ಕೋಮುವಾದಿ ಬಿಜೆಪಿ ಮತ್ತು ಅವಕಾಶವಾದಿ ಜೆಡಿಎಸ್ ಸೋಲಿಸಲು ಜನಪರ ಪರ್ಯಾಯ ಜಾತ್ಯಾತೀತ ನೀತಿಗಳ ಹೊಸ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದಾಗಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ತಿಳಿಸಿದರು .
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ,ಯಾವ ಕಾರಣಕ್ಕೆ ಇವರನ್ನು ಸೋಲಿಸಬೇಕು ಎನ್ನುವ ಬಗ್ಗೆ ಹೋಬಳಿ ಮಟ್ಟದಲ್ಲಿ ಸಿಪಿಐಎಂ ವತಿಯಿಂದ ಆಂದೋಲನ ನಡೆಸಲಾಗುತ್ತಿದೆ ಎಂದು ತಿಳಿಸಿದರು .
ಈ ದೇಶದ ಜಾತ್ಯತೀತ ಮೌಲ್ಯ, ಪ್ರಜಾಪ್ರಭುತ್ವ ಉಳಿಯಬೇಕು ಅಂದರೆ ಮೋದಿ ಸರ್ಕಾರವನ್ನು ಸೋಲಿಸಬೇಕಾಗಿದೆ. ಅವರು ಮತ್ತೆ ಪ್ರಧಾನಿಯಾದರೆ ಇಡೀ ಒಕ್ಕೂಟ ವ್ಯವಸ್ಥೆಯೇ ಉಳಿಯುವುದಿಲ್ಲ .ಹಾಗಾಗಿ ಕುಮಾರಸ್ವಾಮಿ ಅವರನ್ನು ಸೋಲಿಸುವಂತೆ ಕರೆ ನೀಡಿದರು. ಚುನಾವಣೆ ಬಾಂಡ್ ಲಜ್ಜೆ ಹೀನವಾಗಿರುವ ಹಗರಣವಾಗಿದೆ. ಮೋದಿಯ ಭರವಸೆ ಬರಿ ಸುಳ್ಳಾಗಿದೆ .ನಾನು ಅಧಿಕಾರಕ್ಕೆ ಬಂದ ನಂತರ ಬೆಲೆ ಇಳಿಕೆ ಮಾಡುವುದಾಗಿ ಭರವಸೆ ನೀಡಿದ್ದು, ಆದರೆ ಈಗ ಬೆಲೆಗಳು ಎರಡು ಪಟ್ಟಾಗಿದೆ ಎಂದು ದೂರಿದರು ಪ್ರಧಾನಿ ಮೋದಿ ಕಾನೂನು ಬದ್ಧ ದರೋಡೆ ಕೋರರಂತೆ ಕೆಲಸ ಮಾಡುತ್ತಿದ್ದಾರೆ .ಹಾಗಾಗಿ ಕಾನೂನು ಬದ್ಧ ದರೋಡೆಕೋರರು ಮತ್ತೆ ಬರಬಾರದು ಎನ್ನುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವುದಾಗಿ ತಿಳಿಸಿದರು .
ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದ ಮೋದಿ, ನ್ಯಾಯಾಲಯದಲ್ಲಿ ಈ ವರದಿ ಅನುಷ್ಠಾನ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ .ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಘೋಷಿಸಿದ್ದರೂ ಜಾರಿಯಾಗಿಲ್ಲ. ಬದಲಿಗೆ ರಸಗೊಬ್ಬರ ಸೇರಿದಂತೆ ಇನ್ನಿತರ ಕೃಷಿ ಪರಿಕರಗಳ ದರ ಏರಿಕೆಯಾಗಿದೆ ಎಂದರು. ಕಾರ್ಪೊರೇಟ್ ಪರ ಕೃಷಿ ನೀತಿಯನ್ನು ಜಾರಿಗೆ ತರಲಾಗಿದೆ. ಕೃಷಿ ಕಾಯ್ದೆ ವಿರೋಧಿಸಿ ರೈತರು ಹೋರಾಟ ನಡೆಸಿದ್ದ ಸಂದರ್ಭದಲ್ಲಿ 700 ಮಂದಿ ರೈತರು ಸಾವನ್ನಪ್ಪಿದ್ದಾರೆ .ಈ ಬಗ್ಗೆ ಮೋದಿ ಕನಿಷ್ಠ ಸೌಜನ್ಯವನ್ನು ತೋರಿಲ್ಲ. ಎಂದು ಕಿಡಿ ಕಾರಿದರು .
ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸಿದ್ದಾರೆ. ಈ ಯೋಜನೆಗೆ ನೀಡುತ್ತಿದ್ದ ಹಣವನ್ನು ಕಡಿತಗೊಳಿಸಿದ್ದಾರೆ .ಕೆಲಸವನ್ನು ನೀಡುತ್ತಿಲ್ಲ .ಒಂದು ವೇಳೆ ಕೆಲಸ ನೀಡಿದರೆ ಹಣ ನೀಡುತ್ತಿಲ್ಲ. ಉದ್ಯೋಗ ಸಿಗದಂತೆ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು .
ಚುನಾವಣಾ ಬಾಂಡ್ ತಂದು ಮೋದಿಯವರು ದರೋಡೆ ಮಾಡಿದ್ದಾರೆ .ಬೇರೆ ದೇಶಗಳಲ್ಲಿ ನಿಷೇಧ ಮಾಡಿದ್ದ ಔಷಧಗಳನ್ನು ನಮ್ಮ ದೇಶದಲ್ಲಿ ಮಾರಾಟ ಮಾಡುವ ಅವಕಾಶ ಕಲ್ಪಿಸಿ ಅವರಿಂದ ಚುನಾವಣಾ ಬಾಂಡ್ ಮೂಲಕ ಹಣ ಪಡೆದಿದ್ದಾರೆ .ಐಟಿ, ಇಡಿ ಸಂಸ್ಥೆಗಳ ಮೂಲಕ ಬೆದರಿಸಿ ಹಣ ಪಡೆದಿದ್ದಾರೆ .ಆದ್ದರಿಂದ ಕೋಮುವಾದಿ ಮತ್ತು ಭ್ರಷ್ಟ ಬಿಜೆಪಿಯನ್ನು ಮತ್ತು ಅವಕಾಶವಾದಿ ಜೆಡಿಎಸ್ ಪಕ್ಷವನ್ನು ಸೋಲಿಸುವಂತೆ ಮನವಿ ಮಾಡಿದರು .
ಪತ್ರಿಕಾಗೋಷ್ಠಿಯಲ್ಲಿ ಪುಟ್ಟಮಾದು ,ಸಿ ಕುಮಾರಿ ,ದೇವಿ, ಭರತ್ ರಾಜ್ ಉಪಸ್ಥಿತರಿದ್ದರು.