ಮಂಡ್ಯ: ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ಶ್ರೀ ವೆಂಕಟರಮಣಸ್ವಾಮಿ (ತೋಪಿನ ತಿಮ್ಮಪ್ಪ) ದೇವಸ್ಥಾನಕ್ಕೆ ಸೇರಿದ ಜಮೀನನ್ನು ಶ್ರೀ ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ಗೆ ಅಕ್ರಮವಾಗಿ ವರ್ಗಾಯಿಸಿಕೊಂಡ ಟ್ರಸ್ಟಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮದ ಶ್ರೀಕಂಠಯ್ಯ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ
ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ೧೯೩೪ರಲ್ಲಿ ಸ್ಥಾಪಿತವಾದ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದೆ. ೧೯೮೮ರಲ್ಲಿ ಶ್ರೀ ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ ರಚನೆಯಾಗಿದ್ದು, ದೇವಾಲಯದ ಅರ್ಚಕರಾಗಿದ್ದ ಲೇ|| ರಂಗಪ್ಪ ಅವರ ಪುತ್ರಿ ಸರೋಜಮ್ಮ ಅವರ ಹೆಬ್ಬೆಟ್ಟು ಸಹಿ ನಕಲು ಮಾಡಿ ಟ್ರಸ್ಟ್ನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯ ಹೆಸರಿಗೆ ದಾಖಲೆ ಸೃಷ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸರೋಜಮ್ಮ ಅವರು ಈ ಆಸ್ತಿಗಳನ್ನು ಯಾರ ಹೆಸರಿಗೂ ಮರಣಶಾಸನ ಮಾಡಿರುವುದಿಲ್ಲ. ಶ್ರೀ ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ನ ಟ್ರಸ್ಟಿಗಳ ಜೊತೆ ಜಿ..ಚಿಕ್ಕತಿಮ್ಮಯ್ಯ, ರಾಮಕೃಷ್ಣ, ಟಿ.ಕೃಷ್ಣೇಗೌಡ, ಟಿ.ರವೀಂದ್ರ, ಟಿ.ಬಲರಾಮು ಸರೋಜಮ್ಮ ಅವರ ಹೆಬ್ಬೆಟ್ಟು ನಕಲು ಮಾಡಿ ೨೦೦೨ರ ಜ.೩೦ರಂದು ಮರಣ ಶಾಸನ ಮಾಡಿ ಆಸ್ತಿ ಲಪಟಾಯಿಸಿದ್ದಾರೆ ಎಂದು ದೂರಿದರು.
ಈ ಸಂಬಂಧ ಪರಿಶೀಲನೆ ನಡೆಸಿ, ಆಸ್ತಿಯನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯುವಂತೆ ಹೈಕೋರ್ಟ್ ಆದೇಶ ನೀಡಿದೆ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಸರೋಜಮ್ಮ ಅವರ ಹೆಬ್ಬೆಟ್ಟು ಸಹಿ ನಕಲು ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.


