Friday, November 21, 2025
spot_img

ಬಾಕೀ ವೇತನ ಪಾವತಿಗೆ ಲಂಚ ಪಡೆದಿಲ್ಲ:ಕೌನ್ಸಿಲರ್ ಅಣೆ ಪ್ರಮಾಣ ಪ್ರಹಸನ

ಬಿಡದಿ (ರಾಮನಗರ): ‘ವಾಟರ್‌ಮ್ಯಾನ್‌ಗಳ ₹1.65 ಕೋಟಿ ಬಾಕಿ ವೇತನ ಬಿಡುಗಡೆ ವಿಷಯಕ್ಕೂ ನನಗೂ ಸಂಬಂಧವಿಲ್ಲ. ಪುರಸಭೆ ಅಧಿಕಾರವಿರುವುದು ಜೆಡಿಎಸ್‌ ಕೈಯಲ್ಲಿದ್ದು, ಹಣ ಬಿಡುಗಡೆಗೆ ಸ್ವತಃ ಅಧ್ಯಕ್ಷರೇ ಸಹಿ ಮಾಡಿದ್ದಾರೆ. ಜನಪರವಾಗಿ ಕೆಲಸ ಮಾಡುತ್ತಿರುವ ನನ್ನ ರಾಜಕೀಯ ಏಳಿಗೆ ಸಹಿಸದೆ ಕಿಕ್‌ಬ್ಯಾಕ್ ಪಡೆದಿದ್ದೇನೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಇಲ್ಲಿನ ಪುರಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ಸಿ. ಉಮೇಶ್ ತಿರುಗೇಟು

ನೀಡಿದರು.

‘ಅಧ್ಯಕ್ಷರೇ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿರುವುದು ಹ್ಯಾಸ್ಯಾಸ್ಪದ. ಅವರೊಂದಿಗೆ ನಮ್ಮ ಪಕ್ಷದ ಸದಸ್ಯರು ಹಾಗೂ ಮುಖಂಡರು ಸಹ ಸೇರಿಕೊಂಡಿದ್ದಾರೆ. ನಾನು ಕಿಕ್‌ಬ್ಯಾಕ್ ಪಡೆದಿರುವುದಕ್ಕೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ’ ಎಂದು ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯ್ಲಲಿ ಸವಾಲು ಹಾಕಿದರು.

‘ನನೆಗುದಿಗೆ ಬಿದ್ದಿದ್ದ ನೌಕರರ ಬಾಕಿ ವೇತನ ಬಿಡುಗಡೆಗೆ ನಾನೂ ಶ್ರಮಿಸಿದ್ದೇನೆ. ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಗಮನಕ್ಕೆ ತಂದು ಒತ್ತಡ ಹೇರಿದ್ದೇನೆ. ಹರಿಪ್ರಸಾದ್ ಅಧ್ಯಕ್ಷರಾಗಿದ್ದಾಗ ನಡೆದಿದ್ದ ಸದಸ್ಯರ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ನೀಡಲಾಗಿತ್ತು. ಆಗ ಮೊತ್ತದ ಕುರಿತು ಸ್ಪಷ್ಟಪಡಿಸಿಕೊಳ್ಳಬೇಕು ಎಂದು ಆಕ್ಷೇಪಿಸಿದ್ದೆ’ ಎಂದು ಹೇಳಿದರು.

‘ಕೋರ್ಟ್‌ ಆದೇಶದ ಮೇರೆಗೆ ಕಾಲಮಿತಿಯಲ್ಲಿ ವೇತನ ಬಿಡುಗಡೆ ಮಾಡಬೇಕಾದ ಒತ್ತಡ ಮುಖ್ಯಾಧಿಕಾರಿಗೆ ಇತ್ತು. ಅದಕ್ಕಾಗಿ ಅವರು, ಎಲ್ಲಾ ಸದಸ್ಯರು ವೇತನ ಬಿಡುಗಡೆಗೆ ಒಪ್ಪಿರುವುದರಿಂದ ನೀವು ಮಾಡಿರುವ ಆಕ್ಷೇಪಣೆ ಹಿಂಪಡೆಯುವಂತೆ ಮನವಿ ಮಾಡಿದ್ದರು. ಅದಕ್ಕೆ ಒಪ್ಪಿ ಪತ್ರ ಬರೆದಿದ್ದೆ. ಬಳಿಕ ಅವರು ನಿಯಮಾನುಸಾರ ವೇತನ ಬಿಡುಗಡೆ ಮಾಡಿದ್ದಾರೆ’ ಎಂದು ತಿಳಿಸಿದರು.

