ಮಂಡ್ಯ ಜಿಲ್ಲಾಸ್ಪತ್ರೆಯ ಚಿಕಿತ್ಸಾ ಶುಲ್ಕ ಇಳಿಸುವುದು ಸೇರಿದಂತೆ ವಿವಿಧ ಆಸ್ಪತ್ರೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಕರುನಾಡ ಸೇವಕರು ಸಂಘಟನೆ, ಕೆ.ಆರ್.ಎಸ್ ಪಾರ್ಟಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಯಿತು.
ಮಂಡ್ಯ ಜಿಲ್ಲಾಸ್ಪತ್ರೆಯ ವಿವಿಧ ಚಿಕಿತ್ಸಾ ವಿಭಾಗಗಳಿಗೆ ಭೇಟಿ ನೀಡಿದ ಪ್ರತಿಭಟನಾಕಾರರು ಆಯಾ ವಿಭಾಗದಲ್ಲಿ ವೈದ್ಯರು ಹಾಜರಿದ್ದಾರೆಯೇ ಎಂದು ಪರಿಶೀಲಿಸಿ, ಸಿಬ್ಬಂದಿಯನ್ನು ಪ್ರಶ್ನೆ ಮಾಡಿದರು.
ಪ್ರಸ್ತುತ ಏರಿಸಿರುವ ರೋಗಿಗಳ ತಪಾಸಣೆ ಹಾಗೂ ಚಿಕಿತ್ಸಾ ಶುಲ್ಕವನ್ನು ಇಳಿಸಬೇಕು. ಕರ್ತವ್ಯದ ವೇಳೆಯಲ್ಲಿ ವೈದ್ಯರು ಖಾಸಗಿ ಪ್ರಾಕ್ಟಿಸ್ ನಡೆಸದಂತೆ ನಿಗಾವಹಿಸಬೇಕು. ಸರ್ಕಾರಿ ಆದೇಶದಂತೆ ನಾಲ್ಕು ಬಾರಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಬೇಕು. ಗುಣಮಟ್ಟದ ಚಿಕಿತ್ಸೆಯನ್ನು ಖಾತ್ರಿಗೊಳಿಸಬೇಕು. ಕರ್ತವ್ಯದ ವೇಳೆಯಲ್ಲಿ ಕಡ್ಡಾಯವಾಗಿ ಆಸ್ಪತ್ರೆಯಲ್ಲಿರುವಂತೆ ನಿಗಾ ಇಡಬೇಕು ಎಂದು ಒತ್ತಾಯಿಸಿದರು.
ರೋಗಿಗಳಿಗೆ ಅಗತ್ಯ ಔಷಧೋಪಚಾರ ಆಸ್ಪತ್ರೆಯಲ್ಲಿ ದೊರಕಬೇಕು. ಹೊರಗಡೆ ಯಾವುದೆ ಔಷಧಕ್ಕೆ ಕಳುಹಿಸಬಾರದು. ಆಸ್ಪತ್ರೆ ಆವರಣದ ಮದ್ದಿನ ಅಂಗಡಿ (ಮೆಡಿಕಲ್) 24 ಗಂಟೆ ತೆರದಿರಬೇಕು. ಅಗತ್ಯ ಎಲ್ಲ ಔಷಧಗಳು ಲಭ್ಯವಿರಬೇಕು ಎಂದು ಒತ್ತಾಯಿಸಿದರು.
ಆಸ್ಪತ್ರೆಗೆ ಹೊರೆಯಾಗಿರುವ ರೋಗ ಪರೀಕ್ಷೆ ರಾಸಾಯನಿಕ ಸರಬರಾಜುಗಳ ಖಾಸಗಿ ನಿರ್ವಹಣೆಯ ಒಪ್ಪಂದ ಹಿಂಪಡೆಯಬೇಕು. ಹಳೆಯ ಪದ್ಧತಿಗೆ ಮರಳಬೇಕು. ಮೆಡಿಕಲ್ ವ್ಯಾಪ್ತಿಯ ತುಂಡು ಕಾಮಗಾರಿಗಳಿಗೆ ತಡೆಯೊಡ್ಡಬೇಕು ಮತ್ತು ಅವುಗಳ ಗುಣಮಟ್ಟ ಪರೀಶೀಲನೆ ಆಗುವರೆಗೆ ಯಾವುದೇ ಬಿಲ್ ನೀಡಬಾರದು. ರಾಜಕಾರಿಣಿಗಳು ಮತ್ತವರ ಹಿಂಬಾಲಕರು ಬೇನಾಮಿಯಾಗಿ ನಿರ್ಮಿತಿ ಕೇಂದ್ರ, ಲ್ಯಾಂಡ್ ಆರ್ಮಿ ಹೆಸರಿನಲ್ಲಿ ನಡೆಸುತ್ತಿರುವ ಕಾಮಗಾರಿಗಳು ನಿಲ್ಲಬೇಕು ಎಂದು ಆಗ್ರಹಿಸಿದರು.
