ಅಧಿಕಾರ ಮುಕ್ತಾಯ: ಕೊಠಡಿಗೆ ಬೀಗ
01/11/2025
ಪಾಂಡವಪುರ: ಇಲ್ಲಿನ ಪುರಸಭೆ ಆಡಳಿತ ಮಂಡಳಿಯ ಆಡಳಿತಾವಧಿ ಮುಕ್ತಾಯಗೊಂಡಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕೊಠಡಿಗಳ ಬಾಗಿಲಿಗೆ ಬೀಗ ಜಡಿಯಲಾಗಿದೆ.
ಪುರಸಭೆ ಮುಖ್ಯಾಧಿಕಾrರಿ ಈ ಕ್ರಮ ಪ್ರಶ್ನಿಸಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕಳೆದ 2018ರಲ್ಲಿ ಪುರಸಭೆ ಆಡಳಿತ ಮಂಡಳಿಗೆ ಚುನಾವಣೆಗೆ ನಡೆದು 23 ಮಂದಿ ಸದಸ್ಯರು ಆಯ್ಕೆಯಾಗಿದ್ದರು. ಸರ್ಕಾರದ ಪ್ರಾರಂಭದ 2 ವರ್ಷದವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಮೀಸಲಾತಿ ಪ್ರಕಟಿಸದ ಕಾರಣ ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸದೆ ಅಧಿಕಾರದಿಂದ ವಂಚಿತರಾಗಿದ್ದರು.
2020ರಲ್ಲಿ ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಪ.ಜಾ ಅರ್ಚನಾ ಚಂದ್ರು, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳಾ ವರ್ಗದ ಶ್ವೇತಾ ಉಮೇಶ್ ಆಯ್ಕೆಯಾಗಿ 30 ತಿಂಗಳು ಆಡಳಿತ ನಡೆಸಿದ್ದರು.
ಎರಡನೇ ಅವಧಿಯ ಮೀಸಲಾತಿ 16 ತಿಂಗಳ ಕಾಲ ವಿಳಂಬವಾಗಿ ಪ್ರಕಟಿಸಿತ್ತು. ಈ ಅವಧಿಯಲ್ಲಿ ಅಧ್ಯಕ್ಷರಾಗಿ ಜ್ಯೋತಿಲಕ್ಷ್ಮೀ ಹಾಗೂ ಉಪಾಧ್ಯಕ್ಷರಾಗಿ ಎಲ್.ಅಶೋಕ್ ಅಧಿಕಾರ ನಡೆಸಿದ್ದರು.
ವಿಳಂಬ ಮಾಡಿದ್ದರಿಂದ ಈ ಅವಧಿಯಲ್ಲಿನ ಅಧಿಕಾರ ಹೆಚ್ಚುವರಿಯಾಗಿ ನೀಡಬೇಕು ಎಂಬುದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ಸದಸ್ಯರ ವಾದವಾಗಿದ್ದು, ಅಧಿಕಾರ ವಿಸ್ತರಿಸಲು ಚುನಾವಣಾ ಆಯೋಗ, ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪುರಸಭೆ ಅಡಳಿತ ಮಂಡಳಿ ಸದಸ್ಯರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಪುರಸಭೆಗೆ ಆಡಳಿತಾಧಿಕಾರಿ ನೇಮಕ ಮಾಡದಂತೆ ಸೂಚನೆ ನೀಡಿದೆ. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳ ಅಧಿಕಾರಾವಧಿ ಬಗ್ಗೆ ಯಾವುದೇ ನಿರ್ದೇಶನ ನೀಡಿಲ್ಲ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನ.3ಕ್ಕೆ ಮುಂದೂಡಿದೆ.
‘ಜಿಲ್ಲಾಧಿಕಾರಿಗೆ ಪತ್ರ’: ಪುರಸಭೆ ಇಒ
‘ಪೌರಡಳಿತ ಕಾಯ್ದೆ ಪ್ರಕಾರ ಪುರಸಭೆ ಆಡಳಿತ ಮಂಡಳಿ ಅಧಿಕಾರಾವಧಿ ಅ.23ಕ್ಕೆ ಮುಕ್ತಾಯಗೊಂಡಿದೆ. ಈ ಸಂಬಂಧ ಅರ್ಜಿಯ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯ ಆಡಳಿತಾಧಿಕಾರಿಯನ್ನು ನೇಮಕ ಮಾಡದಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಆದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರದ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ಈ ಬಗ್ಗೆ ನಿರ್ದೇಶನ ನೀಡುವಂತೆ ಡಿಸಿಗೆ ಪತ್ರ ಬರೆಯಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.