‘ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ನಡುವೆ ಹೊಂದಾಣಿಕೆ ಇಲ್ಲದಿರುವುದೇ, ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ. ವಾಟರ್‌ಮ್ಯಾನ್ ಮಾಯಣ್ಣ ಮಹಿಳೆ ಜೊತೆ ಹಣ ಕೇಳುವಾಗ ಪ್ರಸ್ತಾಪವಾಗಿರುವ ಹೆಸರು ನನ್ನದಲ್ಲ. ನನ್ನ ವಿರುದ್ಧ ಆರೋಪ ಮಾಡಿರುವ ಸದಸ್ಯ ನಾಗಣ್ಣ, ತಮ್ಮ ವಾರ್ಡ್‌ನಲ್ಲಿ ಕಾಮಗಾರಿ ನಡೆಸಲು ಗುತ್ತಿಗೆದಾರರಿಂದ ₹2 ಲಕ್ಷ ಲಂಚ ಪಡೆದಿದ್ದಾರೆ. ಅದಕ್ಕೆ ನನ್ನ ಬಳಿ ದಾಖಲೆ ಇದೆ. ಮುಖಂಡ ಬೆಟ್ಟಸ್ವಾಮಿ ಸೇರಿದಂತೆ ಇತರ ಸದಸ್ಯರು ಸಹ ತಮ್ಮ ವಾರ್ಡ್‌ನಲ್ಲಿ ಕಾಮಗಾರಿ ನಡೆಸುವುದಕ್ಕೆ ಲಂಚ ತೆಗೆದುಕೊಂಡಿದ್ದಾರೆ’ ಎಂದು ಆರೋಪಿಸಿದ ಉಮೇಶ್, ನಾಗಣ್ಣ ಹಾಗೂ ಕೆಲ ಸದಸ್ಯರ ಮೊಬೈಲ್ ಸಂಭಾಷಣೆಯ ತುಣುಕುಗಳನ್ನು ಕೇಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆಯ 18 ವಾಟರ್‌ಮ್ಯಾನ್‌ಗಳು ಹಾಗೂ ಉಮೇಶ್ ಬೆಂಬಲಿಗರು ಇದ್ದರು.

‘ವೇತನ ಬಿಡುಗಡೆ ಮಾಡಿಸಲು ಹಲವರಿಗೆ ಹಣ ಕೊಟ್ಟಿರುವೆ’

‘ಒಂಬತ್ತು ವರ್ಷಗಳಿಂದ ಕಾರ್ಮಿಕ ಕೋರ್ಟ್‌ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ನಾನು ಅಲೆದಿದ್ದರಿಂದ ನೌಕರರ ಬಾಕಿ ವೇತನ ಬಿಡುಗಡೆಯಾಗಿದೆ. ಅದಕ್ಕಾಗಿ ಸುಮಾರು ₹9 ಲಕ್ಷ ಖರ್ಚಾಗಿದ್ದು, ಹಲವರಿಗೆ ಹಣ ಕೊಟ್ಟಿದ್ದೇನೆ. ಅವರ ಹೆಸರನ್ನು ನಾನಿಲ್ಲಿ ಹೇಳಲಾಗದು. ನನ್ನ ಶ್ರಮಕ್ಕಾಗಿ ನೌಕರರೇ ಮಾತನಾಡಿಕೊಂಡು ನನಗೆ ಹಣ ಕೊಡಲು ಮುಂದಾಗಿದ್ದಾರೆ. ಆದರೆ, ವೇತನ ಬಿಡುಗಡೆ ಮಾಡಿದ್ದಕ್ಕೆ ಪ್ರತಿಯಾಗಿ ಪ್ರತಿ ನೌಕರರ ಬಾಕಿ ವೇತನದಲ್ಲಿ ಶೇ 15ರಷ್ಟು ಕಮಿಷನ್‌ ಸಂಗ್ರಹಿಸಿದ್ದೇನೆ ಎಂಬುದು ಸುಳ್ಳು’ ಎಂದು ವಾಟರ್‌ಮ್ಯಾನ್ ಶಿವಕುಮಾರ್ (ಮಾಯಣ್ಣ) ದೇವರ ಫೋಟೊ ಮೇಲೆ ಕೈ ಇಟ್ಟು ಪ್ರಮಾಣ ಮಾಡಿದರು.

