ಬೀದರ್: ‘ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಬ್ರಿಮ್ಸ್) ನಡೆದಿರುವ ಅಕ್ರಮದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಗೆ ವಹಿಸಲಾಗಿದೆ. ವರದಿ ಆಧರಿಸಿ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ರಿಮ್ಸ್‌ನ ಅಕ್ರಮಗಳ ತನಿಖೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಪತ್ರ ಬರೆದಿದ್ದೆ. ಅವರು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುತ್ತಿದ್ದಾರೆ’ ಎಂದರು.
ಅಕ್ರಮಗಳ ಕುರಿತು ಬೀದರ್ ಜಿಲ್ಲಾಧಿಕಾರಿ ಕೂಡಾ ವರದಿ ಕೊಟ್ಟಿದ್ದಾರೆ. ಬ್ರಿಮ್ಸ್ ಒಂದಿಲ್ಲೊಂದು ಕಾರಣದಿಂದ ಚರ್ಚೆಯಲ್ಲಿದೆ. ಅದನ್ನು ಸರಿಪಡಿಸಬೇಕು ಎಂದು ತಾಕೀತು ಮಾಡಿದರೂ ಆ ಕೆಲಸವಾಗಿಲ್ಲ’ ಎಂದು ಹೇಳಿದರು.
‘ಬ್ರಿಮ್ಸ್‌ನ ಖಾತೆಯಲ್ಲಿ ಸದ್ಯ ₹1 ಕೋಟಿಗೂ ಅಧಿಕ ಹಣವಿದೆ. ಆದರೆ, ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಇಂಜೆಕ್ಷನ್, ಔಷಧ ಸೇರಿದಂತೆ ರೋಗಿಗಳಿಗೆ ಯಾವುದೂ ಸಕಾಲಕ್ಕೆ ಸಿಗುತ್ತಿಲ್ಲ. ಲಭ್ಯವಿದ್ದರೂ ಕೊಡುತ್ತಿಲ್ಲ’ ಎಂದು ಸಚಿವರು ಅಸಮಾಧಾನ ಹೊರಹಾಕಿದರು.
‘ನಿಯಮ ಉಲ್ಲಂಘಿಸಿ ವೈದ್ಯರ ನೇಮಕಾತಿ’: ‘ಬ್ರಿಮ್ಸ್‌ನಲ್ಲಿ 40 ತಜ್ಞ ವೈದ್ಯರ ನೇಮಕಾತಿಗೆ ಸಂಬಂಧಿಸಿ ನಿಯಮ ಅನುಸರಿಸಿಲ್ಲ. ‘ಡಿ’ ಗ್ರೂಪ್ ನೌಕರರಿಗೆ ಸಂಬಳ ಕೊಟ್ಟಿಲ್ಲ. ಔಷಧ ಖರೀದಿಗೆ ಟೆಂಡರ್ ಕರೆದಿಲ್ಲ. ಇದೆಲ್ಲ ಸರ್ಕಾರದ ನಿಯಮಗಳ ಸ್ಪಷ್ಟ ಉಲ್ಲಂಘನೆ. ನಿವೃತ್ತ ನ್ಯಾಯಾಧೀಶರಿಂದ ತನಿಖೆ ಪೂರ್ಣಗೊಂಡ ಬಳಿಕ ಕ್ರಮ ಜರುಗಿಸಿ, ಬ್ರಿಮ್ಸ್‌ಗೆ ಕಾಯಕಲ್ಪ ನೀಡಲಾಗುವುದು’ ಎಂದು ಈಶ್ವರ ಖಂಡ್ರೆ ತಿಳಿಸಿದರು.


