿರುವುದು ಕಂಡುಬಂದಿದೆ.
ಈ ಲೇಔಟುಗಳು ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಾನುಸಾರ ರಸ್ತೆ ಚರಂಡಿ ನಿರ್ಮಿಸದೆ ನಾಗರೀಕ ಸೌಲಭ್ಯಗಳಿಗೆ ನಿವೇಶನ ಮೀಸಲಿರಿಸದೆ ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ
ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೇ ಶಾಮೀಲಾಗಿ ಯಾವುದೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಚಿವರ ಮಾತಿಗೆ ಹೆಚ್ಚಿನ ಮಹತ್ವ ಬಂದಿದೆ.