ಮಂಡ್ಯ: ರಾಜ್ಯ ಸರಕಾರವು ಸಂಪೂರ್ಣ ಒಳ ಮೀಸಲಾತಿ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂಕು ಎಂದು ಆದಿ ಜಾಂಬವ ವಿಚಾರ ವೇದಿಕೆಯ ಅಧ್ಯಕ್ಷ ನಡಗಲಪುರ ಮಂಜುನಾಥ್ ಒತ್ತಾಯಿಸಿದರು.
ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ಆಯಾ ರಾಜ್ಯ ಸರಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿ ವರ್ಷಕ್ಕೂ ಹೆಚ್ಚು ಸಮಯವಾದರೂ ಸಂಪೂರ್ಣ ಒಳಮೀಸಲಾತಿ ಜಾರಿಗೊಳಿಸದೇ ಮಾದಿಗ ಜನಾಂಗವನ್ನು ವಂಚಿಸಲಾಗಿದೆ ಎಂದು ದೂರಿದರು.
ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುವ ಸಮುದಾಯಗಳ ವಿರುದ್ಧ ಪೊಲೀಸರ ಮೂಲಕ ದಲಿತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವ ರಾಜ್ಯ ಸರಕಾರ ಎ.ಕೆ, ಎ.ಡಿ, ಎ.ಎ ಸಮಸ್ಯೆ ನಿವಾರಣೆ ಮಾಡದೇ ಹೊಲೆಯ ಮತ್ತು ಮಾದಿಗ ಮಧ್ಯೆ ಗೊಂದಲ ಸೃಷ್ಠಿಸುತ್ತಿದೆ ಎಂದು ಆರೋಪಿಸಿದರು.
ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಒಳ ಮೀಸಲಾತಿ ಸೀಮಿತಗೊಳಿಸದೇ ಒಡ್ತಿ, ಬ್ಯಾಕ್‌ಲಾಗ್ ಹುದ್ದೆಗಳಲ್ಲಿ, ರಾಜಕೀಯ ಕ್ಷೇತ್ರ, ಎಸ್ಸಿಪಿ/ಟಿಎಸ್ಪಿ ಬಜೆಟ್‌ನಲ್ಲೂ ಒಳಮೀಸಲಾತಿ ಜಾರಿ ಮಾಡಬೇಕು. ಜಾತಿ ಪ್ರಮಾಣ ಪತ್ರ ಪಡೆಯಲು ಆಗುತ್ತಿರುವ ವಿಳಂಬ ನೀತಿಯನ್ನು ಸರಿಪಡಿಸಲು ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಒಳಮೀಸಲಾತಿ ಸಂಬಂದಿಸಿದಂತೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಿಂಚಿತ್ತು ದನಿಯೆತ್ತದ ಸಚಿವ ಹೆಚ್.ಸಿ.ಮಹದೇವಪ್ಪ ಒಳಮಿಸಲಾತಿಯ ವಿರುದ್ಧವೇ ನಿಂತಿರುವುದು ವಿಷಾಧನೀಯ.
ಅವರು ಸಮಾಜಿಕ ನ್ಯಾಯದ ಹರಿಕಾರರಲ್ಲ, ಸಾಮಾಜಿಕ ಅನ್ಯಾಯದ ಹರಿಕಾರ, ಮಾದಿಗ ಸಮಾಜದ ಸಮಸ್ಯೆ ಆಲಿಸದ ಸಚಿವರು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾದಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಸರಿಪರಿಸದಿದ್ದರೆ ದೇಶದ ಗಮನ ಸೆಳೆಯಲು ಕರ್ನಾಟಕದ ರಾಜಭವನ, ದೆಹಲಿಯ ಸುಪ್ರೀಂಕೋರ್ಟ್ ವಿಧಾನಸೌಧದ ಎದುರು ಕರ್ನಾಟಕದಲ್ಲಿ ಒಳಮೀಸಲಾತಿಗೆ ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ, ಮೈಮೇಲೆ ಮಲ ಸುರಿದು, ದೇಹ ದಂಡಿಸಿಕೊಳ್ಳುವುದಲ್ಲದೇ ಪ್ರಾಣತ್ಯಾಗಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಗೋಷ್ಟಿಯಲ್ಲಿ ಶಿವಶರಣ ಮಾದರ ಚನ್ನಯ್ಯ ಸೇವಾ ಸಮಿತಿಯ ಅಧ್ಯಕ್ಷ ಬಿ.ಕೃಷ್ಣ, ಪ್ರಶಾಂತ್, ಶಾಂತಕುಮಾರ, ಮಹೇಶ್ ಇದ್ದರು.