Tuesday, July 1, 2025
spot_img

ಮಂಡ್ಯ :ಸತ್ತೇಗಾಲದಿಂದ ರಾಮನಗರ ಜಿಲ್ಲೆಗೆ ಕಾವೇರಿ ನೀರು ಕಾಮಗಾರಿ ವೀಕ್ಷಿಸಿದ ಡಿಕೆ ಶಿವಕುಮಾರ್

*ಡಿಸೆಂಬರ್ ವೇಳೆಗೆ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕಾವೇರಿ ಶಾಶ್ವತ ಕುಡಿಯುವ ನೀರಿನ ಯೋಜನೆ: ಡಿಸಿಎಂ ಡಿ.ಕೆ.ಶಿವಕುಮಾರ್*

*ರೂ.540 ಕೋಟಿ ವೆಚ್ಚದ ಯೋಜನೆ,‌ ಜಿಲ್ಲೆಯ 10.82 ಲಕ್ಷ ಜನರು ಹಾಗೂ 9.03 ಲಕ್ಷ ಜಾನುವಾರುಗಳಿಗೆ ಉಪಯೋಗ*

*ಮಂಡ್ಯ: ಮೇ.5:*

“ಈ ವರ್ಷದ ಡಿಸೆಂಬರ್ ವೇಳೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ,‌ ಕನಕಪುರ, ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕುಗಳಿಗೆ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಪೂರ್ಣಗೊಳಿಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಮಳವಳ್ಳಿ ತಾಲ್ಲೂಕಿನ ಬೆಳಕವಾಡಿಯ ಹಿರೇನಾಗರದಮ್ಮ ದೇವಾಲಯದ ಆವರಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದರು.

ತಮ್ಮ ಜಿಲ್ಲೆಯ ಜನರ ಬಾಯಾರಿಕೆ ನೀಗಿಸಲು ಪಣ ತೊಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇದರ ಭಾಗವಾಗಿ ಸೋಮವಾರ ಬೆಳಿಗ್ಗೆ ಸತ್ತೇಗಾಲ ಅಣೆಕಟ್ಟಿನ ಬಳಿ ಯೋಜನೆಯ ಆರಂಭಿಕ ಘಟ್ಟದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಸ್ಥಳ ಪರಿಶೀಲನೆ ಮಾಡಿದರು.

“ರೂ.540 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಗೆ ಕುಡಿಯುವ ನೀರು ಒದಗಿಸುತ್ತೇವೆ ಎಂದು ಚನ್ನಪಟ್ಟಣ ಉಪಚುನಾವಣೆ ವೇಳೆ ಮಾತುಕೊಟ್ಟಿದ್ದೆವು. ಈ ಮಾತಿಗೆ ನಾವು ಬದ್ಧರಾಗಿದ್ದೇವೆ. ಈ ಹಿಂದೆ ನಾನು ನೀರಾವರಿ ಸಚಿವನಾಗಿದ್ದಾಗ ಈ ಯೋಜನೆಗೆ ಚಾಲನೆ ನೀಡಲಾಯಿತು. ಆದರೂ ಏಕೆ ವಿಳಂಬವಾಗುತ್ತಿದೆ ಎಂದು ಪರಿಶೀಲನೆ ನಡೆಸಲು ಬಂದಿದ್ದೇನೆ. ಅತ್ಯಂತ ಕಡಿಮೆ ಮೊತ್ತದಲ್ಲಿ 3.30 ಟಿಎಂಸಿ ನೀರನ್ನು ಹರಿಸಲಾಗುತ್ತಿದೆ” ಎಂದರು.

‘ಏಕೆ ಕೆಲಸ ವಿಳಂಬವಾಗುತ್ತಿದೆ, ಏನಾದರೂ ಅಡೆತಡೆಗಳಿವೆಯೇ’ ಎಂದು ಅಧಿಕಾರಿಗಳು, ಯೋಜನೆಯ ಕಾಮಗಾರಿ ನಡೆಸುತ್ತಿರುವ ಹೈದರಾಬಾದಿನ ಮೆಘಾ ಇಂಜಿನಿಯರಿಂಗ್ ಸಂಸ್ಥೆಯ ಎಂಜಿನಿಯರ್ ಗಳ ಬಳಿ ಮಾಹಿತಿ ತಿಳಿದುಕೊಂಡರು. ಯೋಜನೆಯ ಪ್ರಗತಿ ಕುರಿತು ಸಮಗ್ರವಾದ ವಿವರಗಳನ್ನು ಪಡೆದರು.

ಇದಾದ ನಂತರ ಇಗ್ಗಲೂರು ಬ್ಯಾರೇಜ್ ವರೆಗೆ ನೀರು ಹರಿಸಲು ಕೊರೆಯುತ್ತಿರುವ ಸುರಂಗ ಹಾಗೂ ಅದರ ಲೈನಿಂಗ್ ಕಾಮಗಾರಿಯ ಗುಣಮಟ್ಟವನ್ನು ನಿಕಟಪೂರ್ವ ಸಂಸದರಾದ ಡಿ.ಕೆ.ಸುರೇಶ್, ಶಾಸಕರಾದ ಸಿ.ಪಿ.ಯೋಗೆಶ್ವರ್, ಕದಲೂರು ಉದಯ್, ವಿಧಾನಪರಿಷತ್ ಸದಸ್ಯರಾದ ಎಸ್.ರವಿ, ಸುಧಾಮ್‌ ದಾಸ್ ಜೊತೆ ವೀಕ್ಷಣೆ ಮಾಡಿದರು.

ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುವುದೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ, “ಅಗತ್ಯಕ್ಕೆ ತಕ್ಕಂತೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಯೋಜನೆಗೆ ಭೂಮಿ ನೀಡಿ ಸಹಕಾರ ನೀಡಿದ ರೈತರಿಗೆ ಉತ್ತಮ ಪರಿಹಾರ ನೀಡಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಯೋಜನೆಯಿಂದ ಅಂತರ್ಜಲ ಹೆಚ್ಚಳ ಸೇರಿದಂತೆ ಜಿಲ್ಲೆಯ ಜನರ ಕುಡಿಯುವ ನೀರಿನ ಬವಣೆ ತಪ್ಪಲಿದೆ” ಎಂದು ಹೇಳಿದರು.

*ಯೋಜನೆಯ ವಿವರ*

ಮಳೆಯ ಅಭಾವದ ಕಾರಣಕ್ಕೆ ಹಲವಾರು ವರ್ಷಗಳಿಂದ ತತ್ತರಿಸಿ ಹೋಗಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಸುಮಾರು 10.82 ಲಕ್ಷ ಜನರಿಗೆ ಹಾಗೂ 9.03 ಲಕ್ಷ ಜಾನುವಾರುಗಳಿಗೆ ಈ ಕುಡಿಯುವ ನೀರಿನ ಯೋಜನೆಯಿಂದ ಲಾಭವಾಗಲಿದೆ.

“ರೂ.540 ಕೋಟಿ ವೆಚ್ಚದಲ್ಲಿ ಈ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ‌. ಮಳವಳ್ಳಿಯ ಬೆಳಕವಾಡಿ ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಸತ್ತೇಗಾಲ ಅಣೆಕಟ್ಟಿನಿಂದ 220 ಕ್ಯೂಸೆಕ್ಸ್ ನೀರನ್ನು 180 ದಿನಗಳ ಕಾಲ ಇಗ್ಗಲೂರು ಬ್ಯಾರೇಜಿಗೆ ಹರಿಸಲಾಗುತ್ತದೆ.

ಸತ್ತೇಗಾಲ ಅಣೆಕಟ್ಟಿನಿಂದ ಇಗ್ಗಲೂರು ಬ್ಯಾರೇಜ್ ತನಕ ಸುಮಾರು ಸುಮಾರು 25.40 ಕಿ.ಮೀ ಉದ್ದ ಗುರುತ್ವಾಕರ್ಷಣೆಯ ಮೂಲಕ ನೀರನ್ನು ಹರಿಸುತ್ತಿರುವುದು ಈ ಯೋಜನೆಯ ವಿಶೇಷ. 12.5 ಕಿ.ಮೀ ಉದ್ದದ ವರೆಗೆ ಸುರಂಗ ಮಾರ್ಗ ನಂತರ 13.35 ಕಿ.ಮೀ ಉದ್ದ ಪೈಪ್ ಲೈನ್ ಇರಲಿದೆ. ಈ ಸುರಂಗ ಮಾರ್ಗವು 4 ಮೀ ಸುತ್ತಳತೆ ಹೊಂದಿದ್ದು ‘ಡಿ’ ಆಕಾರದಲ್ಲಿ ಇರಲಿದೆ.

ನಂತರ ಏತ ನೀರಾವರಿ ಮೂಲಕ ಇಗ್ಗಲೂರು ಬ್ಯಾರೇಜ್ ನಿಂದ ಮೊಗೇನಹಳ್ಳಿ ಕೆರೆಗೆ, ಈ ಕೆರೆಯಿಂದ ಕಣ್ವ ಜಲಾಶಯ‌, ನಂತರ ಮಂಚನಬೆಲೆ ಹಾಗೂ ವೈ.ಜಿ.ಗುಡ್ಡ ಜಲಾಶಯಕ್ಕೆ ನೀರು ತುಂಬಿಸಲಾಗುವುದು. ಪ್ರಸ್ತುತ ಸುಮಾರು 11.33 ಕಿ.ಮೀ ವರೆಗೆ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಂಡಿದ್ದು ಪ್ರಸ್ತುತ ಲೈನಿಂಗ್ ಕಾಮಗಾರಿ ನಡೆಯುತ್ತಿದೆ. 670 ಮೀ ನಷ್ಟು ಸುರಂಗ ಕೊರೆಯುವ ಕಾಮಗಾರಿ ಬಾಕಿಯಿದೆ. ಸುರಂಗ ಮಾರ್ಗದ 4.15 ಮೀ ನಷ್ಟು ಸಿ.ಸಿ ಲೈನಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಯೋಜನೆಯಲ್ಲಿ 13.35 ಕಿ.ಮೀ ಉದ್ದದ ಪೈಪ್ ಲೈನ್ ಇದ್ದು. ಇದರಲ್ಲಿ 5.5 ಕಿ.ಮೀ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!