ಕುಮಾರಸ್ವಾಮಿ ಬೆಂಬಲಿಸಿದರೆ ರೈತಪರ ಕೆಲಸ: ಅಬ್ಬಾಸ್ ಅಲಿ ಬೋಹ್ರಾ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಬೆಂಬಲಿಸಿದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಬಿಜೆಪಿ ಮುಖಂಡ ಅಬ್ಬಾಸ್ ಅಲಿ ಬೋಹ್ರಾ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಜನತೆ ಕುಮಾರಸ್ವಾಮಿ ಪರವಾಗಿ ಮತ ಚಲಾಯಿಸಿದರೆ, ಗೆಲುವು ಸಾಧಿಸಲಿದ್ದಾರೆ. ಹಿರಿಯ ರಾಜಕಾರಣಿಗಳಾದ ನಿತ್ಯ ಸಚಿವ ದಿವಂಗತ ಕೆ.ವಿ.ಶಂಕರಗೌಡ, ಎಚ್.ಕೆ.ವೀರಣ್ಣಗೌಡ, ಎಂ.ಕೆ.ಶಿವನಂಜಪ್ಪ, ಕೆ.ಎನ್.ನಾಗೇಗೌಡ, ಎಸ್.ಡಿ.ಜಯರಾಂ ಅವರಂತೆ ಅಭಿವೃದ್ಧಿಪಥದತ್ತ ಕೊಂಡೊಯ್ಯಲಿದ್ದಾರೆ ಎಂದರು.
ಪ್ರಸ್ತುತ ಬರ, ನೀರಿನ ಸಮಸ್ಯೆಯಿಂದ ರೈತರು ಕಂಗಾಲಾಗಿದ್ದಾರೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿಲ್ಲ. ಕುಡಿಯಲು ಹಾಗೂ ಬೆಳೆಗಳಿಗೆ ನೀರಿಲ್ಲದಿರುವುದರಿಂದ ಇಲ್ಲಿನ ಜನರು ಪರದಾಡುವ ಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಸರ್ಕಾರ ಇದ್ದರೂ ಸಹ ರೈತರ ಸಮಸ್ಯೆಗೆ ಯಾವ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಶುದ್ಧ ಕುಡಿಯುವ ನೀರು ಸಿಗದಿರುವುದರಿಂದ ಕಲುಷಿತ ನೀರಿನ ಮೋರೆ ಹೋಗಿದ್ದಾರೆ. ಇದರಿಂದ ಕಾಲರಾ, ಡೆಂಗ್ಯೂ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳು ಜನರನ್ನು ಬಾಧಿಸುತ್ತಿದೆ ಎಂದು ದೂರಿದರು.
ರೈತರು ಬೆಳೆನಷ್ಟದಿಂದ, ಸಾಲಗಾರರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನಮ್ಮ ನೀರು ನಮಗೆ ಇಲ್ಲದಂತಾಗಿದೆ. ಕಾಂಗ್ರೆಸ್ ಸರ್ಕಾರ ತಮಿಳುನಾಡಿನ ಓಲೈಕೆಗಾಗಿ ಕಾವೇರಿ ನೀರನ್ನು ಕದ್ದುಮುಚ್ಚಿ ಅಲ್ಲಿಗೆ ಹರಿಸುತ್ತಾ, ಇಲ್ಲಿನ ರೈತರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ದೂರಿದರು.
ಗೋಷ್ಠಿಯಲ್ಲಿ ಮುಖಂಡರಾದ ಸಿದ್ದರಾಜು, ಸಿ.ಟಿ.ಮಂಜುನಾಥ್, ಮಹಾಂತಪ್ಪ ಮತ್ತಿತರರಿದ್ದರು.