ಹಳೇ ಮೈಸೂರು, ನ.24: ಮಂಡ್ಯ ನಗರದ ಕಾಳಿಕಾಂಭ ಶ್ರಮಿಕ ನಗರದಲ್ಲಿ ಮನೆಗಳನ್ನು ಕಟ್ಟದೇ ವಿಳಂಬ ಧೋರಣೆ ತೋರುತ್ತಿರುವ ಸ್ಲಂ ಬೋರ್ಡ್, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ನಡೆ ಖಂಡಿಸಿ ಸೋಮವಾರದಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಕಾಳಿಕಾಂಭ ಶ್ರಮಿಕ ನಿವಾಸಿಗಳು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಕಾಳಿಕಾಂಭ ಶ್ರಮಿಕನಗರದಲ್ಲಿ ಸರ್ಕಾರದ ವತಿಯಿಂದ ಮನೆ ನಿರ್ಮಿಸಿಕೊಡುವಂತೆ ನ್ಯಾಯಾಲಯದಿಂದ ಎರಡು ಬಾರಿ ಆದೇಶ ನೀಡಿದರೂ, ಅದನ್ನು ಪಾಲಿಸದೇ ಅಕ್ರಮ ಭೂ ಕಬಳಿಕೆದಾರರೊಂದಿಗೆ ಅಧಿಕಾರದಲ್ಲಿರುವ ನಾಯಕರು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ ಭೂಮಿ ಮತ್ತು ವಸತಿ ಹಕ್ಕುಗಳ ಹೋರಾಟ ಸಮಿತಿಯ ಕಾರ್ಯಕಾರಿ ಸದಸ್ಯ ಎಂ.ಸಿದ್ದರಾಜು ದೂರಿದ್ದಾರೆ.
ಕಾಳಿಕಾಂಭ ಶ್ರಮಿಕ ನಗರದಲ್ಲಿ ಮೈಷುಗರ್, ಕಾಳಿಕಾಂಭ ದೇವಾಲಯ ಹಾಗೂ ಶ್ರಮಿಕರ ವಾಸಸ್ಥಳಗಳಿಗೆ ಸಂಬಂಧಿಸಿದಂತೆ ಜಾಗವಿದ್ದು, ಭೂಗಳ್ಳರು ಅಲ್ಲಿನ ಭೂಮಿ ಕಬಳಿಸಿ ವಾಣಿಜ್ಯ ಚಟುವಟಿಕೆ ನಡೆಸಲು ಮುಂದಾಗಿದ್ದಾರೆ, ಇದು ಶ್ರಮಿಕ ನಿವಾಸಿಗಳಿಗೆ ಮಾಡುವ ಅನ್ಯಾಯವಾಗಿದೆ. ಚುನಾವಣೆಯಗಳು ಬಂದಾಗ ಮಾತ್ರ ರಾಜಕಾರಣಿಗಳಿಗೆ ಮತಗಳಂತೆ ಕಾಣುತ್ತೇವೆ. 20 ವರ್ಷಗಳಿಂದ ಶ್ರಮಿಕ ನಿವಾಸಿಗಳ ಕಷ್ಟ ರಾಜಕಾರಣಿಗಳಿಗೆ ಕಾಣುತ್ತಿಲ್ಲವೇಕೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
26ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ?
ಮಂಡ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಈ ವಿಚಾರದಲ್ಲಿ ಕ್ರಮ ಕೈಗೊಳ್ಳದೇ ಹೋದಲ್ಲಿ ನ.26ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿ ಜಿಲ್ಲಾಧ್ಯಕ್ಷ ಕೃಷ್ಣಪ್ರಕಾಶ್, ಜಾಗೃತ ಕರ್ನಾಟಕದ ಸಂಚಾಲಕ ಸಂತೋಷ್ ಜಿ, ಮಹಿಳಾ ಮುನ್ನಡೆ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಶಿಲ್ಪ, ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಶಿವಲಿಂಗಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು


