Wednesday, March 4, 2026
spot_img

ನಗರಸಭೆ ವಿರುದ್ದ ದೂರು ದಾಖಲು:ಎಚ್ಚೆತ್ತ ಜಿಲ್ಲಾಡಳಿತದಿಂದ ಅಕ್ರಮ ಫ್ಲೆಕ್ಸ್ ತೆರವು ಕಾರ್ಯಾಚರಣೆ

ಅಕ್ರಮ ಫ್ಲೆಕ್ಸ್ ಅಳವಡಿಕೆ:ದೂರಿಗೆ ಎಚ್ಚೆತ್ತ ಜಿಲ್ಲಾಡಳಿತದಿಂದ ತೆರವು ಕಾರ್ಯಾಚರಣೆ

ಬಳ್ಳಾರಿಯಲ್ಲಿ ಫ್ಲೆಕ್ಸ್ ಅಳವಡಿಕೆ ಗಲಾಟೆ ಒಬ್ಬನ ಜೀವ ತೆಗೆಯುವುದರಲ್ಲಿ ಅಂತ್ಯವಾದರೂ ಎಚ್ಚೆತ್ತುಕೊಳ್ಳದ ಮಂಡ್ಯ ಜಿಲ್ಲಾಡಳಿತದ ವಿರುದ್ದ ವಿವಿಧ ಪ್ರಾಧಿಕಾರಗಳಿಗೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಫ್ಲೆಕ್ಸ್ ತೆರವು ಕಾರ್ಯಾಚರಣೆಗೆ ಇಳಿದಿದೆ.

ಕಳೆದ ಕೆಲದಿನಗಳಿಂದ ಮಂಡ್ಯದ ಹೆದ್ದಾರಿ ಸೇರಿದಂತೆ ಬಡಾವಣೆಗಳ ಗಲ್ಲಿ ಗಲ್ಲಿಗಳಲ್ಲು ಫ್ಲೆಕ್ಸ್ ರಾಕ್ಷಸನ ಆರ್ಭಟ ನಡೆದಿತ್ತು.ಉದ್ದೇಶಿತ ಕಾರ್ಯಕ್ರಮಗಳು ಮುಗಿದು ವಾರ ಕಳೆದರೂ ಫ್ಲೆಕ್ಸ್ ಗಳ ತೆರವಿಗೆ ಮಂಡ್ಯ ನಗರಸಭೆಯಾಗಲಿ ಜಿಲ್ಲಾಡಳಿತವಾಗಲಿ ಕಾರ್ಯಪ್ರವೃತ್ತರಾಗಲಿಲ್ಲ.

ಸಾಮಾಜಿಕ ಕಾರ್ಯಕರ್ತ ಜಗದೀಶ್ ಎಂಬುವರು ತಕ್ಷಣ ಅಕ್ರಮ ಫ್ಲೆಕ್ಸ್ ಅಳವಡಿಕೆಯ ವಿರುದ್ದ ಪೌರಾಡಳಿತ ನಿರ್ದೇಶನಾಲಯ ಹಾಗೂ ರಾಷ್ಟೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಗರಸಭೆ ನಿರ್ಲಕ್ಷದ ವಿರುದ್ದ ದೂರು ದಾಖಲಿಸಿದರು.

ದೂರಿನಲ್ಲಿ ಅವರು ಈ ಕೆಳಕಂಡಂತೆ ವಿವರಿಸಿದ್ದಾರೆ.

