ನಾಗಮಂಗಲ | ಪೌರ ಚಾಲಕನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ : ದೂರು ದಾಖಲು
ನಾಗಮಂಗಲ ಪುರಸಭೆಯ ಪೌರಕಾರ್ಮಿಕ ನೌಕರ ಆದಿ ದ್ರಾವಿಡ ಜನಾಂಗದ ಡ್ರೈವರ್ ರಮೇಶ್ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಘಟನೆ ಸಂಬಂಧ 60 ಕ್ಕೂ ಹೆಚ್ಚು ಮಹಿಳಾ ಮತ್ತು ಪುರುಷ ಪೌರಕಾರ್ಮಿಕರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಮಾಯಿಸಿ ಹಲ್ಲೆ ನಡೆಸಿದ ಖಾದರ್ ಪಾಷ ಎಂಬುವರ ಮೇಲೆ ದೂರು ದಾಖಲಿಸಿ ಕ್ರಮ ಜರುಗಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಪೌರಕಾರ್ಮಿಕ ಡ್ರೈವರ್ ರಮೇಶ್ ಇಂದು ಬೆಳಿಗ್ಗೆ 9:30 ಸಮಯದಲ್ಲಿ ಎಂದಿನಂತೆ ಮೈಸೂರು ರಸ್ತೆಯ ಯಾ ಅಲ್ಲಾಹ್ ಮಸೀದಿ ಪಕ್ಕದಲ್ಲಿ ಕಸ ಸಂಗ್ರಹಕ್ಕೆ ಹೋಗಿದ್ದಾರೆ, ಆ ಸಮಯದಲ್ಲಿ ಚಿಕ್ಕದೊಂದು ಚೀಲವನ್ನು ತೆಗೆದುಕೊಂಡಿಲ್ಲ ಎಂದು ಸ್ಥಳೀಯ ನಿವಾಸಿ ಖಾದರ್ ಪಾಷ ಏಕವಚನ ಪದಪ್ರಯೋಗ ಮಾಡಿ ಜಾತಿನಿಂದನೆ ಮಾಡುವ ಮೂಲಕ ಹಲ್ಲೆ ನಡೆಸಿದ್ದಾರೆ ಎಂದು ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಸಂಬಂಧ ಹಲ್ಲೆಗೊಳಗಾದ ಪೌರಕಾರ್ಮಿಕ ನೌಕರ ರಮೇಶ್ ಮಾತನಾಡಿ ಕ್ಷುಲ್ಲಕ ಕಾರಣಕ್ಕಾಗಿ ನನ್ನ ಮೇಲೆ ಹಲ್ಲೆ ನಡೆಸಿದರು, ಜಾತಿ ನಿಂದನೆ ಮಾಡಿದರುಮ ನನಗೆ ಅವಮಾನ ಮಾಡಿದ್ದಾರೆ ನನಗೆ ರಕ್ಷಣೆ ಬೇಕೆಂದು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಕೆಲವು ಪೌರ ಕಾರ್ಮಿಕರು ಪಟ್ಟಣವನ್ನು ಸ್ವಚ್ಛತೆಗೊಳಿಸುವ ನಮಗೆ ರಕ್ಷಣೆ ಇಲ್ಲದಂತಾಗಿದೆ. ಇದೇ ರೀತಿ ಪದೇ ಪದೇ ಪ್ರಕರಣಗಳು ನಡೆಯುತ್ತಿವೆ, ದಯವಿಟ್ಟು ನಮಗೆ ರಕ್ಷಣೆ ಕೊಡಬೇಕೆಂದು ಕೋರಿದರು.