ಅಂತೂ ಇಂತೂ ಕೆಆರ್ ಎಸ್ ಅಣೆಕಟ್ಟೆಯಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಬಿಡುಗಡೆ
ಪಾಂಡವಪುರ, ಜುಲೈ ೧೦: ಅಂತೂ ಇಂತೂ ವಿಶ್ವವಿಖ್ಯಾತ
ಕೆಆರ್ ಎಸ್ ಅಣೆಕಟ್ಟೆಗೆ ವಿಶ್ವೇಶ್ವರಯ್ಯ ನಾಲೆಗೆ ನೀರು ಬಿಡುಗಡೆ ಮಾಡಲಾಯಿತು.
ಕಳೆದ ವಾರವಷ್ಟೆ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜುಲೈ 8ರ ಸೋಮವಾರ ಸಂಜೆಯಿಂದಲೇ ಕೆಆರ್ ಎಸ್ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಬಿಡುಗಡೆ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ನಾಲಾ ಆಧುನೀಕರಣ ಬಾಕಿ ಉಳಿದಿದ್ದರಿಂದ ಬುಧವಾರ ಮಧ್ಯಾಹ್ನದಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ರೈತರಲ್ಲಿ ಸಂತಸ ಮನೆ ಮಾಡಿದಂತಾಗಿದೆ.
ಕಳೆದ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಬಾರದೆ ಕೈಕೊಟ್ಟಿತ್ತು. ಇದರಿಂದಾಗಿ ಕಳೆದ ವರ್ಷ ಜಿಲ್ಲೆಯಾದ್ಯಂತ ಬರಗಾಲ ಘೋಷಣೆ ಮಾಡಲಾಗಿತ್ತು. ಹೀಗಾಗಿ ರೈತರು ಬೆಳೆದಿದ್ದ ಅಲ್ಪ ಸ್ವಲ್ಪ ಕಬ್ಬು, ತೆಂಗು, ಅಡಕೆ ಬೆಳೆಗಳು ಕೈಗೆ ಬಾರದೆ
ನಾಶವಾಗಿದ್ದವು. ಇದರಿಂದ ಜಿಲ್ಲೆಯ ರೈತರು ಕಂಗಲಾಗಿದ್ದರು.
ಆದರೆ ಈ ಬಾರಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳದಿದ್ದರೂ ಜನ ಜಾನುವಾರು ಕುಡಿಯುವ ನೀರು ಮೇವಿಗೆ ಕೊರತೆಯಾಗಿಲ್ಲ. ಮುಂಗಾರು ರೈತರಲ್ಲಿ ಮಂದಹಾಸ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ 78ಅಡಿ ನೀರಿನ ಸಂಗ್ರಹವಿದ್ದ ಕೆಆರ್ ಎಸ್ ಜಲಾಶಯದಲ್ಲೀಗ 100ಅಡಿ ನೀರು ದಾಟಿ 104ಅಡಿಗೆ ತಲುಪಿದೆ. ಹೀಗಾಗಿ ಬುಧವಾರದಿಂದಲೇ ವಿಶ್ವೇಶ್ವರಯ್ಯ ನಾಲೆಗೆ ಕೆಆರ್ ಎಸ್ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಆದರೆ ಈ ನೀರು 10ರಿಂದ 15ದಿನಗಳವರೆಗೆ ಮಾತ್ರವೇ ಹರಿಸಲಿದ್ದು, ಕೃಷಿ ಚಟುವಟಿಕೆಗೆ ಬಳಕೆ ಮಾಡದೆ ಕೇವಲ ಕೆರೆ, ಕಟ್ಟೆ ತುಂಬಿಸಲು ಹಾಗೂ ಜಾನುವಾರುಗಳ ಕುಡಿಯುವ ನೀರಿಗಾಗಿ ಬಳಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣವನ್ನು ಆಧರಿಸಿ ಕೃಷಿ ಚಟುವಟಿಕೆಗಳಿಗೆ ನೀರು ಹರಿಸುವುದಾಗಿ ಸಚಿವರು ತಿಳಿಸಿದ್ದಾರೆ. ಜತೆಗೆ ಬಾಕಿ ಉಳಿದಿರುವ ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿಯನ್ನೂ ನೀರು ನಿಲ್ಲಿಸಿದ ಬಳಿಕ ಮತ್ತೇ ಆರಂಭ ಮಾಡುವಂತೆಯೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
ಒಟ್ಟಾರೆ ಕಳೆದ ಒಂದು ವರ್ಷದಿಂದ ನಾಲೆಗೆ ನೀರು ಬಿಡದ ಕಾರಣ ನೀರಿಲ್ಲದೇ ತೀವ್ರ ಸಂಕಷ್ಟ ಎದುರಿಸಿದ್ದ ರೈತರು ಇದೀಗ ನಿಟ್ಟುಸಿರು ಬಿಡುವಂತಾಗಿದೆ.