Sunday, October 12, 2025
spot_img

ಮಂಡ್ಯ:ಕಾಳಿಕಾಂಬ ಸ್ಲಂ ಮನೆ ನಿರ್ಮಾಣಕ್ಕೆ ಹೈಕೋರ್ಟ್ ಅಸ್ತು.ಸೇವಾ ಸಮಿತಿ ಬೇಸ್ತು

ಬೆಂಗಳೂರು: ‘ದೇವಸ್ಥಾನದ ಪಕ್ಕದಲ್ಲಿ ಕೊಳೆಗೇರಿ

ನಿವಾಸಿಗಳ ಪುನರ್ವಸತಿ ಕೇಂದ್ರ ನಿರ್ಮಿಸಲು ಅವಕಾಶ ನೀಡುವುದರಿಂದ ದೇಗುಲದ ಪಾವಿತ್ರ್ಯ ಮತ್ತು ಪ್ರಶಾಂತ ವಾತಾವರಣಕ್ಕೆ ಧಕ್ಕೆಯಾಗುತ್ತದೆ’ ಎಂಬ ಆಕ್ಷೇಪವೊಂದಕ್ಕೆ ಹೈಕೋರ್ಟ್ ತೀವ್ರ ಆಘಾತ ವ್ಯಕ್ತಪಡಿಸಿದೆ.

ಕೊಳೆಗೇರಿ ನಿವಾಸಿಗಳಿಗೆ ಮನೆ ನಿರ್ಮಾಣಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಳ್ಳುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ, ಮಂಡ್ಯದ ಶ್ರೀ ಕಾಳಿಕಾಂಬ ಸೇವಾ ಸಮಿತಿಯ ಮರು ಪರಿಶೀಲನಾ ಅರ್ಜಿ ಹಾಗೂ ಹೊಸಹಳ್ಳಿಯ ಇಕ್ಕಳಕ್ಕಿ ರಾಮಲಿಂಗೇಗೌಡ ಸೇರಿದಂತೆ ಎಂಟು ಜನ ಭಕ್ತರು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸಾರಾಸಗಟಾಗಿ ತಿರಸ್ಕರಿಸಿದೆ.

