ದಾವಣಗೆರೆ ಮಹಾನಗರ ಪಾಲಿಕೆಯ ವಲಯ ಕಚೇರಿ-2ರಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ರೂಪಾ.ಹೆಚ್. ಅವರನ್ನು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಅಮಾನತುಗೊಳಿಸಿದ್ದಾರೆ. ನಗದು ವಹಿಯಲ್ಲಿ ತಪ್ಪು ನಮೂದು ಮಾಡಿದ್ದು ತಪಾಸಣೆಗೆ ಅಸಹಕಾರ ತೋರಿದ್ದು ಮತ್ತು ಅನಧಿಕೃತ ವ್ಯಕ್ತಿಯನ್ನು ಕೆಲಸದಲ್ಲಿ ನಿಯೋಜಿಸಿದ್ದು ಅಮಾನತಿಗೆ ಕಾರಣವಾಗಿವೆ.
ಘಟನೆಯ ವಿವರ
ಜೂನ್ 6ರಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅನಿರೀಕ್ಷಿತವಾಗಿ ವಲಯ ಕಚೇರಿ-2ಗೆ ಭೇಟಿ ನೀಡಿ ಪಾಲಿಕೆಯ ‘ಎ’ ಮತ್ತು ‘ಬಿ’ ಖಾತೆಗಳ ಆಂದೋಲನದ ಪ್ರಗತಿಯನ್ನು ಪರಿಶೀಲಿಸುತ್ತಿದ್ದರು. ಈ ಸಮಯದಲ್ಲಿ ಸಹಾಯಕಿ ರೂಪಾ ತಮ್ಮ ಬಳಿ ₹500 ಮಾತ್ರ ಇದೆಯೆಂದು ಘೋಷಿಸಿದ್ದರೂ, ತಪಾಸಣೆಯಲ್ಲಿ ಅವರ ಬಳಿ ₹3,600 ಹಣವಿರುವುದು ಬೆಳಕಿಗೆ ಬಂದಿತು.
ಆರೋಪ ಮತ್ತು ಅಮಾನತು
1. ನಗದು ವಹಿಯಲ್ಲಿ ಅನಿಯಮಿತತೆ: ರೂಪಾ ತಮ್ಮ ಬಳಿ ಇದ್ದ ಹಣದ ಬಗ್ಗೆ ತಪ್ಪು ವಿವರ ನೀಡಿದ್ದು ಗಂಭೀರವಾದ ಆರೋಪವಾಗಿದೆ.
2 . ತಪಾಸಣೆಗೆ ಅಡಚಣೆ: ಹೆಚ್ಚಿನ ಹಣದ ಬಗ್ಗೆ
ವಿವರಣೆ ನೀಡಲು ನಿರಾಕರಿಸಿದ್ದು ಮತ್ತು ತಪಾಸಣೆಗೆ ಅಸಹಕಾರ ತೋರಿದ್ದು.
ರೂಪಾ ತಮ್ಮ ಅಧಿಕೃತ
ಕರ್ತವ್ಯಗಳನ್ನು ಅನಧಿಕೃತ ವ್ಯಕ್ತಿಯಿಂದ ನಿರ್ವಹಿಸಿಸುತ್ತಿದ್ದರು ಎಂಬ ಆರೋಪವೂ ಇದೆ. ಇದು ಕರ್ನಾಟಕ ಸಿವಿಲ್ ಸರ್ವಿಸ್ ನಿಯಮಗಳಿಗೆ (KCSR) ವಿರುದ್ಧವಾದದ್ದು.
ಈ ಎಲ್ಲಾ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ, ರೂಪಾ ಅವರನ್ನು ತಕ್ಷಣ ಅಮಾನತುಗೊಳಿಸುವ ಆದೇಶವನ್ನು ಹೊರಡಿಸಿದ್ದಾರೆ.