ಮಂಡ್ಯ: ನಗರದ ನೂರಡಿ ರಸ್ತೆಗೆ ಅಂಬೇಡ್ಕರ್ ನಾಮಫಲಕ ಹಾಕಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ, ಬಿಎಸ್‌ಪಿ, ಅಂಬೇಡ್ಕರ್ ವಾರಿಯರ್ಸ್, ವಿಶ್ವ ದಲಿತ ಮಹಾಸಭಾದ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಬುಧವಾರ ಮನವಿ ನೀಡಿದರು.
ಮೈಸೂರು ವಿಭಾಗಾಧಿಕಾರಿಗಳು ನಗರದ ಯಾವುದಾದರೂ ರಸ್ತೆಗೆ ಬಿ.ಆರ್.ಅಂಬೇಡ್ಕರ್ ಹೆಸರನ್ನಿಡಬೇಕು ಎಂದು 1975 ರಲ್ಲಿ ಬರೆದ ಪತ್ರದಂತೆ, 1976 ಜೂನ್ 15 ರಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನೂರಡಿ ರಸ್ತೆಗೆ ಬಿ.ಆರ್.ಅಂಬೇಡ್ಕರ್ ಜೋಡಿ ರಸ್ತೆ ಎಂದು ಹೆಸರಿಡಲು ನಿರ್ಣಯಿಸಿ ನಾಮಫಲಕ ದಾಖಲಾಗಿತ್ತು, ಇಲ್ಲಿನ ವರ್ತಕರು ಅಂಗಡಿ ನಾಮಫಲಕಗಳಲ್ಲಿ ಹಾಗೂ ಸ್ಥಳೀಯ ನಿವಾಸಿಗಳು ವಿಳಾಸದಲ್ಲಿ ಇದೇ ಹೆಸರನ್ನು ಬಳಸಿದ್ದಾರೆ ಎಂದು ವಿವರಿಸಿದರು.
ನಗರಸಭೆಯ ಎಲ್ಲಾ ದಾಖಲಾತಿಗಳಲ್ಲೂ ಅದೇ ಹೆಸರಿದೆ. ರಸ್ತೆಯು ನೂರು ಅಡಿ ಅಗಲವಿದ್ದಿದ್ದರಿಂದ ಜನತೆ ನೂರಡಿ ರಸ್ತೆ ಎಂದು ಕರೆಯುತ್ತಿದ್ದರು, ಅದನ್ನೇ ತಪ್ಪಾಗಿ ಅರ್ಥೈಸಲಾಗಿದೆ. ನಗರಸಭೆಯ ಅಧಿಕಾರಿಗಳು ಹಾಗೂ ಸದಸ್ಯರು 2022 ಅಕ್ಟೋಬರ್ 28 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಪರ್ಯಾಯ ಹೆಸರಿಡಲು ನಿರ್ಣಯಿಸಿರುವುದು ಸರಿಯಲ್ಲ. ಅದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ವಿವಿಧ ಸಂಘಟನೆಯ ಮುಖಂಡರಾದ ಗುರುಪ್ರಸಾದ್ ಕೆರಗೋಡು, ವೆಂಕಟಗಿರಿಯಯ್ಯ, ಎಂ.ವಿ.ಕೃಷ್ಣ, ವಿಜಯಲಕ್ಷ್ಮಿ ರಘುನಂದನ್, ಸೋಮಶೇಖರ್ ಕೆರಗೋಡು, ಶಿವಶಂಕರ್, ಎಸ್.ಡಿ.ಜಯರಾಮ್, ಎಂ.ಎಲ್.ತುಳಸೀದರ್, ಎಚ್.ಎನ್. ನರಸಿಂಹಮೂರ್ತಿ, ಎಚ್.ಜಿ.ಗಂಗರಾಜು ಭಾಗವಹಿಸಿದ್ದರು