‘ನೌಕರರ ಕುಟುಂಬದ ಮಹಿಳೆ ಜೊತೆ ನಡೆಸಿರುವ ಮೊಬೈಲ್ ಸಂಭಾಷಣೆಯ ಆಡಿಯೊ ಮತ್ತು ಹಣದ ಕವರ್‌ ಪಡೆಯುತ್ತಿರುವ ಫೋಟೊ ನನ್ನದೇ. ನೌಕರನಿಗೆ ಹಿಂದೆ ನಾನು ಕೊಟ್ಟಿದ್ದ ₹1 ಲಕ್ಷ ಸಾಲವನ್ನು ಹಿಂದಿರುಗಿಸಿದಾಗ, ಸಾಕ್ಷಿಗಾಗಿ ಫೋಟೊ ತೆಗೆದುಕೊಂಡಿದ್ದಾರೆ. ಪುರಸಭೆ ಸದಸ್ಯ ಉಮೇಶ್ ಅವರ ಹೆಸರು ಹೇಳಿದರೆ ಹೆದರಿಕೊಂಡು ಸಾಲ ಬೇಗ ಕೊಡುತ್ತಾರೆಂದು ಮೊಬೈಲ್‌ನಲ್ಲಿ ಮಾತನಾಡುವಾಗ ಅವರ ಹೆಸರು ಹೇಳಿದ್ದೇನೆ. ಈ ವಿಷಯದಲ್ಲಿ ನನ್ನದೇನೂ ತಪ್ಪಿಲ್ಲ’ ಎಂದರು. ಅವರ ಮಾತಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದ ಮಹಿಳೆ ಸಹ ದನಿಗೂಡಿಸಿದರು.

ಸೇವೆಯಿಂದ ಶಿವಕುಮಾರ್ ತೆಗೆದು ಹಾಕಲು ಡಿ.ಸಿ ಸೂಚನೆ

ರಾಮನಗರ: ಬಿಡದಿ ಪುರಸಭೆಯಲ್ಲಿ ಅನುಮೋದನೆಗೊಳ್ಳದ ವಾಟರ್‌ಮ್ಯಾನ್‌ಗಳು ಹಾಗೂ ಕಂಪ್ಯೂಟರ್ ಅಪರೇಟರ್‌ಗಳ ವೇತನ ಪಾವತಿಗೆ ಸಂಬಂಧಿಸಿದಂತೆ, ನೌಕರರಿಂದ ಹಣ ಪಡೆದಿರುವ ಆರೋಪ ಎದುರಿಸುತ್ತಿರುವ ವಾಟರ್‌ಮ್ಯಾನ್ ಶಿವಕುಮಾರ್ ಅವರನ್ನು ಸೇವೆಯಿಂದ ತೆಗೆದು ಹಾಕುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ

ವೇತನ ಪಾವತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಗುರುವಾರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಅದರ ಬೆನ್ನಲ್ಲೇ, ಶಿವಕುಮಾರ್ ಅವರನ್ನು ಸೇವೆಯಿಂದ ತೆಗೆದು ಹಾಕಿ ವರದಿ ನೀಡುವಂತೆ ಯಶವಂತ್ ವಿ. ಗುರುಕರ್ ಅವರು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!