Wednesday, September 17, 2025
spot_img

ಬೆಂಗಳೂರು:ವೈದ್ಯಕೀಯ ಸೀಟಿಗಾಗಿ ನಕಲಿ ದಾಖಲೆ ಸೃಷ್ಟಿ.೨೧ ಅಭ್ಯರ್ಥಿ ಸೇರಿ ಹಲವರ ವಿರುದ್ದ ಕ್ರಮ

ವೈದ್ಯ ಸೀಟಿಗಾಗಿ ನಕಲಿ ದಾಖಲೆ: ಕೆಇಎ ದೂರು
21 ಅಭ್ಯರ್ಥಿಗಳು, ಸುಳ್ಳು ದಾಖಲೆ ಸೃಷ್ಟಿಸಿದ ನಾಲ್ವರ ವಿರುದ್ಧ ಕ್ರಮ? l ರಹಸ್ಯ ಪತ್ರ ಬರೆದಿದ್ದ ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ

 

ಬೆಂಗಳೂರು:ಸೆ.೧೩. ನಕಲಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ ಅಂಗವಿಕಲ ಕೋಟಾದ ಮೀಸಲಾತಿ ಅಡಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಯತ್ನಿಸಿದ ಜಾಲವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಭೇದಿಸಿದೆ.

ಪ್ರಕರಣವು ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣ 21 ಅಭ್ಯರ್ಥಿ ಗಳು ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿದ ನಾಲ್ವರ ವಿರುದ್ಧ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಅವರ ನಿರ್ದೇಶನದಂತೆ ಮುಖ್ಯ ಆಡಳಿತಾಧಿಕಾರಿ ಇಸ್ಲಾವುದ್ದೀನ್‌ ಗದ್ಯಾಳ್ ಅವರು ಮಲ್ಲೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

21 ಅಭ್ಯರ್ಥಿಗಳು ಶ್ರವಣ ದೋಷ ವಿದೆ ಎಂದು ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದ್ದರು. ಈ ಪೈಕಿ, ಹೆಚ್ಚಿನವರು ಯುಡಿ ಐಡಿ (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ಅನ್ನು ವಿಜಯನಗರ ಜಿಲ್ಲೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಿಂದ ಪಡೆದಿದ್ದಾರೆ. ಯುಡಿ ಐಡಿ ಪಡೆಯಲು ಇತ್ತೀಚೆಗೆ ಪಡೆದ ವೈದ್ಯಕೀಯ ಪ್ರಮಾಣಪತ್ರಗಳನ್ನು ಹಾಜರುಪಡಿಸಿದ್ದರು.

2025ನೇ ಸಾಲಿನಲ್ಲಿ ಯುಜಿಸಿಇಟಿ, ಯುಜಿ ನೀಟ್ ಪರೀಕ್ಷೆಗೆ ಹಾಜರಾದ ಈ ಅಭ್ಯರ್ಥಿಗಳು ಅಂಗವಿಕಲ ಕೋಟಾದ ಅಡಿ ವೈದ್ಯಕೀಯ ಸೀಟು ಕೋರಿದ್ದರು. ಆದರೆ, ಅವರಲ್ಲಿ ಹೆಚ್ಚಿನವರು ಮೂಲ ಅರ್ಜಿಯಲ್ಲಿ ಅಂಗವಿಕಲ ಮೀಸಲಾತಿ ಕೋರದೆ, ನಂತರ ಅರ್ಜಿ ತಿದ್ದುಪಡಿ ಮೂಲಕ ಅಂಗವಿಕಲ ಮೀಸಲಾತಿ ಕೋರಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರು.

ಸಿಇಟಿ–2006 ನಿಯಮಗಳ ಪ್ರಕಾರ ಅಂಗವಿಕಲ ಕೋಟಾದ ಅಡಿ ಸೀಟು ಕೋರಿರುವ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆಯನ್ನು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ (ಡಿಎಂಇ) ರಚಿಸಿದ ವೈದ್ಯಕೀಯ ಮಂಡಳಿಯಿಂದ ತಪಾಸಣೆಗೆ ಒಳಪಡಿಸಲಾಗುತ್ತದೆ. ಅಲ್ಲಿಂದ ಬಂದ ಅರ್ಹತೆ ಆಧಾರದಲ್ಲಿ ಮೆರಿಟ್ ಪ್ರಕಾರ ಕೆಇಎ ಸೀಟು ಹಂಚಿಕೆ ಮಾಡುತ್ತದೆ. ಹೀಗಾಗಿ, ಕೆಇಎ ಈ ಅಭ್ಯರ್ಥಿಗಳನ್ನು ವೈದ್ಯಕೀಯ ತಪಾಸಣೆ ಗಾಗಿ ಜುಲೈ 9 ಮತ್ತು 17ರಂದು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿತ್ತು.