ನಕಲಿ ದಾಖಲೆ ಮೂಲಕ ಟೆಂಡರ್ ಗಿಟ್ಟಿಸಿದ ಹಾಗೂ ಹಣ ಲಪಟಾಯಿಸಿದ ವಿಜೆನ್ಸಿಗಳು ಹಾಗೂ ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ತನಿಖೆ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ನಗದು ವಿಭಾಗದಲ್ಲಿ ಆಗಿರುವ ಹಣಕಾಸು ಹಗರಣದ ಕುರಿತು ತಕ್ಷಣ ತನಿಖೆಗೆ ಮುಂದಾಗಬೇಕು. ಕರ್ತವ್ಯ ನಿರ್ಲಕ್ಷ ತೋರಿದ ಅಧಿಕಾರಿ ವಿರುದ್ಧ ಕ್ರಮ ಜರುಗಬೇಕು. ಮೆಡಿಕಲ್ ಕಾಲೇಜುಗಳ ವೈದ್ಯರುಗಳ ವರ್ಗಾವಣೆ ಸಾಧ್ಯವಾಗುವಂತೆ ಬೈಲಾ ತಿದ್ದುಪಡಿಯಾಗಬೇಕು. ವೈದ್ಯರುಗಳ ಸಲಹಾ ಚೀಟಿಯಲ್ಲಿ ಖಾಯಿಲೆಯ ಸ್ವರೂಪ. ಚಿಕಿತ್ಸೆಯ ವಿವರಗಳನ್ನು ಕನ್ನಡದಲ್ಲೆ ಬರೆಯಬೇಕು. ಮೆಡಿಕಲ್ ಕಾಲೇಜಿನ ಯಾವುದೆ ಪತ್ರ ಸೇರಿದಂತೆ ಪ್ರತಿಯೊಂದು ಕನ್ನಡದಲ್ಲಿ ಪ್ರಕಟವಾಗಬೇಕೆಂದು ಆಗ್ರಹಿಸಿದರು.
ತಮಿಳು ಕಾಲೋನಿ ಸೇರಿದಂತೆ ಖಾಸಗಿಯವರ ವಶವಾಗಿರುವ ಮೆಡಿಕಲ್ ಕಾಲೇಜು ಜಾಗವನು, ಮಿಮ್ಸ್ ಗೆ ಮರಳಿ ಪಡೆಯಲು ನ್ಯಾಯಾಲಯದಲ್ಲಿ ಮಿಮ್ಸ್ ವತಿಯಿಂದ ವಕೀಲರ ನಿಯೋಜನೆ ಮಾಡಬೇಕು. ಪ್ರತಿ ವಾರ್ಡ್ ಗಳಲ್ಲಿ ಸಲಹೆ ಹಾಗೂ ದೂರು ಪೆಟ್ಟಿಗೆ ಗಳನ್ನು ಅಳವಡಿಸುವುದು.ಸ್ವೀಕೃತವಾದ ಮನವಿ/ದೂರುಗಳನ್ನು ಆದ್ಯತೆಯ ಮೇಲೆ ಪರಿಹರಿಸುವುದು. ಹಾಗೂ ಸಹಾಯವಾಣಿ ಆರಂಭಿಸುವುದು. ಕೀಲು ಮತ್ತು ಮೂಳೆ ವಿಭಾಗದ ವಾರ್ಡ್‌ಗಳಲ್ಲಿ ಪಾಶ್ಚಾತ್ಯ ಕಮೋಡ್ ಅಳವಡಿಸುವುದು. ಹೆರಿಗೆ ವಿಭಾಗದಲ್ಲಿ ರೋಗಿಗಳ ಸಂಖ್ಯೆಗನುಗುಣವಾಗಿ ಬೆಡ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಕೆ.ಆರ್.ಎಸ್ ಪಾರ್ಟಿಯ ರಮೇಶ್ ಗೌಡ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಎಚ್.ಡಿ. ಜಯರಾಂ .ಸ್ವಂತಮನೆ ನಮ್ಮ ಹಕ್ಕು ಸಂಘಟನೆಯ ಬಿಕೆ ಸತೀಶ್.ಎಸ್ ಕೆ ರಾಜೂಗೌಡ ಮತ್ತಿತರರು ಭಾಗವಹಿಸಿದ್ದರು.