ನಿರ್ಮಿತಿ ಕೇಂದ್ರಗಳಿಗೆ ಜಿಎಸ್‌ಟಿ ವಿನಾಯಿತಿ: ಹೈಕೋರ್ಟ್‌ನಿಂದ ಐತಿಹಾಸಿಕ ತೀರ್ಪು
ಕರ್ನಾಟಕ ಉಚ್ಚ ನ್ಯಾಯಾಲಯವು ನಿರ್ಮಿತಿ ಕೇಂದ್ರಗಳ ಕುರಿತು ಮಹತ್ವದ ತೀರ್ಪನ್ನು ನೀಡಿದ್ದು, ಇವುಗಳು ಸಂಪೂರ್ಣವಾಗಿ ಆಳಿಕೆಯ ನಿಯಂತ್ರಣಕ್ಕೊಳಪಟ್ಟ ಸರ್ಕಾರಿ ಸಂಸ್ಥೆ (Government Entity) ಎಂದು ಘೋಷಿಸಿದೆ.
ರಿಟ್ ಅರ್ಜಿ ಸಂಖ್ಯೆ 103139/2021ರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಾಗಪ್ರಸನ್ನ ಅವರು, ನಿರ್ಮಿತಿ ಕೇಂದ್ರಗಳು ಜಿ.ಎಸ್.ಟಿ ಇಂದ ವಿನಾಯಿತಿ ಪಡೆಯಲು ಅರ್ಹವಾಗಿವೆ ಎಂದು ಆದೇಶಿಸಿದ್ದಾರೆ. ನಿರ್ಮಿತಿ ಕೇಂದ್ರಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಆಳಿಕೆಯ ನಿಯಂತ್ರಣವಿರುತ್ತದೆ. ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ ಹಾಗೂ ಜಿ.ಪಂ. ಸಿಇಒ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವುದರಿಂದ ಇವುಗಳನ್ನು ಸರ್ಕಾರಿ ಸಂಸ್ಥೆ ಎಂದೇ ಪರಿಗಣಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಜಿ.ಎಸ್.ಟಿ ನೋಟಿಫಿಕೇಶನ್ ಸಂಖ್ಯೆ 32/2017ರ ಅಡಿಯಲ್ಲಿ ಈ ಕೇಂದ್ರಗಳು ತೆರಿಗೆ ವಿನಾಯಿತಿ ಪಡೆಯುತ್ತವೆ. ಸುಪ್ರೀಂ ಕೋರ್ಟ್‌ನ ‘ಶಪೂರ್‌ಜಿ ಪಾಲೂನ್‌ಜಿ’ ಪ್ರಕರಣದ ತೀರ್ಪುಗಳನ್ನು ಉಲ್ಲೇಖಿಸಿ, ಜಿ.ಎಸ್.ಟಿ ಇಲಾಖೆಯ ಆಕ್ಷೇಪಣೆಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಾಲಯದ ಈ ಆದೇಶವು ಕೇವಲ ತೆರಿಗೆಗೆ ಮಾತ್ರ ಸೀಮಿತವಾಗಿಲ್ಲ. ಇವುಗಳು 90% ಕ್ಕಿಂತ ಹೆಚ್ಚು ಆಳಿಕೆಯ ಅನುದಾನ ಮತ್ತು ನಿಯಂತ್ರಣಕ್ಕೆ ಒಳಪಟ್ಟಿರುವುದರಿಂದ, ಇವುಗಳು ಸಾರ್ವಜನಿಕ ಪ್ರಾಧಿಕಾರಗಳಾಗಿವೆ. ನಿರ್ಮಿತಿ ಕೇಂದ್ರಗಳು ಕಡ್ಡಾಯವಾಗಿ ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ಬರುತ್ತವೆ.
ಸಾರ್ವಜನಿಕರು ಈ ಕೇಂದ್ರಗಳ ಕಾಮಗಾರಿ, ಹಣಕಾಸು ವೆಚ್ಚ ಮತ್ತು ಆಡಳಿತದ ಬಗ್ಗೆ ಮಾಹಿತಿಯನ್ನು ಪಡೆಯಲು ಸಂಪೂರ್ಣ ಹಕ್ಕು ಹೊಂದಿದ್ದಾರೆ. ಈ ಆದೇಶದಿಂದಾಗಿ ಎಲ್ಲ ನಿರ್ಮಿತಿ ಕೇಂದ್ರಗಳಿಗೆ ತೆರಿಗೆ ವಿನಾಯಿತಿ ದೊರೆಯಲಿದ್ದು, ಆಳಿಕೆಯ ಕೆಲಸಗಳನ್ನು ನಿರ್ವಹಿಸುವ ಈ ಸಂಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಮತ್ತಷ್ಟು ಹೆಚ್ಚಾಗಲಿದೆ.
#HighCourtOfKarnataka #NirmithiKendra #GSTExemption #RTIKarnataka #PublicAuthority #ಮಾಹಿತಿಹಕ್ಕು


