ಪೌರಕಾರ್ಮಿಕರ ನೇಮಕಾತಿ ಅಕ್ರಮ:ಬಿಬಿಎಂಪಿ ಆಯುಕ್ತರ ವಿರುದ್ಧ ಲೋಕಾದಲ್ಲಿ ದೂರು ದಾಖಲು
ಬೆಂಗಳೂರು :ಪೌರಕಾರ್ಮಿಕರಲ್ಲದವರನ್ನು ಪೌರಕಾರ್ಮಿಕರೆಂದು ಬಿಬಿಎಂಪಿಯಲ್ಲಿ ಅಕ್ರಮವಾಗಿ ನೇಮಕಾತಿ ನಡೆಸಲಾಗಿದೆಯೆಂದು ಬಿಬಿಎಂಪಿ ವಿರುದ್ದ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಮಂಡ್ಯದ ಸಾಮಾಜಿಕ ಕಾರ್ಯಕರ್ತ ಎಂ.ಎನ್ ಚಂದ್ರು ಎಂಬುವವರು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ವಿಶೇಷ ಆಯುಕ್ತ ಡಾ.ಅವಿನಾಶ್ ರಾಜೇಂದ್ರ ಮೆನನ್ ವಿರುದ್ದ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ಅಧಿಸೂಚನೆ ಸಂಖ್ಯೆ :ಸ.ಆ.ನೇ& ವಿ/ಪಿ ಆರ್ /೪೬/೨೦೨೩-೨೪
ಹಾಗೂ ಅಧಿಸೂಚನೆ ಸಂಖ್ಯೆ :ಸ.ಆ.ನೇ&ವಿ /ಪಿ ಆರ್/೩೩/೨೦೨೨-೨೩ ಕ್ರಮವಾಗಿ ಈ ಎರಡು ಅಧಿಸೂಚನೆಗಳ ಮೂಲಕ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು ಕ್ರಮವಾಗಿ ೧೧.೩೦೭ ಹಾಗೂ ೩೬೭೩ ಪೌರಕಾರ್ಮಿಕ ಹುದ್ದೆಗಳನ್ನು ವಿಶೇಷ ನೇಮಕಾತಿಯಡಿ ನೇಮಕಗೊಳಿಸಲು ಅಧಿಸೂಚನೆ ಹೊರಡಿಸಿರುತ್ತದೆ.
ಸ್ವಚ್ಚತೆಯಲ್ಲಿ ತೊಡಗಿಕೊಂಡಿರುವ ಕನಿಷ್ಟ ಎರಡು ವರ್ಷ ಕಡಿಮೆ ಇಲ್ಲದಂತೆ ನೇರಪಾವತಿ ದಿನಗೂಲಿ ಹಾಗೂ ಕ್ಷೇಮಾಭಿವೃದ್ಧಿ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಪರಿಗಣಿಸಲು ಅಧಿಸೂಚನೆಯಲ್ಲಿ ಹೇಳಲಾಗಿರುತ್ತದೆ.
ಆದರೆ ಈ ನಿಯಮಗಳನ್ನು ಉಲ್ಲಂಘಿಸಿರುವ ಬಿಬಿಎಂಪಿ ಅಧಿಕಾರಿಗಳು ಸ್ವಚ್ಚತೆಯ ಬದಲಿಗೆ ಈ ಸ್ವಚ್ಚತಾ ಪೌರಕಾರ್ಮಿಕರ ಉಸ್ತುವಾರಿ ಮಾಡಲು ನೇಮಿಸಿರುವ ಸೂಪರ್ ವೈಸರುಗಳನ್ನು ಸಹ (ಮೇಸ್ರಿಗಳು) ಪೌರಕಾರ್ಮಿಕರೆಂದು ಪರಿಗಣಿಸಿ ಅಂತಿಮ ನೇಮಕಾತಿ ಆದೇಶ ಹೊರಡಿಸಿರುತ್ತದೆ.ಸದ್ಯ ಬಿಬಿಎಂಪಿಯಲ್ಲಿ ಸ್ವಚ್ಚತೆ ನಿರ್ವಹಿಸುವ ಪೌರಕಾರ್ಮಿಕರ ಉಸ್ತುವಾರಿ ಮಾಡುವ ಸೂಪರ್ ವೈಸರುಗಳು ೭೫೯ ಮಂದಿ ಇದ್ದು.ಬಿಬಿಎಂಪಿ ಸ್ವತಃ ಒದಗಿಸಿರುವ ಮಾಹಿತಿಯಲ್ಲಿ ಇದನ್ನು ಧೃಡೀಕರಿಸಿರುತ್ತದೆ.
ಇದಲ್ಲದೆ ಬಿಬಿಎಂಪಿಯ ಪೌರಕಾರ್ಮಿಕರಿಗೆ ವೇತನವಲ್ಲದೆ ಹೆಚ್ಚುವರಿಯಾಗಿ ರೂ ೨೦೦೦ ಪ್ರೋತ್ಸಾಹ ಧನ ನೀಡಬೇಕೆಂಬ ಬೇಡಿಕೆಗೆ ಪ್ರತಿಯಾಗಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳ ಆದೇಶ ಸಂಖ್ಯೆ: ನ ಅ ೧೧೫.ಬಿಬಿಎಲ್ ೨೦೨೧ ರಲ್ಲಿ ಈ ರೀತಿಯ ಸೂಪರ್ ವೈಸರುಗಳಿಗೆ(ಮೇಸ್ರಿಗಳು) ಮಾತ್ರ ರೂ ೨೦೦೦ ಪ್ರೋತ್ಸಾಹ ಧನ ನೀಡಲು ಸರಕಾರದ ಆದೇಶವಾಗಿರುತ್ತದೆ. ಈ ಸೂಪರ್ ವೈಸರುಗಳನ್ನು ಸರಕಾರವೂ ಪೌರಕಾರ್ಮಿಕರೆಂದು ಗುರುತಿಸದೆ ಪ್ರತ್ಯೇಕವಾಗಿ ಸೂಪರ್ ವೈಸರುಗಳೆಂದು ನಿರ್ದಿಷ್ಟಿಕರಿಸಿರುತ್ತದೆ.
.ಆದಾಗಿಯು ಬಿಬಿಎಂಪಿ ನೇಮಕಾತಿ ಪ್ರಾಧಿಕಾರವು ಇವರನ್ನು ಸಹ ಪೌರಕಾರ್ಮಿಕರೆಂದು ಪರಿಗಣಿಸಿ ಅಂತಿಮ ನೇಮಕಾತಿ ಪಟ್ಟಿ ಪ್ರಕಟಿಸಿರುತ್ತದೆ.ಇದು ಸ್ವಚ್ಚತೆಯಲ್ಲಿ ತೊಡಗಿಕೊಂಡಿರುವ ನೈಜ ಪೌರಕಾರ್ಮಿಕರಿಗೆ ಅನ್ಯಾಯವಾಗುವ ಜತೆಗೆ ನೇಮಕಾತಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ
ಈ ಹಿನ್ನೆಲೆಯಲ್ಲಿ ಅಂತಿಮಪಟ್ಟಿಯ ಮೇಲೆ ಯಾವುದೆ ನೇಮಕಾತಿ ಆದೇಶ ನೀಡದಂತೆ ಹಾಗೂ ಈ ನಿಯಮ ಉಲ್ಲಂಘನೆಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡುವಂತೆ ಅಗತ್ಯ ತನಿಖೆ ಕೈಗೊಳ್ಳಲು ದೂರಿನಲ್ಲಿ ಕೋರಲಾಗಿದೆ.