ಹಳೇ ಮೈಸೂರು, ನ.24: ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ನಗರದ ತ್ಯಾಜ್ಯ ನೀರು ಕಾವೇರಿ ನದಿಗೆ ಸೇರುತ್ತಿರುವುದನ್ನು ಕಂಡು ಉಪ ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ. ಕಾವೇರಿ ನದಿಗೆ ಕೊಳಚೆ ನೀರು ಸೇರಿದಂತೆ ಸೂಕ್ತ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವೆಲ್ಲೆಸ್ಲಿ ಸೇತುವೆ ಬಳಿ ಕಾವೇರಿ ನದಿಗೆ ಹೋಗುತ್ತಿರುವ ಕೊಳಚೆ ನೀರು ತಡೆಗಟ್ಟುವ ಸಂಬಂಧ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾವೇರಿ ನದಿಗೆ ಕೊಳಚೆ ನೀರು ಹೋಗದಂತೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲು ಸಮಿತಿಯನ್ನು ರಚಿಸಿ ಜವಾಬ್ದಾರಿಯನ್ನು ನೀಡಿದರು.
ಶ್ರೀರಂಗಪಟ್ಟಣ ಟೌನ್ ಕೊಳಚೆ ನೀರು ಪಟ್ಟಣದ ರಾಂಪಾಲ್ ರಸ್ತೆಯಿಂದ ಉತ್ತರ ಭಾಗದ ಚಿಕ್ಕಹೊಳೆ (ವಾಟರ್ ಗೇಟ್) ಮೂಲಕ ಹರಿದು ಕೃಷಿ ತೋಟದ ಪಕ್ಕದಲ್ಲಿ ಹರಿದು ಬಿದ್ದಕೋಟೆಯಿಂದ ವೆಲ್ಲೆಸ್ಲಿ ಸೇತುವೆ ಬಳಿಗೆ ಕೊಳಚೆ ನೀರು ಸೇರುತ್ತಿದೆ. ವೆಲ್ಲೆಸ್ಲಿ ಸೇತುವೆಯ ವಾಟರ್ ಗೇಟ್ ಬಳಿಯಲ್ಲಿ ಒಂದು ತಡೆಗೋಡೆ ನಿರ್ಮಿಸಿ ಕಾವೇರಿ ನದಿಗೆ ಕಲುಷಿತ ನೀರು ಸೇರಿದಂತೆ ತಡೆಗಟ್ಟಬಹುದು ಎಂದರು.
ನಂತರ ಬಿದ್ದಕೋಟೆ ಗಣಪತಿ ದೇವಸ್ಥಾನದ ಹತ್ತಿರ ಮತ್ತೋಂದು ತಡೆಗೋಡೆಯನ್ನು ನಿರ್ಮಿಸಿ ಪರ್ಯಾಯ ಮಾರ್ಗವಾಗಿ ಒಂದು ಸೂಕ್ತ ಸ್ಥಳದಲ್ಲಿ ವೆಟ್ ವೆಲ್ ನಿರ್ಮಿಸಿ ವೆಟ್ ವೆಲ್ ಮೂಲಕ ಕಲುಷಿತಗೊಂಡ ನೀರನ್ನು ಮೋಟಾರ್ ಪಂಪ್ ಮೂಲಕ ಪ್ರಸ್ತುತ ಬಿದ್ದಕೋಟೆ ಗಣಪತಿ ದೇವಸ್ಥಾನದ ಮೇಲ್ಭಾಗದಲ್ಲಿರುವ ವೆಟ್ ವೆಲ್ ಮುಖಾಂತರ ಸಂಗ್ರಹಿಸಿ ಎಸ್.ಟಿ.ಪಿ (ಕೊಳಚೆ ನೀರು ಶುದ್ಧೀಕರಣ ಘಟಕ) ಪ್ಲಾಂಟ್ ಗಂಜಾಂಗೆ ಸಾಗಿಸಿ ವೈಜ್ಞಾನಿಕವಾಗಿ ಸಂಸ್ಕರಿಸಿ ಎಂದು ಸೂಚಿಸಿದರು.
ಈಗಾಗಲೇ ವೆಲ್ಲೆಸ್ಲಿ ಸೇತುವೆಯ ವಾಟರ್ ಗೇಟ್ ಬಳಿ ಒಂದು ತಡೆಗೋಡೆಯನ್ನು ನಿರ್ಮಿಸಲಾಗಿದೆ, ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದಾಗಿ ಬಿದ್ದಕೋಟೆ ಗಣಪತಿ ದೇವಸ್ಥಾನದ ಹತ್ತಿರ ಇನ್ನೊಂದು ತಡೆಗೋಡೆ ನಿರ್ಮಿಸಲು ಅಡ್ಡಿಯಾಗಿತ್ತು. ಪ್ರಸ್ತುತ ಪ್ರವಾಹದ ಪ್ರಮಾಣ ಕಡಿಮೆಯಾಗಿದ್ದು ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕಲುಷಿತ ನೀರು ಕಾವೇರಿ ನದಿಗೆ ಸೇರಿದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನ ಯಾದವ್, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಪ್ರತಾಪ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹರ್ಷ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಾಬಾ ಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


