ನೂರಡಿ ರಸ್ತೆ ನಗರಸಭೆ ನಿರ್ಣಯ:ದಲಿತ ಸಂಘಟನೆಗಳು ಸ್ವಾಗತ
ಮಂಡ್ಯ :ಸೆ.೧೭. ನಗರದ ನೂರಡಿ ರಸ್ತೆ ವಿಚಾರದಲ್ಲಿ ನಗರಸಭೆ ಸೌಹಾರ್ದ ಯುತ ಹೆಜ್ಜೆ ಇರಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು ದಲಿತ,ಪ್ರಗತಿಪರ ಮತ್ತು ಪರಿಶಿಷ್ಟ ಸಮುದಾಯದ ಜನರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕರಗೋಡು ಹರ್ಷ ವ್ಯಕ್ತಪಡಿಸಿದ್ದಾರೆ.
ನಗರಸಭೆಯ ಸಾಮಾನ್ಯ ಸಭೆಯಲ್ಲಿ ಡಾ. ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ವಾಟರ್ ಟ್ಯಾಂಕ್ ಇರುವ ಅಂಬೇಡ್ಕರ್ ವೃತ್ತದ ವರೆಗೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ ಯಂತಲೂ
ಮತ್ತು ಕನ್ನಿಕಾ ಪರಮೇಶ್ವರಿ ದೇವಾಲಯದಿಂದ ಗೌರಿಶಂಕರ ಕಲ್ಯಾಣ ಮಂಟಪದವರೆಗೆ ನಾಡಪ್ರಭು ಕೆಂಪೇಗೌಡ ರಸ್ತೆ ಎಂದು ನಾಮಕರಣ ಮಾಡಲು ನಿರ್ಣಯ ಮಾಡಿ ಇಬ್ಬರು ಮಹನೀಯರಿಗೆ ಗೌರವ ಸಮರ್ಪಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದೆ.
1976 ರಲ್ಲಿ ನೂರು ಅಡಿ ರಸ್ತೆಗೆ ಡಾ. ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯ ತನ ದಿಂದ ಸದರಿ ರಸ್ತೆಗೆ ಪರ್ಯಾಯ ಹೆಸರು ನಾಮಕರಣ ಮಾಡಲು ಮುಂದಾಗಿತ್ತು ಇದೀಗ ಚುನಾಯಿತ ಜನಪ್ರತಿನಿಧಿಗಳು 1976 ರ ನಿರ್ಣಯದಂತೆಯೇ ಉತ್ತಮ ನಿರ್ಣಯ
ಮೂಲಕ ಮಾದರಿ ನಡೆ ಅನುಸರಿಸಿದ್ದಾರೆ.
ನೂರಡಿ ರಸ್ತೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಮತ್ತು ಶಾಸಕ ರವಿಕುಮಾರ್ ಗಣಿಗ ರವರ ಮಾರ್ಗದರ್ಶನ ಶ್ಲಾಘನೀಯ ವಿಚಾರವಾಗಿದೆ. ಅವರ ಮಾರ್ಗದರ್ಶನದಿಂದಾಗಿ ಸೌಹಾರ್ದಯುತ ಪರಿಹಾರಕ್ಕೆ ನಾಂದಿ ಹಾಡಿದೆ.ಈ ನಿರ್ಣಯದಂತೆ ಜಿಲ್ಲಾಧಿಕಾರಿಗಳು,ನಗರಸಭೆಯ ಆಯುಕ್ತರು ಕೂಡಲೆ ಕಾರ್ಯಪ್ರವೃತ್ತರಾಗಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಈ ಎರಡು ರಸ್ತೆಗಳಿಗೆ ಮಹಾನೀಯರ ನಾಮಫಲಕ ಆಳವಡಿಸಲು ಮುಂದಾಗಬೇಕೆಂದು ಮನವಿ ಮಾಡುತ್ತೇವೆ.
ಇಬ್ಬರು ಮಹನೀಯರಿಗೆ ಸಮಾನ ಗೌರವ ಸಮರ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರುಗಳಿಗೆ ಧನ್ಯವಾದ ಸಮರ್ಪಿಸುತ್ತೇವೆ.
ಅದೇ ರೀತಿ ಅಂಬೇಡ್ಕರ್ ರಸ್ತೆ ವಿಚಾರದಲ್ಲಿ ಹೋರಾಟ ಮಾಡಿದ ಎಲ್ಲಾ ಹೋರಾಟಗಾರರಿಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೂಡ ಕೃತಜ್ಞತೆ ಸಲ್ಲಿಸುತ್ತೇವೆ ಮುಂದಿನ ದಿನಗಳಲ್ಲಿಯೂ ದಲಿತ ಪ್ರಗತಿಪರ ಹಾಗೂ ಸಮುದಾಯದ ಜನತೆ ಒಗ್ಗಟ್ಟಿನ ಹೆಜ್ಜೆ ಮುನ್ನಡೆಸಲು ಆಶಿಸುತ್ತೇವೆ.
ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘು ನಂದನ್, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ನಿವೃತ್ತ ನೌಕರರ ಸಂಘದ ಗುರುಮೂರ್ತಿ, ನಗರಸಭೆ ಸದಸ್ಯರಾದ ಎಂಸಿ ಶಿವಪ್ರಕಾಶ್, ಎಂ ಎನ್ ಶ್ರೀಧರ್, ಗೀತಾ ಕುಮಾರಸ್ವಾಮಿ, ಶಶಿಕಲಾ ಪ್ರಕಾಶ್, ಟಿ ಹರೀಶ್ ಕುಮಾರ್,ಜೆಡಿಎಸ್ ನ ಎಂ ಎಲ್ ತುಳಸಿದರ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಎಂ ವಿ ಕೃಷ್ಣ ಉಪಸ್ಥಿತರಿದ್ದರು.