ಮಂಡ್ಯ:ಆ:೦೯ ನಗರದ ಒಳಾಂಗಣ ಕ್ರೀಡಾಂಗಣದ ಪಕ್ಕದ ಆವರಣದಲ್ಲಿ ವಾಲಿಬಾಲ್ ಮತ್ತು ಇತರ ಕ್ರೀಡಾ ಚಟುವಟಿಕೆಗಳು ನಡೆಯುತ್ತಿದ್ದು, ಸದರಿ ಸ್ಥಳದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ನಿರ್ಣಯದಿಂದ ಹಿಂದೆ ಸರಿಯಬೇಕು ಎಂದು ಮಂಡ್ಯ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಎಂ.ಕೆ.ಸೋಮಶೇಖರ್ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಡ್ಯ ನಗರ ಕೇಂದ್ರದಲ್ಲಿ ವಾಲಿಬಾಲ್ ಅಂಕಣ ನಿರ್ಮಿಸಲು ಒಳಾಂಗಣ ಕ್ರೀಡಾಂಗಣದ ಪಕ್ಕದ ಸ್ಥಳ ಬಿಟ್ಟರೆ ಬೇರೆ ಯಾವುದೇ ಸ್ಥಳ ಸೂಕ್ತವಾಗಿಲ್ಲ, ಆದ್ದರಿಂದ ವಾಲಿಬಾಲ್ ಕ್ರೀಡಾಪಟುಗಳಿಗೆ ಸದರಿ ಸ್ಥಳ ಮೀಸಲಿಡುವಂತೆ ಮನವಿ ಮಾಡಿದರು.
ಈಗಾಗಲೇ ಜಿಲ್ಲಾ ಕ್ರೀಡಾಂಗಣದ 400 ಮೀ ಅಂತರದಲ್ಲಿ ಕಲಾ ಭವನ, ಗಾಂಧಿಭವನ, ಕರ್ನಾಟಕ ಭವನ, ಶಿಕ್ಷಕರ ಭವನ ಸೇರಿದಂತೆ 7 ಭವನಗಳಿದ್ದು, ನೂತನವಾಗಿ ಕ್ರೀಡಾಂಗಣದ ಅಂಗಣದ ಆವರಣದಲ್ಲಿ ಮತ್ತೊಂದು ಭವನ ನಿರ್ಮಿಸಲು ಮುಂದಾಗಿರುವುದು ಖಂಡನಾರ್ಹ ಎಂದರು.
ಸದರಿ ಸ್ಥಳದಲ್ಲಿ ಕರ್ನಾಟಕ ಭವನ ನಿರ್ಮಿಸುವ ನಿರ್ಧಾರ ಕೈ ಬಿಡುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್.ಚಲುವರಾಯಸ್ವಾಮಿ, ಜಿಲ್ಲಾ ಸಂಸದ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ಪಿ.ರವಿಕುಮಾರ್‌ಗೌಡ, ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸೋಮಶೇಖರ್, ಮಂಡ್ಯ ಜಿಲ್ಲಾ ಜೂಡೋ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಜಿ.ಕುಬೇರ ನಾರಾಯಣ್ ಇದ್ದರು.
೮೭ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನೆನಪಿಗೆ ಜಿಲ್ಲಾಡಳಿತ ಕನ್ನಡ ಭವನ ನಿರ್ಮಿಸಲು ಸ್ಥಳಾವಕಾಶಕ್ಕಾಗಿ ಹುಡುಕಾಟ ನಡೆಸಿತ್ತು.ಅದಕ್ಕಾಗಿ ಕಲ್ಲಹಳ್ಳಿ ಹಾಗೂ ಚಿಕ್ಕಮಂಡ್ಯ ಬಳಿ ಜಾಗ ಗುರುತಿಸಿದ್ದರು ನಗರದಿಂದ ದೂರ ಎನಿಸುವ ಕಾರಣಕ್ಕೆ ನಗರದ ಮಧ್ಯಭಾಗದ ಒಳಾಂಗಣ ಕ್ರೀಡಾಂಗಣದಲ್ಲಿ ಕನ್ನಡ ಭವನ ನಿರ್ಮಿಸಲು ಸ್ಥಳ ಗುರುತಿಸಿರಯವುದು ಈಗ ವಿರೋಧಕ್ಕೆ ಕಾರಣವಾಗಿದೆ.


