ವಾಲಿಬಾಲ್ ಮೈದಾನದಲ್ಲಿ ಕನ್ನಡ ಭವನ ನಿರ್ಮಿಸಬೇಡಿ’
12/09/2025
ಮಂಡ್ಯ: ವಾಲಿಬಾಲ್ ಕ್ರೀಡಾಂಗಣದಲ್ಲಿ ಕನ್ನಡ ಭವನ ನಿರ್ಮಿಸುವ ನಿರ್ಧಾರದಿಂದ ಜಿಲ್ಲಾಡಳಿತ ಹಿಂದೆ ಸರಿಯಬೇಕು ಎಂದು ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಶಿವಲಿಂಗಯ್ಯ ಒತ್ತಾಯಿಸಿದರು.
ನಗರದ ಒಳಾಂಗಣ ಸಂಕೀರ್ಣದ ಬಳಿಯ ವಾಲಿಬಾಲ್ ಕ್ರೀಡಾಂಗಣ ಸ್ಥಳದಲ್ಲಿ ಭವನ ನಿರ್ಮಿಸುವುದು ಬೇಡ. ಈ ಬಗ್ಗೆ ಸಾಧಕ– ಬಾಧಕಗಳ ಬಗ್ಗೆ ಚರ್ಚೆಯೇ ನಡೆಸದೇ ತೀರ್ಮಾನ ಮಾಡುವುದು ಏಕೆ, ವಾಲಿಬಾಲ್ ಆಟಕ್ಕೆ ಸೂಕ್ತವಾದ ಸ್ಥಳ ಇದಾಗಿದೆ. ಈ ಸ್ಥಳ ಬಿಟ್ಟು ನಗರದ ಉಳಿಕೆ ಸರ್ಕಾರಿ ಸ್ಥಳಗಳಲ್ಲಿ ಭವನ ಮಾಡಿಕೊಳ್ಳಿ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಆಗ್ರಹಿಸಿದರು.
ವಾಲಿಬಾಲ್ ಕ್ರೀಡೆಗೆ ಸಂಬಂಧಿಸಿದಂತೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗೆ 2023ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಭೂಮಿಪೂಜೆ ನಡೆದಿತ್ತು. ಜಿಲ್ಲಾಧಿಕಾರಿಯವರು ವಾಲಿಬಾಲ್ ಕ್ರೀಡೆ ಹಾಗೂ ಕನ್ನಡ ಭವನ ನಿರ್ಮಿಸಲು ಅನುಕೂಲವಾಗುವಂತೆ ಕ್ರಿಯಾಯೋಜನೆ ರೂಪಿಸಿದ್ದು, ಇರುವ 36 ಗುಂಟೆಯ ಪೈಕಿ 17 ಗುಂಟೆ ಭವನಕ್ಕೆ ಎಂದರೆ ಏನು ಮಾಡುವುದು, ಎರಡು ಕಟ್ಟಡಗಳ ನಡುವೆ ಇಕ್ಕಟ್ಟಿನಲ್ಲಿ ಕ್ರೀಡಾ ಅಭ್ಯಾಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ನಗರದ ಮುಡಾ ಕಚೇರಿ ಬಳಿ ಸಾಕಷ್ಟು ಸ್ಥಳವಿದೆ. ಜೊತೆಗೆ ನಿರ್ಮಿತಿ ಕೇಂದ್ರದ ಬಳಿಯೂ ಸ್ಥಳವಿದೆ ಅಥವಾ ನಗರ ವ್ಯಾಪ್ತಿಯಲ್ಲಿ ಖಾಲಿ ಇರುವ ಸರ್ಕಾರಿ ಸ್ಥಳದಲ್ಲಿ ಕನ್ನಡ ಭವನ ಕಟ್ಟಡ ನಿರ್ಮಿಸಿ, ವಾಲಿಬಾಲ್ ಕ್ರೀಡೆಗೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಸಂಸ್ಥೆಯ ಕಾರ್ಯದರ್ಶಿ ಸೋಮಶೇಖರ್, ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಕಾರ್ಯದರ್ಶಿ ಸತ್ಯ, ಜೂಡೋ ಸಂಸ್ಥೆಯ ಕಾರ್ಯದರ್ಶಿ ಜಿ.ಕುಬೇರ ನಾರಾಯಣ, ಮುಖಂಡ ಕೆ.ಬೋರಯ್ಯ ಇದ್ದರು.