ಮಂಡ್ಯ: ರಾಮನಗರದಲ್ಲಿ ನಿನ್ನೆ ನಡೆದ ವಿಭಾಗೀಯ ಮಟ್ಟದ ಬೆಂಗಳೂರು ದಕ್ಷಿಣ ಹಾಗೂ ಮಂಡ್ಯ ಜಿಲ್ಲೆಯ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರ ಶಿಬಿರದಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದ್ದ ಮಂಡ್ಯ ತಾಲ್ಲೂಕಿನ ಚಿಕ್ಕಮಂಡ್ಯ ಪ್ರೌಢಶಾಲೆಗೆ ಶಾಲಾ ಶಿಕ್ಷಣ ಇಲಾಖೆ ಕೊಡಮಾಡುವ 25 ಸಾವಿರ ರೂ.ಗಳ ನಗದು ಬಹುಮಾನ ದೊರೆತಿದೆ.
2024-25ನೇ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶವನ್ನು ದಾಖಲಿಸಿ, ಉತ್ತಮ ಸಾಧನೆ ತೋರಿದ ಚಿಕ್ಕಮಂಡ್ಯ ಪ್ರೌಢಶಾಲೆಗೆ ಇಪ್ಪತ್ತೈದು ಸಾವಿರ ರೂಗಳ ನಗದು ಬಹುಮಾನವನ್ನು ಪ್ರಕಟಿಸಲಾಯಿತು. ಇದೇ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಎಚ್.ಎನ್. ದೇವರಾಜು ಅವರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ಮಹೇಶ್ ಅವರು ಈ ಗೌರವ ಪುರಸ್ಕಾರವನ್ನು ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರ ಶ್ರಮಕ್ಕೆ ಸಂದ ಫಲ
ಸರ್ಕಾರಿ ಶಾಲಾ ಮಕ್ಕಳು ಮತ್ತು ಶಿಕ್ಷಕರ ಕೌಶಲ್ಯಾಭಿವೃದ್ಧಿಗೆ ಶ್ರಮಿಸುತ್ತಿರುವ ಎಚ್.ಎನ್. ದೇವರಾಜು ಅವರು ಮಾದರಿ ಶಿಕ್ಷಕರಾಗಿದ್ದು, ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಹತ್ತು ಹಲವು ಯೋಜನೆಗಳನ್ನು ಚಿಕ್ಕಮಂಡ್ಯ ಪ್ರೌಢಶಾಲೆಯಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ. ಸರ್ಕಾರಿ ಶಾಲೆಯ ಕಡೆಗೆ ಗ್ರಾಮೀಣ ಮಕ್ಕಳ ಆಸಕ್ತಿ ಹೆಚ್ಚಿಸಿರುವುದನ್ನು ಗಮನಿಸಿ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಘೋಷಿಸಲಾಗಿದೆ. ಈಗ ಈ ಪ್ರಶಸ್ತಿ ನಮ್ಮ ಶಾಲೆಗೆ ದೊರೆತಿರುವುದು ಸಂತಸ ತಂದಿದೆ.
-ಸಿ.ಎಂ. ಮಹೇಶ್, ಎಸ್ಡಿಎಂಸಿ ಅಧ್ಯಕ್ಷರು
ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆ


