ಪ್ರಚೋದನಾಕಾರಿ ಭಾಷಣ: ಸಿ.ಟಿ.ರವಿ ವಿರುದ್ಧ ಎಫ್‌ಐಆರ್
ಮಂಡ್ಯ: ಸೆ.೧೨.ಮದ್ದೂರು ಪಟ್ಟಣದಲ್ಲಿ ಬುಧವಾರ ನಡೆದ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ. ವಿರುದ್ಧ ಮದ್ದೂರು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಮುಸ್ಲಿಂ ಜನಾಂಗದ ಮೇಲೆ ದ್ವೇಷ ಉಂಟಾಗುವಂತೆ ಮಾತನಾಡಿ, ಶೇ 5ರಷ್ಟು ಇದ್ದಾಗಲೇ ಬಾಲ ಬಿಚ್ಚುತ್ತಿದ್ದಾರೆ, ಇನ್ನು ಶೇ 50ರಷ್ಟು ಆದಲ್ಲಿ ನಮ್ಮ ಮಕ್ಕಳು, ಮೊಮ್ಮಕ್ಕಳು ಬದುಕುವುದಕ್ಕೆ ಆಗುತ್ತಾ? ಕೆಲವು ಕುತಂತ್ರಿಗಳು ಓಟಿನ ಆಸೆಗಾಗಿ ಹಿಂದೂ ಸಮಾಜವನ್ನು ಒಡೆಯುತ್ತಾರೆಂದು ಪ್ರತಿಪಾದಿಸಿದ್ದಾರೆ’ ಎಂದು ಸಬ್ ಇನ್‌ಸ್ಪೆಕ್ಟರ್ ಮಂಜುನಾಥ ಕೆ. ದೂರು ಸಲ್ಲಿಸಿದ್ದಾರೆ.
‘ಮುಸಲ್ಮಾನರು ಪಾಕಿಸ್ತಾನ್ ಜಿಂದಾಬಾದ್ ಅಂದ್ರು, ಬಾಂಬ್ ಹಾಕಿದ್ರು ಎಲ್ಲದಕ್ಕೂ ಎಸ್.ಎಸ್. ಅಂತಾರೆ. ಮುಸಲ್ಮಾನರು ರಾಮಮಂದಿರದಲ್ಲಿ ಪೆಟ್ರೋಲ್ ಬಾಂಬ್ ಹಾಕಿದ್ದಾಗಲೇ ಇವರಿಗೆ ಬುದ್ಧಿ ಕಲಿಸಬೇಕಾಗಿತ್ತು. ಕಲಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ. ನೀವು ಹೊರಗಡೆಯಿಂದ ಬಂದವರು, ನಾವು ಇಲ್ಲೇ ಇರುವವರು. ತೊಡೆ ತಟ್ಟೋ ಕೆಲಸ ಮಾಡಬೇಡಿ. ತೊಡೆ ಮುರಿತೀವಿ. ತಲೆನೂ ತೆಗಿತೀವಿ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ’ ಎಂದು ದೂರಲಾಗಿದೆ.
‘ಕಲ್ಲು ಹೊಡೆದವರನ್ನು, ಕಲ್ಲಿನ ಒಳಗಡೆ ಸಮಾಧಿ ಮಾಡೋ ತಾಕತ್ತು ಹಿಂದೂ ಸಮಾಜಕ್ಕೆ ಇದೆ’ ಎಂದು ಅನ್ಯ ಸಮುದಾಯಗಳ ಮಧ್ಯೆ ದ್ವೇಷ ಉಂಟು ಮಾಡುವ ಮತ್ತು ಸೌಹಾರ್ದ ಭಾವನೆಗಳಿಗೆ ಭಾದಕವಾಗುವಂತೆ ವೈರತ್ವ, ದ್ವೇಷ ಉಂಟಾಗುವಂತೆ ಭಾಷಣ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.