ಸೆ.1ರಂದು ಕೆಇಎಗೆ ರಹಸ್ಯ ಪತ್ರ ಬರೆದಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, ‘ಈ ಅಭ್ಯರ್ಥಿಗಳು ನಕಲಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದ್ದು, ಈ ಬಗ್ಗೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋರಿದ್ದಾರೆ.

ರಹಸ್ಯ ಪತ್ರದಲ್ಲಿ ಏನಿದೆ: ‘ಶ್ರವಣ ದೋಷದ ನೈಜತೆಯ ತಪಾಸಣೆಗೆ ಎಲ್ಲ 21 ಅಭ್ಯರ್ಥಿಗಳನ್ನು ಆಡಿಯೊಗ್ರಾಂ ಬೆರಾ (ಶ್ರವಣ ದೋಷ ಪರೀಕ್ಷೆ) ಪರೀಕ್ಷೆಗೆ ನಿಮ್ಹಾನ್ಸ್‌ಗೆ ಕಳುಹಿಸಲಾಗಿತ್ತು. ಈ ಪೈಕಿ, ಎಂಟು ಅಭ್ಯರ್ಥಿಗಳ ಅಂಗವಿಕಲ ಪ್ರಮಾಣಪತ್ರದ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆಯ ಇಎನ್‌ಟಿ ವಿಭಾಗದ ಪ್ರಾಧ್ಯಾಪಕರು ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಪರ್ಣಾ ಎಂಬ ಅಭ್ಯರ್ಥಿಯು ನಕಲಿ ಅಂಗವಿಕಲ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ವಿಜಯನಗರ ಜಿಲ್ಲೆಯ ಹೊಸಪೇಟೆಯ ಸಾರ್ವಜನಿಕ ಆಸ್ಪತ್ರೆ ಯಿಂದ ಯುಡಿ ಐಡಿ ಪಡೆದಿದ್ದಾರೆಂದೂ ತಿಳಿಸಿದ್ದಾರೆ. ನಿಮ್ಹಾನ್ಸ್‌ಗೆ ಕಳುಹಿಸಿದ್ದ ಅಭ್ಯರ್ಥಿಗಳು ಅಲ್ಲಿಂದ ಪಡೆಯಲಾಗಿದೆ ಎಂದು ಉಲ್ಲೇಖಿಸಿದ್ದ ಆಡಿಯೊಗ್ರಾಂ ಬೆರಾ ವರದಿಗಳನ್ನು ಸಲ್ಲಿಸಿದ್ದರು.

ವರದಿಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ವಿಕ್ಟೋರಿಯಾ ಆಸ್ಪತ್ರೆಯ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ಸಿ. ರವಿಶಂಕರ್, ಈ ದಾಖಲೆಗಳ ನೈಜತೆ ಬಗ್ಗೆ ನಿಮ್ಹಾನ್ಸ್‌ಗೆ ಪತ್ರ ಬರೆದಿದ್ದರು. ‘ಈ 21 ಅಭ್ಯರ್ಥಿಗಳ ಪೈಕಿ ಯಾರೊಬ್ಬರೂ ತಮ್ಮಲ್ಲಿ ತಪಾಸಣೆ ನಡೆಸಿಲ್ಲ. ಈ ಅಭ್ಯರ್ಥಿಗಳು ಸಲ್ಲಿಸಿರುವ ವರದಿಗಳು ಅಧಿಕೃತವಲ್ಲ’ ಎಂದು ನಿಮ್ಹಾನ್ಸ್ ವರದಿ ನೀಡಿತ್ತು.

ಕೆಇಎಗೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಬರೆದ ರಹಸ್ಯ ಪತ್ರದ ಆಧಾರದಲ್ಲಿ ಈ ಎಲ್ಲ ಅಭ್ಯರ್ಥಿಗಳಿಗೆ ಸೆ. 8ರಂದು ಕೆಇಎ ನೋಟಿಸ್ ನೀಡಿತ್ತು. ಅಂಗವಿಕಲ ಕೋಟಾದ ಅಡಿ ಅರ್ಜಿ ಸಲ್ಲಿಸಿರುವ ಬಗ್ಗೆ ಎಲ್ಲ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿತ್ತು. ಇಬ್ಬರು ಅಭ್ಯರ್ಥಿಗಳು (ಡಿ. ಜಯದೇವ ಮತ್ತು ಬಿ. ಪ್ರೀತಮ್) ಮತ್ತು ಮೂವರು ಅಭ್ಯರ್ಥಿಗಳ ಪೋಷಕರು ಹಾಜರಾಗಿ ಲಿಖಿತವಾಗಿ ವಿವರಣೆ ನೀಡಿದ್ದಾರೆ. ಅಭ್ಯರ್ಥಿಗಳು ಮತ್ತು ಪೋಷಕರು ನೀಡಿರುವ ಮನವಿಗಳಲ್ಲಿ ಭರಮಪ್ಪ, ರಾಜಣ್ಣ, ಚಂದ್ರಶೇಖರ್ ಮತ್ತು ಚೆನ್ನಕೇಶವ ಎಂಬವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಅಂಗವಿಕಲ ಕೋಟಾದಲ್ಲಿ ಸೀಟಿಗೆ ₹38 ಲಕ್ಷ!

ಅಂಗವಿಕಲ ಕೋಟಾದಡಿ ₹38 ಲಕ್ಷಕ್ಕೆ ಸರ್ಕಾರಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಚಂದ್ರಶೇಖರ್ ಮತ್ತು ಭರಮಪ್ಪ ಭರವಸೆ ನೀಡಿದ್ದರು. ಈ ಬಗ್ಗೆ ವೈ.ಜೆ. ಯುಕ್ತಾರಾಜ್‌ ಗೌಡ ಎಂಬ ಅಭ್ಯರ್ಥಿಯ ತಂದೆ ಕೆಇಎಗೆ ನೀಡಿದ್ದ ಲಿಖಿತ ಮನವಿಯಲ್ಲಿ ತಿಳಿಸಿದ್ದಾರೆ.

