ಹಳೇ ಮೈಸೂರು, ನ.24: ಮಂಡ್ಯ ನೆಲದ ಅಪ್ಪಟ ಗ್ರಾಮೀಣ ಸಂವೇದನೆಯ ಕಥೆಗಾರ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಕಥೆಗಳಲ್ಲಿ ಗಾಂಧಿ ಪ್ರಭಾವದ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ದಿನಾಂಕ: 25.11.2025ರ ಮಂಗಳವಾರ ಮಧ್ಯಾಹ್ನ 2.30ಕ್ಕೆ ಬೆಸಗರಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮೈಸೂರಿನ ಎಂಐಟಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಜಿ.ಡಿ. ಶಿವರಾಜು ಅವರು “ಬೆಸಗರಹಳ್ಳಿ ರಾಮಣ್ಣ ಅವರ ಗಾಂಧಿ ಚಿಂತನೆಗಳು” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದು, ಸಾಹಿತ್ಯ ಅಕಾಡೆಮಿ ಸದಸ್ಯೆ ಶ್ರೀಮತಿ ಎಚ್.ಆರ್. ಸುಜಾತ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಸಗರಹಳ್ಳಿಯ ಕನ್ನಡ ಕಾರ್ಯಕರ್ತರಾದ ಮಹಮ್ಮದ್ ಇಲಿಯಾಸ್ ಭಾಗವಹಿಸಲಿದ್ದು, ಡಾ. ಕೆ.ಎಲ್.ದಿವ್ಯಾ ಉಪಸ್ಥಿತರಿರಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಬಂಗಾರ ನಾಯ್ಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಚಕೋರ ಮಾಲಿಕೆಯ ಜಿಲ್ಲಾ ಸಂಚಾಲಕ ಕೆ.ಎಂ.ಕೃಷ್ಣೇಗೌಡ ಕೀಲಾರ ತಿಳಿಸಿದ್ದಾರೆ.

ಡಾ. ಬೆಸಗರಹಳ್ಳಿ ರಾಮಣ್ಣ ಪರಿಚಯ:
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಜನಿಸಿದ ರಾಮಣ್ಣ ಎಂಬಿಬಿಎಸ್ ಪದವೀಧರರು. ರಾಜ್ಯ ಸರ್ಕಾರದ ದವಾಖಾನೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ 1996ರಲ್ಲಿ ನಿವೃತ್ತರಾದರು. ತಮ್ಮಲ್ಲಿದ್ದ ಪ್ರತಿಭೆ, ಶಕ್ತಿ, ಚೈತನ್ಯಗಳನ್ನು ಗ್ರಾಮೀಣ ಸಮುದಾಯದ ನೋವು, ನಲಿವು, ಶೋಷಣೆಗೆ, ಅಜ್ಞಾನಕ್ಕೆ ಸ್ಪಂದಿಸಲು ಮೀಸಲಿಟ್ಟವರು ರಾಮಣ್ಣ. ಒಂದೆಡೆ ಸಮುದಾಯದ ದೇಹಾರೋಗ್ಯ, ಸ್ವಾಸ್ಥ್ಯದ ಕಡೆಗೆ ಗಮನಹರಿಸಿದರೆ ಮತ್ತೊಂದೆಡೆ ಪ್ರವೃತ್ತಿಯಿಂದ ಲೇಖಕರಾಗಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಕಡೆಗೂ ಗಮನ ಹರಿಸಿದರು.
ಹಳ್ಳಿಯ ಬದುಕಿನೊಂದಿಗೆ ಮಿಳಿತವಾಗಿರುವ ಜಾನಪದ ಸಂಸ್ಕೃತಿಯ ಅಂಗವಾದ ಕಥೆ, ಲಾವಣಿ, ಪದಗಳು ರಾಮಣ್ಣನವರನ್ನು ಆಕರ್ಷಿಸಿತು. ಬಸವಣ್ಣ, ಗಾಂಧಿ, ಪೆರಿಯಾರ್, ಕುವೆಂಪು ಮುಂತಾದವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸುತ್ತಲಿನ ಅಸಮಾನತೆಯ ವಿರುದ್ಧ, ಅನ್ಯಾಯದ ವಿರುದ್ಧ ಹೋರಾಡುತ್ತ, ಸಮಾಜವಾದಿ ಯುವಜನ ಸಭಾ, ಬಂಡಾಯ ಸಾಹಿತ್ಯ ಸಂಘಟನೆ, ದಲಿತ ಸಂಘರ್ಷ ಸಮಿತಿ ಮುಂತಾದ ಅನೇಕ ಪ್ರಗತಿಪರ ಸಂಘಟನೆಗಳೊಡನೆ ಗುರುತಿಸಿಕೊಂಡಿದ್ದರು.
ಹಳ್ಳಿಗಾಡಿನ ವೈದ್ಯರಾಗಿ ತಾವು ಕಂಡದ್ದನ್ನು ಕಂಡಂತೆ ವಾಸ್ತವ ನೆಲೆಗಟ್ಟಿನ ಮೇಲೆ ಮಾನವೀಯ ಸಂಬಂಧಗಳ ಶೋಧಕರಾಗಿ, ಗ್ರಾಮಾಂತರ ಬದುಕಿನ ನೋವು ನಲಿವುಗಳನ್ನು, ಊಳಿಗಮಾನ್ಯ ಪದ್ಧತಿಯನ್ನು ವಿರೋಧಿಸುವಂತಹ ವಿಭಿನ್ನ ನೆಲೆಗಳಲ್ಲಿ ಹಲವಾರು ಕತೆಗಳನ್ನು ರಚಿಸಿದರು.
ಪ್ರಕಟಿತ ಕೃತಿಗಳು: ನೆಲದ ಒಡಲು, ಗರ್ಜನೆ, ಹರಕೆಯ ಹಣ, ಒಂದು ಹುಡುಗನಿಗೆ ಬಿದ್ದ ಕನಸು(ಕಥಾ ಸಂಕಲನಗಳು); ರಕ್ತ ಕಣ್ಣೀರು, ತೋಳಗಳ ನಡುವೆ(ಕಾದಂಬರಿಗಳು); ಶೋಕಚಕ್ರ(ಕವನ ಸಂಕಲನ); ಕನ್ನಂಬಾಡಿ, ಕೊಳಲು ಮತ್ತು ಖಡ್ಗ(ಸಣ್ಣ ಕತೆಗಳ ಸಂಕಲನ). ಇವರು ಬರೆದ ಜಾಡಮಾಲಿ ಮತ್ತು ನೂರುರೂಪಾಯಿ ನೋಟು ಕಥೆಗಳು ಜ್ಞಾನಪೀಠ ಪ್ರಶಸ್ತಿ ಸಮಿತಿ ಆಯ್ಕೆ ಮಾಡಿ ಪ್ರಕಟಿಸುವ ‘ಭಾರತೀಯ ಕಹಾನಿಯಾ’ ಸಂಕಲನದಲ್ಲಿ ಸ್ಥಾನ ಪಡೆದಿವೆ. ವರ್ಧಮಾನ ಉದಯೋನ್ಮುಖ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಗೌರವ ಪ್ರಶಸ್ತಿಗಳು ಲಭಿಸಿವೆ


