ದಾವಣಗೆರೆ ಪೊಲೀಸ್ ಕಚೇರಿಯ ಮಾಹಿತಿ ಅಧಿಕಾರಿಗೆ ರೂ. 25,000 ದಂಡ: ಮಾಹಿತಿ ಹಕ್ಕು ಕಾಯಿದೆಯ ತಾಕತ್ತು
ಮಾಹಿತಿ ಹಕ್ಕು ಕಾಯಿದೆ ಜನಸಾಮಾನ್ಯರ ಕೈಯಲ್ಲಿರುವ ಅತ್ಯಂತ ಪ್ರಬಲ ಅಸ್ತ್ರ. ಕಚೇರಿಗಳಲ್ಲಿ ಮಾಹಿತಿ ನೀಡಲು ಸಬೂಬು ಹೇಳಿದರೆ, ಅಸಡ್ಡೆ ತೋರಿದರೆ ಆಗುವ ಪರಿಣಾಮಕ್ಕೆ ಕರ್ನಾಟಕ ಮಾಹಿತಿ ಆಯೋಗದ ಈ ಮಹತ್ವದ ಆದೇಶವೇ ಸಾಕ್ಷಿ. ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಅಧಿಕಾರಿಯೊಬ್ಬರು ಅರ್ಜಿದಾರರಿಗೆ ಮಾಹಿತಿ ನೀಡದೆ ಸತಾಯಿಸಿದ ಪರಿಣಾಮ ಭಾರಿ ದಂಡ ತೆರಬೇಕಾಗಿ ಬಂದಿದೆ.
ಕಮಾಆ 333 ಎಪಿಎಲ್ 2023ರ ಪ್ರಕರಣದಲ್ಲಿ ಅರ್ಜಿದಾರರು ಕೆ. ಶಿವರಾಮ್, ಬೆಂಗಳೂರು ಇವರು ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಕಚೇರಿ, ಪೊಲೀಸ್ ಅಧೀಕ್ಷಕರ ಕಚೇರಿ, ದಾವಣಗೆರೆ ಜಿಲ್ಲೆ. 2022ನೇ ಸಾಲಿನಲ್ಲಿ ದಾವಣಗೆರೆಯ ಕೆ.ಟಿ.ಜೆ ನಗರ ಬಸವನಗರ ಪೊಲೀಸ್ ಠಾಣೆಯ ಶ್ರೀ ಗುರುಬಸವರಾಜ್ ಹೆಚ್. ಅವರಿಗೆ ಪೊಲೀಸ್ ಪದಕ ನೀಡಲು ಮೇಲಧಿಕಾರಿಗಳು ಮಾಡಿದ್ದ ಶಿಫಾರಸಿನ ಮಾನದಂಡಗಳು, ಅದಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳ ಪ್ರತಿಗಳನ್ನು ಕೋರಲಾಗಿತ್ತು.
ಅರ್ಜಿದಾರರು 12.09.2022 ರಂದು ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಕೆ.ಎಸ್. ನಾಗೇಶ್, ಸಹಾಯಕ ಆಡಳಿತಾಧಿಕಾರಿ ನಿಗದಿತ ಸಮಯದಲ್ಲಿ ಮಾಹಿತಿ ಒದಗಿಸುವಲ್ಲಿ ವಿಫಲರಾಗಿದ್ದರು. ಆಯೋಗವು ಹಿಂದಿನ ವಿಚಾರಣೆಗಳಲ್ಲಿ ಎಚ್ಚರಿಕೆ ನೀಡಿ, ಮಾಹಿತಿ ಒದಗಿಸುವಂತೆ ನಿರ್ದೇಶನ ನೀಡಿದ್ದರೂ ಸಹ, ಆದೇಶವನ್ನು ಪಾಲಿಸದೆ ತೀವ್ರ ನಿರ್ಲಕ್ಷ್ಯ ಧೋರಣೆ ತೋರಿದ್ದರು.
ಈ ಬೇಜವಾಬ್ದಾರಿತನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಾಹಿತಿ ಆಯುಕ್ತರಾದ ಡಾ. ಮಮತಾ ಬಿ.ಆರ್. ಅಧಿಕಾರಿಗೆ ಬಿಸಿ ಮುಟ್ಟಿಸಿದ್ದಾರೆ. ಮಾಹಿತಿ ಹಕ್ಕು ಕಾಯಿದೆ 2005ರ ಕಲಂ 20(1)ರ ಅಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಕೆ.ಎಸ್. ನಾಗೇಶ್ ಅವರಿಗೆ ಒಟ್ಟು ರೂ. 25,000 ಗಳ ದಂಡ ವಿಧಿಸಲಾಗಿದೆ.
ಈ ದಂಡದ ಮೊತ್ತವನ್ನು ಅಧಿಕಾರಿಯ ಮುಂದಿನ ತಿಂಗಳ ಸಂಬಳದಿಂದ ಪ್ರತಿ ತಿಂಗಳು ರೂ. 5,000 ದಂತೆ ಒಟ್ಟು 5 ಕಂತುಗಳಲ್ಲಿ ಕಡಿತಗೊಳಿಸಿ, ಸರ್ಕಾರದ ಲೆಕ್ಕಶೀರ್ಷಿಕೆಗೆ ಜಮಾ ಮಾಡುವಂತೆ ಆದೇಶಿಸಲಾಗಿದೆ. ದಂಡದ ಮೊತ್ತ ಕಡಿತಗೊಳಿಸುವ ಜವಾಬ್ದಾರಿಯನ್ನು ಪ್ರಥಮ ಮೇಲ್ಮನವಿ ಪ್ರಾಧಿಕಾರಿಯಾದ ದಾವಣಗೆರೆ ಪೊಲೀಸ್ ಅಧೀಕ್ಷಕರಿಗೆ (ಎಸ್.ಪಿ) ವಹಿಸಲಾಗಿದೆ. ನ್ಯಾಯಾಲಯದಿಂದ ಯಾವುದೇ ತಡೆಯಾಜ್ಞೆ ಇಲ್ಲದಿದ್ದಲ್ಲಿ, ದಂಡದ ಹಣವನ್ನು ಕಡಿತಗೊಳಿಸಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ಕಾಪಾಡುವುದು, ಕೇಳಿದ ಮಾಹಿತಿಯನ್ನು ಸಕಾಲದಲ್ಲಿ ಒದಗಿಸುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯ. ಮಾಹಿತಿ ಹಕ್ಕು ಕಾಯಿದಡಯನ್ನು ಹಗುರವಾಗಿ ಪರಿಗಣಿಸುವ, ಜನರನ್ನು ಅಲೆದಾಡಿಸುವ ಅಧಿಕಾರಿಗಳಿಗೆ ಈ ಆದೇಶ ಒಂದು ಸ್ಪಷ್ಟ ಎಚ್ಚರಿಕೆ ಗಂಟೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರಲು, ಜವಾಬ್ದಾರಿಯುತವಾಗಿ ಕೆಲಸ ಮಾಡುವಂತೆ ಮಾಡಲು ಇಂತಹ ಆದೇಶಗಳು ಅತ್ಯಗತ್ಯ.


