ಮಂಡ್ಯ:ಮತಗಳವು ಸಂಬಂದ ಕಾಂಗ್ರೆಸ್ ಮಹಿಳಾ ಘಟಕ ನಡೆಸುತ್ತಿದ್ದ ಅಭಿಯಾನದ ವೇಳೆಯಲ್ಲಿ ತನ್ನನ್ನು ಕೇಳಿ ಮಾಹಿತಿ ನೀಡಬೇಕು ಎಂದು ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದವರ ವಿರುದ್ದ ಪೊಲೀಸರು ಎಫ್‌ಐಆರ್ ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಸೈಯದ್ ಖಲೀಮುಲ್ಲಾ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಅ.೧೭ರಂದು ಅಭಿಯಾನದ ಮಾಹಿತಿ ನೀಡಿದ ಕಾರಣಕ್ಕೆ ನಗರದ ೩೧ನೇ ವಾರ್ಡಿನ ಸಾದತ್‌ನಗರದ ಮಸೀದಿ ಬಳಿಯ ಸನಾಖಾನ್ ಸಮುದಾಯ ಭವನದ ಎದುರು ಮುನಾವರ್ ಪಾಷ ಹಾಗೂ ಆತನ ಹಿಂಬಾಲಕರು ಮಾರಣಾಂತಿಕವಾಗಿ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.
ಅಂದು ಬೆಳಿಗ್ಗೆ ೧೦ ಗಂಟೆ ವೇಳೆ ಮಾಹಿತಿ ನೀಡುವ ಸಂದರ್ಭದಲ್ಲಿ ಮುನಾವರ್ ಪಾಷ ಹಿಂಬಾಲಕರಾದ ಹಮೀದ್ ಖಾನ್, ಸುಹೇಳ್ ಖಾನ್, ಶಾ ನಿಜಾಮ್ ಎಂಬುವವರು ಯಾವುದೇ ಮಾಹಿತಿ ನೀಡದಂತೆ ಧಮ್ಕಿ ಹಾಕಿದರು. ಅವರ ಮಾತನ್ನು ಕೇಳದೇ ಕುಟುಂಬದ ಸಂಪೂರ್ಣ ಮಾಹಿತಿ ನೀಡಿದೆ. ಸುಮಾರು ಹದಿನೈದು ನಿಮಿಷಗಳ ನಂತರ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತೆರಳಿದ ವೇಳೆ ಅವನ ಹಿಂಬಾಲಕರು ಮನೆಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ಪತ್ನಿ ಹಾಗೂ ನಾಲ್ಕು ಮಕ್ಕಳು ಭಯ ಭೀತರಾಗಿದ್ದಾರೆ. ಅಲ್ಲದೇ ಸಾದತ್ ನಗರದಲ್ಲಿ ತಿರುಗಾಡಲಾಗದಂತೆ ಭಯದ ವಾತಾವರಣ ಸೃಷ್ಠಿಸಿದ್ದಾರೆ ಎಂದು ಅಳಲು ತೋಡಿಕೊಂಡರು.
ಇತ್ತ ದೂರು ಪಡೆದ ಪೊಲೀಸರೂ ಮುನಾವರ್ ಪಾಷನ ಮೇಲೆ ಎಫ್‌ಐಆರ್ ದಾಖಲಿಸದೇ, ನನ್ನನ್ನೇ ಸಮಾಧಾನ ತಿಳಿ ಹೇಳಿ ಕಳುಹಿಸಿದ್ದಾರೆ. ಮನೆಯಲ್ಲಿ ನೆಲೆಸಲು ಜೀವ ಬೆದರಿಕೆಯಿದೆ. ಆದ್ದರಿಂದ ಸೂಕ್ತ ರಕ್ಷಣೆ ಒದಗಿಸಲು ಪೊಲೀಸರು ಮುಂದಾಗಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸೈಯದ್ ನುಸ್ರತ್, ಪತ್ನಿ ಸೈಯಿದಾ ಮಲ್ಲಿಗಬಾನು, ಪುತ್ರಿ ಸೈಯಿದಾ ಮದಿನ ಫಲಕ್, ಪುತ್ರರಾದ ಸೈಯದ್ ರಿಹಾನ್ ಸುಜಾವನ್, ಸೈಯದ್ ತೌಸಿಪುಲ್ಲಾ, ಸೈಯದ್ ಪುಸೈಲ್ ಸುಜಾವನ್ ಇದ್ದರು.