‘ನನ್ನ ಮಗ ಅರ್ಜಿ ಸಲ್ಲಿಸುವಾಗ ಅಂಗವಿಕಲ ಕೋಟಾ ಎಂದು ನಮೂದಿಸಿರಲಿಲ್ಲ. ನಾನು ಮಗನಿಗೆ ಆಡಳಿತ ಮಂಡಳಿ ಕೋಟಾದಲ್ಲಿ ವೈದ್ಯಕೀಯ ಸೀಟು ಕೊಡಿಸಲು ಹುಡುಕುತ್ತಿದ್ದಾಗ ನನ್ನ ಪರಿಚಯದ ನೆಲಮಂಗಲದ ದೇವರಾಜ್ (ದೈಹಿಕ ಶಿಕ್ಷಕರು) ಅವರ ಸಂಬಂಧಿಕರಾದ ಚಂದ್ರಶೇಖ‌ರ್ ಅವರನ್ನು ಪರಿಚಯಿಸಿದರು. ಅವರು ನಂದಿನಿ ಬಡಾವಣೆಯ ಕೃಷ್ಣಾನಂದ ನಗರ ಪ್ರೌಢ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಭರಮಪ್ಪ ಎಂಬುವರ ಮೊಬೈಲ್ ನಂಬರ್ ಕೊಟ್ಟರು. ಚಂದ್ರಶೇಖರ್ ಮತ್ತು ಭರಮಪ್ಪ ಇಬ್ಬರೂ ಸೇರಿ ಅಂಗವಿಕಲ ಕೋಟಾದಲ್ಲಿ ಅರ್ಜಿಯನ್ನು ಮಾರ್ಪಾಡು ಮಾಡಿ ಕೆಇಎಯಿಂದ ಸೀಟು ಕೊಡಿಸುತ್ತೇವೆಂದು ತಿಳಿಸಿದರು. ನನ್ನ ಮಗನ ಹೆಸರಿನಲ್ಲಿ ವಿಕ್ಟೋರಿಯಾ ಮತ್ತು ನಿಮ್ಹಾನ್ಸ್‌ನಲ್ಲಿ ಕೆಲವು ದಾಖಲೆಗಳನ್ನು ಸೃಷ್ಟಿಸಿ ಅಸಲಿ ದಾಖಲೆಗಳನ್ನು ಭರಮಪ್ಪನವರೇ ಇಟ್ಟುಕೊಂಡಿದ್ದಾರೆ. ಅಲ್ಲದೆ, ಚಂದ್ರಶೇಖರ್ ಮತ್ತು ಭರಮಪ್ಪ ಅ‌ವರು ₹38 ಲಕ್ಷಕ್ಕೆ ವೈದ್ಯಕೀಯ ಸೀಟು ಕೊಡಿಸುವ ಬಗ್ಗೆ ನನ್ನ ಬಳಿ ಮಾತನಾಡಿ, ₹10 ಲಕ್ಷ ಪಡೆದಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದರ್ಶನ್ ಭೀಮರಾಯ ಎಂಬ ಅಭ್ಯರ್ಥಿ ಸಲ್ಲಿಸಿದ ಲಿಖಿತ ಮನವಿಯಲ್ಲಿ, ‘ನನಗೆ ಹೆಚ್ಚಿನ ಅಂಕಗಳು ನೀಟ್ ಪರೀಕ್ಷೆಯಲ್ಲಿ ಬರದೆ ಇದ್ದುದರಿಂದ ವೈದ್ಯಕೀಯ ಸೀಟು ಪಡೆಯಲು ಭರಮಪ್ಪ ಅವರನ್ನು‌ ಸಂಪರ್ಕಿಸಿದಾಗ ಅವರು ಅಂಗವಿಕಲ ಕೋಟಾದ ಅಡಿ ವೈದ್ಯಕೀಯ ಸೀಟು ಕೊಡಿಸುವುದಾಗಿ ತಿಳಿಸಿದರು. ಸೀಟಿಗೆ ₹ 35 ಲಕ್ಷ ಆಗುತ್ತದೆ. ₹ 15 ಲಕ್ಷ ಮುಂಗಡ ನೀಡಬೇಕೆಂದೂ ಹೇಳಿದರು. ಮುಂಗಡ ಹಣ ಪಡೆದ ನಂತರ ತನ್ನ ಇ-ಮೇಲ್‌ ಐಡಿ, ಮೊಬೈಲ್‌ ನಂಬರ್, ಯೂಸರ್ ಐಡಿ, ಪಾಸ್‌ವರ್ಡ್‌, ಸಿಇಟಿ ಮತ್ತು ನೀಟ್ ವಿವರಗಳನ್ನು ಪಡೆದುಕೊಂಡರು ಮತ್ತು ಅಂಗವಿಕಲ ಪ್ರಮಾಣಪತ್ರವನ್ನು ಅಂಚೆಯಲ್ಲಿ ಕಳುಹಿಸಿದರು. ಭರಮಪ್ಪನವರೇ ವಿಕ್ಟೋರಿಯಾ ಆಸ್ಪತ್ರೆಗೆ ತೋರಿಸಲು ಕೆಲವು ದಾಖಲೆಗಳನ್ನು ಕೊಟ್ಟರು’ ಎಂದು ತಿಳಿಸಿದ್ದಾರೆ.

ಯಾರ ಮೇಲೆ ಎಫ್‌ಐಆರ್

ಅಧ್ಯಂತ ಶರಣ್ಯ, ಬಿ.ಕೆ. ಯಶಸ್, ಬಿ.ಟಿ. ಪುಷ್ಕರ, ಎ. ಸುದರ್ಶನ್, ಕೆ ಭರತ್ ಚಕ್ರವರ್ತಿ, ಅಲಿಯಾ ಫಾತಿಮಾ, ಡಿ. ಜಯದೇವ್, ಪಿ. ವಿಜಯ್ ಮಯೂರ್ , ಎ. ಐಮಾನ್, ವೈ.ಜೆ. ಯುಕ್ತಿರಾಜ್ ಗೌಡ, ಎ.ಎನ್. ಅಪರ್ಣಾ, ಗೀತಿಕಾ ರಾವ್, ಟಿ. ರಿತಿಕಾ, ಪಿ.ಕೆ. ಶ್ರದ್ಧಾ, ಎಂ. ಕೃಷ್ಣ ಚೈತನ್ಯ, ಟಿ.ಪಿ. ಚಿನ್ಮಯ್, ಬಿ. ಪ್ರೀತಮ್ , ಖತ್ವಿಕ್ ದೇವ ಕುಮಾರ್, ಸಾಯಿಶಿವ ಶಿವಪ್ಪಯ್ಯನಮಠ, ಪ್ರೀತಿ ಪಿ.ಪಾಟೀಲ್, ದರ್ಶನ್.

ನೆರವಾದ ನಾಲ್ವರು

ಭರಮಪ್ಪ, ರಾಜಣ್ಣ, ಚಂದ್ರಶೇಖರ್, ಚೆನ್ನಕೇಶವ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!