‘ದೇವಸ್ಥಾನದ ಪಕ್ಕದಲ್ಲೇ ಜೋಪಡಿ ಪ್ರದೇಶ ನಿರ್ಮಾಣಗೊಂಡರೆ ಭಕ್ತರ ಧಾರ್ಮಿಕ ಭಾವನೆಗಳು, ಪಾವಿತ್ರ್ಯ ಮತ್ತು ಶಾಂತ ವಾತಾವರಣಕ್ಕೆ ಧಕ್ಕೆ ಉಂಟಾಗುತ್ತದೆ. ಇದು ಸಂವಿಧಾನದ 29ನೇ ವಿಧಿಯ ಉಲ್ಲಂಘನೆಯಾಗುತ್ತದೆ’ ಎಂಬ ಅರ್ಜಿದಾರರ ವಾದವನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ನ್ಯಾಯಪೀಠ, ‘ದೇಗುಲ ಸಮಿತಿಯ ಈ ನಿಲುವು ಜಾತಿ, ವರ್ಗ ಅಥವಾ ಧರ್ಮದ ಮೂಲಕ ಸಮಾಜವನ್ನು ವಿಭಜಿಸುವ ಪ್ರಯತ್ನ. ಅರ್ಜಿದಾರರ ಪೂರ್ವಗ್ರಹ ಮತ್ತು ಬಹಿಷ್ಕಾರದ ಮನಃಸ್ಥಿತಿಗೆ ತಾಜಾ ನಿದರ್ಶನ’ ಎಂದು ತೀಕ್ಷ್ಯಪದಗಳಲ್ಲಿ ಖಂಡಿಸಿದೆ.
‘ಈ ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿಲ್ಲ. ಅರ್ಜಿದಾರರು ಧಾರ್ಮಿಕ ಅಲ್ಪಸಂಖ್ಯಾತರೂ ಅಲ್ಲ. ಆದ್ದರಿಂದ, ಸಂವಿಧಾನದ 29ನೇ ವಿಧಿಯ ಅಡಿಯಲ್ಲಿ ಹಕ್ಕು ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಲು ಸಾಧ್ಯವಿಲ್ಲ. ಏಕೆಂದರೆ 29ನೇ ವಿಧಿಯ ಉಲ್ಲಂಘನೆಯು ಘೋಷಿತ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮಾತ್ರವೇ ಅನ್ವಯಿಸುತ್ತದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಭಾರತ ದೇಶವನ್ನು ಉನ್ನತ ದೇಶವನ್ನಾಗಿ ನೋಡಬೇಕೆಂದಿದ್ದರೆ, ಅದು ತನ್ನ ನಾಗರಿಕರನ್ನು ಎರಡನೇ ದರ್ಜೆಗೆ ಇಳಿಸಿ ನೋಡಲು ಸಾಧ್ಯವಿಲ್ಲ. ಜೋಪಡಿ ನಿವಾಸಿಗಳ ಘನತೆ ಯಾವುದೇ ಭಕ್ತರ ಘನತೆಗಿಂತ ಕೀಳಾಗಿಲ್ಲ. ದೇಶದಲ್ಲಿ ಒಬ್ಬರ ಹಕ್ಕನ್ನು ಉಳಿಸಲಿಕ್ಕಾಗಿ ಇನ್ನೊಬ್ಬರ ಹಕ್ಕನ್ನು ಅಡಗಿಸುವ ಅಗತ್ಯವಿಲ್ಲ. ನಮ್ಮ ದೇಶದ ಸಂವಿಧಾನಕ್ಕೆ ಮಾನವನ ಮೌಲ್ಯಾಧಾರಿತ ವರ್ಗ ಶ್ರೇಣಿಯಿಲ್ಲ. ಅದರ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ’ ಎಂದು ಗಟ್ಟಿಯಾದ ಧ್ವನಿಯಲ್ಲಿ ಪ್ರತಿಪಾದಿಸಿದೆ.

ಸುದೀರ್ಘ ವ್ಯಾಜ್ಯದ ನಂತರ ಮಂಡ್ಯದ ಸರ್ವೇ ನಂ 843 ಮತ್ತು 844ರಲ್ಲಿ ಒಟ್ಟು 28½ ಗುಂಟೆ ಭೂಮಿಯನ್ನು ಕಾಯ್ದೆಯ ಕಲಂ 3ರ ಅಡಿಯಲ್ಲಿ ಮರು-ಜೋಪಡಿ ಪ್ರದೇಶವೆಂದು ಘೋಷಿಸಿ, ಆ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿ ಜೋಪಡಿ ವಾಸಿಗಳಿಗೆ ಪುನರ್ವಸತಿ ಕಲ್ಪಿಸುವಂತೆ ಆದೇಶ ಹೊರಡಿಸಲಾಗಿತ್ತು. ಈ ಕುರಿತಂತೆ ಜಿಲ್ಲಾಧಿಕಾರಿ 2018ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದರು. ರಾಜ್ಯ ಸರ್ಕಾರದ ಪರ ರಾಹುಲ್ ಕಾರ್ಯಪ್ಪ ಮತ್ತು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಪರ ಹೈಕೋರ್ಟ್ ವಕೀಲ ಎಂ.ಪಿ.ಶ್ರೀಕಾಂತ್ ವಾದ ಮಂಡಿಸಿದ್ದರು.

ಮೂರು ದಶಕಗಳ ಹೋರಾಟ:ಮಂಡ್ಯ ಕಾಳಮ್ಮ ಗುಡಿ ಹಿಂಭಾಗದ ಕೊಳಗೇರಿ ನಿವಾಸಿಗಳ ಹಕ್ಕುಗಳಿಗಾಗಿ ಕಳೆದ ಮೂರು ದಶಕಗಳಿಂದ ಹೋರಾಟ ಸಾಗಿತ್ತು.೨೦೦೬ ರಲ್ಲಿ ಕೊಳಗೇರಿ ತೆರವುಗೊಳಿಸುವಂತೆ ಕಾಳಿಕಾಂಬ ಸೇವಾ ಸಮಿತಿ ಹೈಕೋರ್ಟ್ ಮೆಟ್ಟಿಲೇರಿತ್ತು.ಆಗ ಮೂಲ ಕೊಳಗೇರಿ ಪ್ರದೇಶವಾಗಿದ್ದ ಈಗಿನ ಕಾಳಿಕಾಂಬ ಕಲ್ಯಾಣಮಂಟಪದ ಸ್ಥಳವನ್ನು ಸ್ಲಂ ನಿವಾಸಿಗಳಿಗೆ ಬಿಟ್ಟು ಕೊಡುವಂತೆ ಸ್ಲಂ ಒಕ್ಕೂಟ ಬಿಗಿ ಪಟ್ಟು ಹಾಕಿತ್ತು.ಕಡೇಗೆ ೨೦೧೩ ರಲ್ಲಿ ಕಾಳಿಕಾಂಬ ಸೇವಾ ಸಮಿತಿ ಮತ್ತು ಸ್ಲಂ ಒಕ್ಕೂಟದ ನಡುವೆ ರಾಜೀ ಸಂಧಾನ ನಡೆದು ಹಾಲೀ ದೇವಾಲಯದ ಹಿಂಭಾಗ ಉಳಿದಿರುವ ೨೮ ಗುಂಟೆ ಭೂಮಿಯ ಪೈಕಿ ಎಂಟು ಗುಂಟೆ ಭೂಮಿ ಸೇವಾ ಸಮಿತಿಗೆ ಇನ್ನುಳಿದ ೨೦ ಗುಂಟೆ ಭೂಮಿಯಲ್ಲಿ ಸ್ಲಂ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಲಿಖಿತವಾಗಿ ಒಪ್ಪಂದಕ್ಕೆ ಬರಲಾಗಿತ್ತು.ಸೇವಾ ಸಮಿತಿ ಅಧ್ಯಕ್ಷ ಮಾಜೀ ನಗರಸಭಾ ಅಧ್ಯಕ್ಷ ಎಂ.ಕೆ.ರಾಮಲಿಂಗೇಗೌಡ ಸ್ಲಂ ಒಕ್ಕೂಟದ ಪರವಾಗಿ ಎಂ.ಬಿ.ನಾಗಣ್ಣಗೌಡ ಕೊಳಗೇರಿ ಮಂಡಳಿ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದರು.

ನಂತರದಲ್ಲಿ ಒಪ್ಪಂದಕ್ಕೆ ತಿರುಗಿ ಬಿದ್ದ ಸೇವಾ ಸಮಿತಿ ಭಕ್ತರ ಹೆಸರಿನಲ್ಲಿ ಸ್ಲಂ ಭೂಮಿ ವಶ ಮಾಡಿಕೊಳ್ಳಲು ಮರಳಿ ನ್ಯಾಯಾಲಯದ ಮೊರೆ ಹೋಗಿತ್ತು.ಸುಧೀರ್ಘ ಏಳು ವರ್ಷಗಳ ನಂತರ ನ್ಯಾಯಲಯ ಅತ್ಯಂತ ತೀಕ್ಷವಾದ ಮಾತುಗಳಲ್ಲಿ ತನ್ನ ಆದೇಶವನ್ನು ನೀಡಿರುವುದು ಸೇವಾ ಸಮಿತಿಗೆ ಎಚ್ಚರವಾಗಲಿದೆಯೆ ಕಾದು ನೋಡಬೇಕಿದೆ.ಕೊಳಗೇರಿ ಅಭಿವೃದ್ಧಿ ಮಂಡಳಿ ಇನ್ನಾದರೂ ಪುನರ್ವಸತಿಗೆ ಅಗತ್ಯ ಕ್ರಮ ವಹಿಸಬೇಕಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!