ಹಳೇ ಮೈಸೂರು, ನ.24: ನಾಗಮಂಗಲ ಕನ್ನಡ ಸಂಘದ ವತಿಯಿಂದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದ ಎಸ್.ಎಲ್.ಭೈರಪ್ಪ ನೆನಪಿನ ವೇದಿಕೆಯಲ್ಲಿ ಭಾನುವಾರ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವಕ್ಕೆಮೈಸೂರಿನ ಅನುವಾದಕ ಪ್ರಧಾನ್ ಗುರುದತ್ತ ಅಧಿಕೃತ ಚಾಲನೆ ನೀಡಿದರು.
‘53 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಂಘ ನಾಡಿನ ಹೆಮ್ಮೆಯ ಸಂಗತಿ. ನಾನು ರಾಜ್ಯ, ರಾಷ್ಟ್ರದ ಅನೇಕ ಕನ್ನಡ ಸಂಘಗಳ ಕಾರ್ಯಕ್ರಮಗಳಲ್ಲಿ ಭಾಗವಹಿದ್ದೇನೆ. ಅನೇಕ ಪ್ರಶಸ್ತಿ, ಪುರಸ್ಕಾರ ಲಭಿಸಿವೆ. ಆದರೆ ನಾಗಮಂಗಲ ಕನ್ನಡ ಸಂಘ ನೀಡಿರುವ ಗೌರವ ಸಂತೋಷ ಕೊಟ್ಟಿದೆ’ ಎಂದರು.

ಹಿರಿಯ ರಂಗಕರ್ಮಿ ಎಂ.ಎನ್.ಲಕ್ಷ್ಮಿದೇವಿ ಮಾತನಾಡಿ, ‘ನಿಮ್ಮನ್ನ ನೋಡೋ ಭಾಗ್ಯವನ್ನು ಇಲ್ಲಿನ ಕನ್ನಡ ಸಂಘ ಕಲ್ಪಿಸಿದೆ. ಎಲ್ಲರಿಗೂ ಶುಭವಾಗಲಿ’ ಎಂದರು.
ನಾಗಮಂಗಲದಲ್ಲಿ ಇಂದು ನಿರ್ದಿಗಂತದ ನಾಟಕ ʼಕೊಡಲ್ಲ ಅಂದ್ರೆ ಕೊಡಲ್ಲʼ
ಇಂದು ಸಂಜೆ 6:30ಕ್ಕೆ ನಾಗಮಂಗಲದ ಕನ್ನಡಸಂಘ ರಾಜ್ಯೋತ್ಸವದ ನಿಮಿತ್ತ ಆಯೋಜಿಸಿರುವ ನಾಗರಂಗ ನಾಟಕೋತ್ಸವದಲ್ಲಿ ನಿರ್ಧಿಂಗತ ಕಲಾವಿದರು ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕ ಪ್ರಸ್ತುತ ಪಡಿಸಲಿದ್ದಾರೆ. ರಂಗಾಸಕ್ತರು ಬಿಡುವು ಮಾಡಕೊಂಡು ನೋಡಿ. ಸರ್ವಾಧಿಕಾರಿಯ ಕುರುಡು ನೀತಿಯ ವಿರುದ್ಧ ರೋಸಿಹೋದ ಜನತೆಯ ಕುರಿತ ಅಪರೂಪದ ಕಥಾವಸ್ತುವನ್ನು ಈ ನಾಟಕ ಹೊಂದಿದೆ.

ನಾಟಕೋತ್ಸವಕ್ಕೆ ಮಳಿಗೆಗಳ ಮೆರುಗು
ಕಾಲೇಜಿನ ಹೊರಗಡೆ ಪುಸ್ತಕ ಮಳಿಗೆ ಸೇರಿದಂತೆ ಉತ್ತರ ಕರ್ನಾಟಕ ಶೈಲಿಯ ತಿಂಡಿ ತಿನಿಸುಗಳು, ಅಪ್ಪಟ ಖಾದಿಯ ಸಿದ್ಧ ಉಡುಪುಗಳು, ಗೃಹೋಪಯೋಗಿ ಕರಕುಶಲ ಪದಾರ್ಥಗಳ ಹತ್ತಾರು ಮಳಿಗೆಗಳು ರಂಗಾಸಕ್ತರ ಗಮನ ಸೆಳೆದವು.


