‘ಜೆಸಿಬಿ’ಪಕ್ಷಗಳಿಂದ ಕೋಮುಗಲಭೆ ಹೆಚ್ಚಳ: ಕೆಆರ್‌ಎಸ್ ಆರೋಪ
ಮಂಡ್ಯ: ಸೆ.೧೨.ರಾಜ್ಯದಲ್ಲಿ ಕೋಮು ಸಂಘರ್ಷ ಹೆಚ್ಚಾಗಲು ಜೆಡಿಎಸ್, ಕಾಂಗ್ರೆಸ್, ಬಿಜೆಪಿ (ಜೆ.ಸಿ.ಬಿ) ಪಕ್ಷಗಳೇ ಕಾರಣವಾಗಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದಕ್ಕೆ ಪೊಲೀಸರು ಅವಕಾಶ ನೀಡದೇ ಶಾಂತಿ ಕಾಪಾಡಲು ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ರಘು ಜಾಣಗೆರೆ ಆಗ್ರಹಿಸಿದರು.
ರಾಜಕಾರಣಿಗಳು ಕೇವಲ ಮತಕ್ಕಾಗಿ ಸಮುದಾಯಗಳನ್ನು ಎತ್ತಿಕಟ್ಟಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಪರಾಧ ಚಟುವಟಿಕೆಗಳು ಹೆಚ್ಚುವ ಮೂಲಕ ರಾಜ್ಯದಲ್ಲಿ ಅಶಾಂತಿ ವಾತಾವರಣ ಉಂಟಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.
ಕೋಮುಗಲಭೆಗಳು ಪದೇಪದೇ ನಡೆಯುತ್ತಿರುವುದರಿಂದ ಸಮುದಾಯಗಳ ನಡುವಿನ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಮದ್ದೂರಿನಲ್ಲಿ ನಡೆದ ಕೋಮು ಗಲಭೆಯನ್ನು ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಅಮಾಯಕರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ವಿಷಾದಿಸಿದರು.
ಕೆಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜಿ.ನಾಗರಾಜು, ಉಪಾಧ್ಯಕ್ಷ ಹೆಬ್ಬಕವಾಡಿ ಮಲ್ಲೇಶ್, ಸಹಕಾರ್ಯದರ್ಶಿ ಸಿ.ಜೀವನ್, ನಾಗರಾಜು, ಪ್ರಮೋದ್, ಹರೀಶ್ ಕಂಪ್ಲಾಪುರ ಇದ್ದರು.