*ತಮಿಳು ಕಾಲೋನಿ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮಕೈಗೊಳ್ಳಿ:ಡಾ. ಕುಮಾರ*
ತಮಿಳು ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಸಂಬಂಧಿಸದಂತೆ ನಗರಸಭೆ ವತಿಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೂಡಲೇ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಅಧಿಕಾರಿಗಳಿಗೆ ಹೇಳಿದರು.
ಅವರು ಇಂದು ನ್ಯೂ ತಮಿಳು ಕಾಲೋನಿಗೆ ಮೂಲಭೂತ ಸೌಲಭ್ಯ ಒದಗಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮೂಲಭೂತ ವ್ಯವಸ್ಥೆಗಳಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೀದಿ ದೀಪದ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಲ್ಪಿಸಬೇಕು ಹಾಗೂ ನಂತರ ಹಂತ ಹಂತವಾಗಿ ರಸ್ತೆ ಕಾಮಗಾರಿ, ಚರಂಡಿ ವ್ಯವಸ್ಥೆಗಳನ್ನು ಪೂರ್ಣಗೊಳಿಸಿ ಎಂದು ಹೇಳಿದರು.
ಎಸ್ ಸಿ ಪಿ ಯೋಜನೆಯಡಿಯಲ್ಲಿ ಪ್ರೌಢ ಶಾಲಾ, ಪಿಯುಸಿ ಹಾಗೂ ಪದವಿ ವ್ಯಾಸಂಗ ಮಾಡುತ್ತಿರುವ ತಮಿಳು ಕಾಲೋನಿ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ಒದಗಿಸಲು ಕ್ರಮ ಕೈಗೊಳ್ಳಿ ಅಧಿಕಾರಿಗಳಿಗೆ ತಿಳಿಸಿದರು.
ತಮಿಳು ಕಾಲೋನಿ ನಿವಾಸಿಗಳ ಇ -ಖಾತಾ ಮಾಡಿಸುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಬಾಕಿಯಿರುವ ಇ -ಖಾತೆಗಳನ್ನು ಮೆನೆ-ಮನೆ ಹೋಗಿ ಶೀಘ್ರದಲ್ಲೆ ಪೂರ್ಣಗೊಳಿಸಬೇಕು ಹಾಗೂ ನಿವೇಶನ ರಹಿತರಿಗೆ ವಸತಿ ಒದಗಿಸಲು ಸ್ಥಳ ಪರಿಶೀಲಿಸಿ ಎಂದು ಹೇಳಿದರು.
ಕಾಳಪ್ಪ ಬಡಾವಣೆಯ ಹಕ್ಕುಪತ್ರ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಿ ಹಾಗೂ ಮದ್ದೂರು ತಮಿಳು ಕಾಲೋನಿಯ ನಿವೇಶನ ಹಂಚಿಕೆಯ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ ಎಂದರು.
ಸಭೆಯಲ್ಲಿ ತಹಸೀಲ್ದಾರ್ ವಿಶ್ವನಾಥ್, ಉಪವಿಭಾಗ ಅಧಿಕಾರಿ ಶಿವಮೂರ್ತಿ ಹಾಗೂ ನಗರಾಭಿವೃದ್ಧಿ ಕೋಶ ಜಂಟಿ ನಿರ್ದೇಶಕರಾದ ನರಸಿಂಹ ಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


