ಮಂಡ್ಯ:ಜೂ:೯.ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ಸ್ಥಳದಲ್ಲಿರುವ ತಮಿಳು ಕಾಲೋನಿ ನಿವಾಸಿಗಳಿಗೆಂದು ಮಂಡ್ಯ ಕೆರೆ ಅಂಗಳದಲ್ಲಿ ನಿರ್ಮಿಸಿರುವ ಮನೆಗಳನ್ನು ಅನ್ಯರಿಗೆ ವಿತರಿಸಲು ನಿರ್ಧಾರ ಕೈಗೊಂಡಿರುವ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರ ನಿರ್ಧಾರ ಮೆಡಿಕಲ್ ಕಾಲೇಜು ಹಾಗೂ ಮಂಡ್ಯ ಜಿಲ್ಲೆಯ ಹಿತಾಸಕ್ತಿಗೆ ವಿರುದ್ದವಾದ ತೀರ್ಮಾನವಾಗಿದ್ದು ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಭವನದಲ್ಲಿ ಮಾತನಾಡಿದ ಅವರು.
ಈ ಸಂಬಂದ ಜೂ ೩ ರಂದು ಬೆಂಗಳೂರಿನಲ್ಲಿ ಮಂಡ್ಯ ನಗರದ ಕೊಳಗೇರಿಗಳ ಕುರಿತು ನಡೆದ ಸಭೆಯಲ್ಲಿ ಈ ರೀತಿಯ ತೀರ್ಮಾನ ಕೈಗೊಳ್ಳಲಾಗಿದೆ.ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ಸ್ಥಳದಲ್ಲಿರುವ ತಮಿಳು ಕಾಲೋನಿ ನಿವಾಸಿಗಳನ್ನು ಸ್ಥಳಾಂತರ ಮಾಡಿ ಸೂಕ್ತ ಪುನರ್ವಸತಿ ಕಲ್ಪಿಸುವಂತೆ ರಾಜ್ಯ ಉಚ್ಚನ್ಯಾಯಾಲಯ ಆದೇಶ ಮಾಡಿತ್ತು.ಅದರನ್ವಯ ೨೦೧೮ರಲ್ಲಿ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀಯವರು ರಾಜೀವ್ ಆವಾಸ್ ಯೋಜನೆಯಡಿ ತಮಿಳು ಕಾಲೋನಿ ನಿವಾಸಿಗಳಿಗೆ ೩೮ ಕೋಟಿ ವೆಚ್ಚದಲ್ಲಿ ೫೭೬ ಮನೆಗಳನ್ನು ನಿರ್ಮಿಸಿದ್ದಾರೆ.
ಈಗ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ತಮಿಳು ಕಾಲೋನಿ ನಿವಾಸಿಗಳನ್ನು ಈ ಮನೆಗಳಿಗೆ ಸ್ಥಳಾಂತರಿಸುವ ಬದಲು ಆಸ್ಪತ್ರೆ ಪಕ್ಕದಲ್ಲೇ ಉಳಿಸಿ ತಮ್ಮ ಓಟ್ ಬ್ಯಾಂಕ್ ರಾಜಕೀಯ ಮಾಡಲು ಹೊರಟಿದ್ದಾರೆ.ಇದು ಮಂಡ್ಯ ಜಿಲ್ಲೆಯ ಹಿತಾಸಕ್ತಿಗೆ ವಿರುದ್ದವಾದ ತೀರ್ಮಾನವಾಗಿದೆ.ಈ ರೀತಿಯಲ್ಲಿ ತಮಿಳು ಕಾಲೋನಿ ನಿವಾಸಿಗಳನ್ನು ಇಲ್ಲಿಯೆ ಉಳಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಈ ಸಂಬಂದದ ನ್ಯಾಯಾಲಯದ ಸಣ್ಣ ಪ್ರಕರಣವನ್ನು ಸಹ ಸರಿಯಾಗಿ ನಿರ್ವಹಿಸದೆ ನಿರ್ಲಕ್ಷ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು.
ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಪ್ರತಿ ನಿತ್ಯ ಮಂಡ್ಯ ಮಾತ್ರವಲ್ಲದೆ ನೆರೆಯ ತುಮಕೂರು ಜಿಲ್ಲೆಯ ಕುಣಿಗಲ್ ಚನ್ನಪಟ್ಟಣ ರಾಮನಗರ ನರಸೀಪುರ ತಾಲೋಕಿನಿಂದ ಮೂರು ಸಾವಿರ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರಿ ಸುಮಾರು ೩೦ಲಕ್ಷ ಮಂದಿಗೆ ಈ ಆಸ್ಪತ್ರೆಯೆ ಆರೋಗ್ಯದ ದಾರಿಯಾಗಿದೆ.
ಈ ಆಸ್ಪತ್ರೆಗೆ ಅಪಘಾತ ಮೊದಲಾದ ತುರ್ತು ಚಿಕಿತ್ಸೆಯ ಟ್ರಾಮಾಕೇರ್.ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ. ಜಯದೇವ ಮಾದರಿಯ ಹೃದ್ರೋಗ ಕೇಂದ್ರದ ಅವಶ್ಯವಿದೆ.ಈ ಎಲ್ಲ ಕಾಮಗಾರಿಗೆ ಭೂಮಿ ಅವಶ್ಯವಿದೆ.ಈಗಾಗಲೇ ಇಲ್ಲಿ ಸ್ಥಳಾವಕಾಶ ಕೊರತೆ ಕಾರಣಕ್ಕೆ ನೂರು ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಬಿ ಹೊಸೂರು ಕಾಲೋನಿಗೆ ಹೋಗಿದೆ.
ಈಗಿರುವಾಗ ರಾಜ್ಯ ಸರ್ಕಾರ ಆಸ್ಪತ್ರೆ ಸ್ಥಳವನ್ನು ವಶಕ್ಕೆ ಪಡೆದು ಮೆಡಿಕಲ್ ಕಾಲೇಜು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವ ಬದಲು ತಮಿಳು ಕಾಲೋನಿ ನಿವಾಸಿಗಳನ್ನು ತಮ್ಮ ಓಟ್ ಬ್ಯಾಂಕ್ ಆಗಿ ಹಿಡಿದಿಟ್ಟುಕೊಳ್ಳಲು ತಮಿಳು ನಿವಾಸಿಗಳನ್ನು ಆಸ್ಪತ್ರೆ ಪಕ್ಕದಲ್ಲಿಯೆ ಉಳಿಸಲು ತೀರ್ಮಾನಿಸಿರುವುದು ನಿಜಕ್ಕು ಮಂಡ್ಯ ಜಿಲ್ಲೆಗೆ ಅಪಮಾನಕಾರಿಯಾದ ತೀರ್ಮಾನವಾಗಿದೆ.ಜಿಲ್ಲೆಯ ೨೩ ಲಕ್ಷ ಜನರ ಹಿತಾಸಕ್ತಿಗಿಂತ ಒಂದುವರೆ ಸಾವಿರ ತಮಿಳರ ಮತಗಳು ಇವರಿಗೆ ಮುಖ್ಯವಾಗಿದೆ.
ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯಾವುದೆ ದೂರ ದೃಷ್ಟಿಯಿಲ್ಲದೆ ಚುನಾವಣೆ ಗೆಲ್ಲುವುದನ್ನೆ ಗುರಿಯಾಗಿಸಿಕೊಂಡ ನಾಯಕರಿಂದಾಗಿ ಅಸಿಟೇಟ್ ಕಾರ್ಖಾನೆಯ ೧೨೫ ಎಕರೆ ಖಾಸಗಿಯವರ ಪಾಲಾಯಿತು.
ಮಂಜುಶ್ರೀಯಂಥ ದಿಟ್ಟ ಅಧಿಕಾರಿ ತೋರಿದ ದಿಟ್ಟತನ ಜಿಲ್ಲೆಯ ಜನಪ್ರತಿನಿಧಿಗಳಿಗೆ ಇಲ್ಲವಾಗಿದೆ.ನಾಲ್ಕು ಬಾರಿ ಮನೆಗಳನ್ನು ಕಟ್ಟಿಕೊಟ್ಟರು ಸ್ಥಳಾಂತರಗೊಳ್ಳದೆ ಜಿಲ್ಲೆಯ ಅಭಿವೃದ್ಧಿಗೆ ಸವಾಲು ಎಸೆಯುತ್ತಿರುವ ತಮಿಳು ಕಾಲೋನಿ ನಿವಾಸಿಗಳ ಸ್ಥಳಾಂತರಿಸಿ ಮೆಡಿಕಲ್ ಕಾಲೇಜು ಅಭಿವೃದ್ಧಿಗೆ ರಾಜ್ಯ ಸರಕಾರ ಅಗತ್ಯ ತೀರ್ಮಾನ ಕೈಗೊಳ್ಳಬೇಕು.
ಇಲ್ಲವಾದಲ್ಲಿ ಮಂಡ್ಯ ಜಿಲ್ಲೆಯ ಜನರೊಡಗೂಡಿ ಅಗತ್ಯ ಜನಾಂದೋಲನಾ ರೂಪಿಸಲಾಗುವುದು.ಇದಕ್ಕಾಗಿ ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು ಈಗಾಗಲೇ ಕೈಜೋಡಿಸುವ ಭರವಸೆ ನೀಡಿವೆ.
ಜಿಲ್ಲೆಯ ಅಭಿವೃದ್ದಿಗೆ ಮಾರಕವಾಗಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಖಂಡಿಸಿ ಶೀಘ್ರದಲ್ಲೆ ಖಂಡನಾ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮುದ್ದೇಗೌಡ.ವೆಂಕಟೇಶ್(ಆಟೋ ಘಟಕ) ಸೂನಗನಹಳ್ಳಿ ಮಹೇಶ್ ಎಸ್ ಕೆ ಶಿವರಾಮ ಉಪಸ್ಥಿತರಿದ್ದರು.