ನಗರ-ಗ್ರಾಮಾಂತರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ಸೆರೆ | ಅನ್ಯಕ್ರಾಂತ ಭೂಮಿಯ ವಿನ್ಯಾಸನಕ್ಷೆ ಅನುಮೋದನೆಗೆ 50 ಸಾವಿರ ರು.ಗೆ ಬೇಡಿಕೆ
ಮಂಡ್ಯ:ಜು.೨೩.
ಅನ್ಯಕ್ರಾಂತವಾದ ಭೂಮಿಯ ವಿನ್ಯಾಸ ನಕ್ಷೆ ಅನುಮೋದನೆಗೆ ಲಂಚಕ್ಕೆ ಬೇಡಿಕೆ ಇಟ್ಟು ಅದನ್ನು ಸ್ವೀಕರಿಸುವಾಗ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ನಗರದಲ್ಲಿ ಮಂಗಳವಾರ ಜರುಗಿದೆ.
ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುವ ವೇಳೆ ಸಹಾಯಕ ನಿರ್ದೇಶಕಿ ಅನನ್ಯ ಮನೋಹರ್, ಕೇಸ್ ವರ್ಕರ್ ಸೌಮ್ಯ ಹಾಗೂ ಹೊರಗುತ್ತಿಗೆ ನೌಕರ ಹರೀಶ್ ಲೋಕಾಯುಕ್ತರಿಗೆ ಸಿಕ್ಕಿಬಿದ್ದವರಾಗಿದ್ದಾರೆ. ಏನಾಯ್ತು ?: ಮದ್ದೂರು ತಾಲೂಕು ಚಂದೂಪುರ ಗ್ರಾಮದ ಪುನೀತ್ ಅವರು ತಮ್ಮ ತಾಯಿ ಲಕ್ಷ್ಮೀ ಅವರಹೆಸರಿನಲ್ಲಿದ್ದಭೂಮಿ ಅನ್ಯಕ್ರಾಂತವಾಗಿದ್ದು, ಅದರ ವಿನ್ಯಾಸ ನಕ್ಷೆ ಅನುಮೋದನೆಗೆ ಎಂಟು ತಿಂಗಳ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಸಮಯದಿಂದ
ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರೂ ಅನುಮೋದನೆ
ನೀಡದೆ ಸತಾಯಿಸುತ್ತಿದ್ದರು ಎನ್ನಲಾಗಿದೆ. ಕೊನೆಗೆ ವಿನ್ಯಾಸ ನಕ್ಷೆ ಅನುಮೋದನೆ ನೀಡಲು ಪುನೀತ್ ಬಳಿ 50 ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚದ ಹಣ ದುಬಾರಿ ಆಯಿತು
ಎಂದೇಳಿ 30 ಸಾವಿರ ರು.ಗೆ ಪುನೀತ್ ಎಲ್ಲರನ್ನೂ ಒಪ್ಪಿಸಿದ್ದರು. ಆ ನಂತರದಲ್ಲಿ ಸಹಾಯಕ ನಿರ್ದೇ ಶಕರೂ ಸೇರಿದಂತೆ ಸಿಬ್ಬಂದಿ ವಿರುದ್ಧ ಲೋಕಾಯು ಕ್ತ ಪೊಲೀಸರಿಗೆ ಪುನೀತ್ ದೂರು ನೀಡಿದ್ದರು.
ಮಂಗಳವಾರ ಪುನೀತ್ ಅವರು ಲಂಚದ
ಹಣದಲ್ಲಿ 15 ಸಾವಿರ ರು.ಗಳನ್ನು ಮುಂಗಡವಾಗಿ ಕೊಡುವುದಕ್ಕೆ ಚಾಮುಂಡೇಶ್ವರಿ ನಗರದಲ್ಲಿರುವ ಕಚೇರಿಗೆ ತೆರಳಿದ್ದರು. ಆ ಸಮಯದಲ್ಲಿ ಸಹಾಯಕ ನಿರ್ದೇಶಕಿ ಅನನ್ಯ ಮನೋಹರ್, ಕೇಸ್ ವರ್ಕರ್ ಸೌಮ್ಯ ಹಾಗೂ ಹೊರಗುತ್ತಿಗೆ ನೌಕರ ಹರೀಶ್ ಹಣವನ್ನು ಸ್ವೀಕರಿಸುವುದಕ್ಕೆ ಹಿಂದು-ಮುಂದು ನೋಡಿದರು. ನಂತರ 15 ಸಾವಿರ ರು.ಗಳನ್ನು ಕಚೇರಿಯಲ್ಲಿದ್ದ ದೇವರ ಮುಂದಿಟ್ಟು ಹೋಗುವಂತೆ ಪುನೀತ್‌ಗೆ ಸೂಚಿಸಿದರು.
ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮೂವರನ್ನೂ ತಮ್ಮ ವಶಕ್ಕೆ ಪಡೆದು ಕೊಂಡರು. ದಿಢೀರ್ ದಾಳಿಯಿಂದ ಸಹಾಯಕ ನಿರ್ದೇಶಕಿ ಅನನ್ಯ ಮನೋಹರ್ ಸೇರಿದಂತೆ ಕಚೇರಿ ನೌಕರರು, ಸಿಬ್ಬಂದಿ ದಂಗಾದರು. ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮುಂದು ವರೆಸಿದರು. ದಾಳಿಯಿಂದ ಕಂಗೆಟ್ಟ ಆನನ್ಯ ಮನೋಹರ್ ಹಾಗೂ ಸೌಮ್ಯ ಕಣ್ಣೀರಿಟ್ಟರು.
ಮಂಡ್ಯ ಲೋಕಾಯುಕ್ತ ಆರಕ್ಷಕ ಅಧೀಕ್ಷಕ ಸುರೇಶ್ ಇನ್ಸ್‌ಪೆಕ್ಟರ್ ಬ್ಯಾಟರಾಯನಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ಅಕ್ರಮ ಬಡಾವಣೆಗಳ ರೂವಾರಿ:ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿರುವ ಅನನ್ಯ ಮನೋಹರ್ ಮಂಡ್ಯ ನಗರದಾದ್ಯಂತ ಅಕ್ರಮ ಬಡಾವಣೆಗಳು ತಲೆ ಎತ್ತಲು ಪ್ರಮುಖ ಕಾರಣ ಎನ್ನಲಾಗಿದೆ.ಈಗಾಗಲೇ ಸರ್ಕಾರಿ ಹಳ್ಳ ಮುಚ್ಚಿ ನಿರ್ಮಾಣಗೊಂಡಿರುವ ಮಂಡ್ಯ ಗ್ರಾಮಾಂತರದ ಗೋಪಾಲಪುರ ಗ್ರಾಮದ ಬಳಿಯ ಅಕ್ರಮ ಬಡಾವಣೆ ಸೇರಿದಂತೆ ರೆವಿನ್ಯೂ ಸ್ಥಳಗಳಲ್ಲಿ ಅಕ್ರಮ ಬಡಾವಣೆಗಳು ತಲೆ ಎತ್ತಲು ಸದರಿ ಅಧಿಕಾರಿಯ ಲಂಚಬಾಕತನವೆ ಕಾರಣ ಎನ್ನಲಾಗಿದೆ.ಲೋಕಾಯುಕ್ತ ಪೋಲಿಸರು ಸ್ಟಿಂಗ್ ಕಾರ್ಯಾಚರಣೆಗೆ ತೋರಿದ ಉತ್ಸಾಹವನ್ನು ಆರೋಪಿಗಳಿಗೂ ಶಿಕ್ಷೆಯಾಗುವಂತೆ ನೋಡಿಕೊಂಡರೆ ಮಾತ್ರ ದೂರುದಾರರ ಶ್ರಮ ಸಾರ್ಥಕವಾಗಲಿದೆ.ವಿಚಾರಣೆ ಹಂತದಲ್ಲಿ ಆರೋಪಿಗಳೊಂದಿಗೆ ಲೋಕಾಯುಕ್ತ ಪೋಲಿಸರು ಶಾಮೀಲಾಗುತ್ತಾರೆಂಬ ಊಹಪೋಹಗಳಿಗೆ ಈ ಪ್ರಕರಣದ ತಾರ್ಕಿಕ ಅಂತ್ಯದ ಮೂಲಕ ತೆರೆ ಎಳೆಯುವ ಜವಾಬ್ದಾರಿ ಲೋಕಾಯುಕ್ತ ಮೇಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.