​ನಾನು ಮಂಡ್ಯ ಜಿಲ್ಲೆಯ ನಿವಾಸಿಯಾಗಿದ್ದು, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ದೂರನ್ನು ಸಲ್ಲಿಸುತ್ತಿದ್ದೇನೆ. ಮಂಡ್ಯ ನಗರದ ಪ್ರಮುಖ ರಸ್ತೆಗಳು, ಸಾರ್ವಜನಿಕ ಗೋಡೆಗಳು, ವಿದ್ಯುತ್ ಕಂಬಗಳು ಹಾಗೂ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಅಸಂಖ್ಯಾತ ಪ್ಲಾಸ್ಟಿಕ್ ಬ್ಯಾನರ್‌ಗಳು ಮತ್ತು ಫ್ಲೆಕ್ಸ್‌ಗಳನ್ನು ಯಾವುದೇ ಪೂರ್ವಾನುಮತಿ ಇಲ್ಲದೆ ಅಳವಡಿಸಲಾಗಿದೆ. ಈ ಬ್ಯಾನರ್‌ಗಳು ನಗರದ ಸೌಂದರ್ಯವನ್ನು ಹಾಳುಗೆಡವುದಲ್ಲದೆ, ಸಂಚಾರ ಸುರಕ್ಷತೆ ಮತ್ತು ಪರಿಸರಕ್ಕೆ ಗಂಭೀರ ಮಾರಕವಾಗಿವೆ.
​ಈ ಕೃತ್ಯವು ಈ ಕೆಳಗಿನ ಕಾನೂನುಗಳ ನೇರ ಉಲ್ಲಂಘನೆಯಾಗಿದೆ.

​Karnataka Open Places (Prevention of Disfigurement) Act, 1981: ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ಬ್ಯಾನರ್ ಹಾಕುವುದು ಶಿಕ್ಷಾರ್ಹ ಅಪರಾಧವಾಗಿದೆ.

​Plastic Waste Management Rules (2016-2022): ನಿಷೇಧಿತ ಪ್ಲಾಸ್ಟಿಕ್ ಬಳಕೆಯು ಪರಿಸರಕ್ಕೆ ಹಾನಿಕಾರಕವಾಗಿದ್ದು, ಇವುಗಳ ವಿಲೇವಾರಿ ಹೊಣೆಗಾರಿಕೆ ಹಾಕಿಸಿದವರದ್ದೇ ಆಗಿರುತ್ತದೆ.

​ಪರಿಸರ ಸಂರಕ್ಷಣಾ ಕಾಯ್ದೆ, 1986: ಸೆಕ್ಷನ್ 15 ರ ಅಡಿಯಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಇಂತಹ ಚಟುವಟಿಕೆಗಳಿಗೆ ದಂಡ ಮತ್ತು ಜೈಲು ಶಿಕ್ಷೆಯ ಅವಕಾಶವಿದೆ.

​ಭಾರತೀಯ ನ್ಯಾಯ ಸಂಹಿತೆ (BNS) 2023: ಸೆಕ್ಷನ್ 270 ಮತ್ತು 324(2) ರ ಅಡಿಯಲ್ಲಿ ಸಾರ್ವಜನಿಕರಿಗೆ ತೊಂದರೆ (Public Nuisance) ಉಂಟುಮಾಡುವುದು ಅಪರಾಧವಾಗಿದೆ.

​NHAI ನಿಯಮಗಳು: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇಂತಹ ಬ್ಯಾನರ್‌ಗಳು ಚಾಲಕರ ಗಮನವನ್ನು ಬೇರೆಡೆಗೆ ಸೆಳೆದು ಅಪಘಾತಗಳಿಗೆ ಕಾರಣವಾಗುತ್ತಿವೆ.
​ಸದರಿ ಬ್ಯಾನರ್‌ಗಳನ್ನು ಅಳವಡಿಸಿರುವವರು ಮತ್ತು ಅವುಗಳನ್ನು ಮುದ್ರಿಸಿದ ಪ್ರಿಂಟಿಂಗ್ ಪ್ರೆಸ್ ಮಾಲೀಕರ ವಿರುದ್ಧ ಎಫ್.ಐ.ಆರ್. ದಾಖಲಿಸಬೇಕು ಹಾಗೂ ಅವುಗಳನ್ನು ತೆರವುಗೊಳಿಸಲು ತಗಲುವ ವೆಚ್ಚವನ್ನು ಉಲ್ಲಂಘಿಸಿದವರಿಂದಲೇ ವಸೂಲಿ ಮಾಡಬೇಕು ಎಂದು ಒತ್ತಾಯಿಸುತ್ತೇನೆ.

​ತಕ್ಷಣವೇ ಈ ಬಗ್ಗೆ ಸೂಕ್ತಕ್ರಮ ಕೈಗೊಂಡು ಮಂಡ್ಯ ನಗರವನ್ನು ಪ್ಲಾಸ್ಟಿಕ್ ಮುಕ್ತ ಮತ್ತು ಸುರಕ್ಷಿತ ನಗರವನ್ನಾಗಿ ಮಾಡಲು ಸಹಕರಿಸಬೇಕೆಂದು ಕೋರುತ್ತೇನೆ.

​ನಕಲು ಪ್ರತಿಗಳು (ಮಾಹಿತಿಗಾಗಿ ಮತ್ತು ಕ್ರಮಕ್ಕಾಗಿ):
1) ​ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ.
2) ​ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB).
3) ​ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮಂಡ್ಯ.
4) ​ಆಯುಕ್ತರು, ಮಂಡ್ಯ ನಗರಸಭೆ.

ಈ ರೀತಿಯಲ್ಲಿ ಸಂಬಂದಿಸಿದ ಪ್ರಾಧಿಕಾರಗಳಿಗೆ ಜಗದೀಶ್ ದೂರು ಸಲ್ಲಿಸುತ್ತಿದ್ದಂತೆ ಸ್ವತಃ ಜಿಲ್ಲಾಧಿಕಾರಿಗಳೆ ಆಡಳಿತಾಧಿಕಾರಿಗಳಾಗಿರುವ ಮಂಡ್ಯ ನಗರಸಭೆಯ ಅಧಿಕಾರಿಗಳು ಎಚ್ಚೆತ್ತು ಅಕ್ರಮ ಫ್ಲೆಕ್ಸ್ ತೆರವು ಕಾರ್ಯಾಚರಣೆಗೆ ಇಳಿದಿದ್ದಾರೆ.
ಬಹುತೇಕ ಅಕ್ರಮ ಫ್ಲೆಕ್ಸ್ ಗಳನ್ನು ತೆರವುಗೊಳಿಸಿದ್ದು ಕೆಲವೊಂದಿಷ್ಟು ಮಾತ್ರ ಉಳಿದುಕೊಂಡಿದೆ.

ಈ ಕುರಿತು ದೂರುದಾರ ಜಗದೀಶ್ ಪತ್ರಿಕೆಗೆ ಪ್ರತಿಕ್ರಿಯಿಸಿ ಜಾಗೃತ ನಾಗರೀಕರು ಎಚ್ಚೆತ್ತು ಯಾರೇ ಪ್ರಭಾವಿಗಳೇ ಇರಲಿ ಸಕ್ಷಮ ಪ್ರಾಧಿಕಾರಗಳಿಗೆ ದೂರು ದಾಖಲಿಸಿ ಪ್ರಶ್ನಿಸುವ ಪರಿಪಾಠ ಬೆಳೆಸಿಕೊಂಡರೆ ಯಾವುದು ಅಸಾಧ್ಯವಲ್ಲ.ನಿಯಮದ ಪ್ರಕಾರ ಪ್ಲಾಸ್ಟಿಕ್ ಫ್ಲೆಕ್ಸ್ ಗಳ ಅಳವಡಿಕೆಗೆ ಅವಕಾಶ ಇರಬಾರದು ಇದಕ್ಕೆ ಅವಕಾಶ ನೀಡಿದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಅವರು ಎಚ್ಚರಿಸಿದ್ದಾರೆ.ಜಾಹೀರಾತು ಅಳವಡಿಕೆಗೆ ನಿರ್ದಿಷ್ಟ ನಿಯಮಗಳನ್ನು ರೂಪಿಸಿ ಕಟ್ಟುನಿಟ್ಟಿನ ಕ್ರಮವಹಿಸಿದರೆ ನಗರಸಭೆಗೆ ಸಾಕಷ್ಟು ಆದಾಯವು ಬರಲಿದೆ.ಈ ದಿಕ್ಕಿನಲ್ಲಿ ನಗರಸಭೆ ಯೋಚಿಸಲಿ ಎಂದು ಅವರು ಸಲಹೆ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!